ಹೆಗ್ಗಡೆ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾನಹಾನಿಕರ ಹೇಳಿಕೆ: ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾದ ಸೋಮನಾಥ ನಾಯಕ್
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಹಾಗೂ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ನ್ಯಾಯಾಲಯದ ಆದೇಶ ಉಲ್ಲಂಘಿಸಿ ಮಾನಹಾನಿಕರ ಹೇಳಿಕೆಗಳನ್ನು ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಶಿಕ್ಷೆಗೆ ಒಳಗಾಗಿರುವ ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಸೋಮವಾರ ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಹಾಗೂ ಡಾ.ಡಿ.ವೀರೇಂದ್ರ ಹೆಗ್ಗಡೆ ವಿರುದ್ಧ ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ಬೆಳ್ತಂಗಡಿಯ ಸಿವಿಲ್ ನ್ಯಾಯಾಲಯವು ಆರೋಪಿ ಸೋಮನಾಥ ನಾಯಕ್ ಅವರಿಗೆ 3 ತಿಂಗಳ ಜೈಲು ಶಿಕ್ಷೆ, ಹಾಗೂ ಧರ್ಮಸ್ಥಳ ಕ್ಷೇತ್ರಕ್ಕೆ 4.5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿತ್ತು. ಸೋಮನಾಥ್ ನಾಯಕ್‌ರ ಬಂಧನಕ್ಕೆ ವಾರೆಂಟ್ ಕೂಡಾ ಜಾರಿಗೊಳಿಸಿತ್ತು. ಈ ಆದೇಶದ ವಿರುದ್ಧ ನಾಯಕ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರೂ ಅದು ವಜಾಗೊಂಡಿತ್ತು. ಬಳಿಕ ಅವರು ಸುಪ್ರೀಂ ಕೋರ್ಟ್ ಮೆಟ್ಟಲೇರಿದ್ದರು.
ವಾದ-ಪ್ರತಿವಾದ ಆಲಿಸಿದ ಸುಪ್ರೀಂ ಕೋರ್ಟ್, ಕರ್ನಾಟಕ ಹೈಕೋರ್ಟ್ ಹಾಗೂ ಬೆಳ್ತಂಗಡಿಯ ನ್ಯಾಯಾಲಯಗಳು ನೀಡಿದ ತೀರ್ಪುಗಳಿಗೆ ತಾನು ಮಧ್ಯ ಪ್ರವೇಶಿಸುವ ಯಾವುದೇ ಕಾರಣಗಳು ಕಂಡುಬರುತ್ತಿಲ್ಲ ಎಂದು ನಾಯಕ್ ರ ಕ್ಷಮಾಪಣೆಯನ್ನೂ ತಿರಸ್ಕರಿಸಿ ಅರ್ಜಿಯನ್ನು ವಜಾಗೊಳಿಸಿ ಅ.19ರಂದು ತೀರ್ಪಿತ್ತಿದೆ. ಈ ಹಿನ್ನೆಲೆಯಲ್ಲಿ ಸೋಮನಾಥ ನಾಯಕ್ ಇಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಸೋಮನಾಥ ನಾಯಕ್ ಅವರು ನ್ಯಾಯಾಲಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರೊಂದಿಗೆ ಮಾಜಿ ಶಾಸಕ ಕೆ ವಸಂತ ಬಂಗೇರ, ಚಿಂತಕ ಲಕ್ಷ್ಮೀಶ ತೋಳ್ಪಡಿತ್ತಾಯ, ರಂಜನ್ ರಾವ್, ಕಾರ್ಮಿಕ ಮುಖಂಡ ಬಿ.ಎಂ ಭಟ್, ಡಿ.ಎಸ್.ಎಸ್. ಮುಖಂಡರುಗಳಾದ ಚಂದು ಎಲ್, ಬಿ.ಕೆ.ವಸಂತ, ಸಂಜೀವ ಆರ್, ನೇಮಿರಾಜ ಕಿಲ್ಲೂರು, ರಮೇಶ್ ಆರ್, ವಿವಿಧ ಸಂಘಟನೆಗಳ ಮುಖಂಡರುಗಳಾದ ಕರಿಯ ಧರ್ಮಸ್ಥಳ, ಸೋಮಶೇಖರ್ ದೇವಸ್ಯ, ಕೆ ಸೋಮ, ಚಂದಪ್ಪ ಧರ್ಮಸ್ಥಳ, ವಿಠಲ ಧರ್ಮಸ್ಥಳ , ಯಶವಂತ ಬಾಳಿಗ, ಪ್ರಭಾಕರ ಶಾಂತಿಕೋಡಿ, ಬಾಬಿ ಮಾಲಾಡಿ, ಶೇಖರ್ ಎಲ್, ಸಂಜೀವ ಆರ್., ಶ್ರೀನಿವಾಸ ಉಜಿರೆ ಹಾಗೂ ಇತರರು ಇದ್ದು ಸೋಮನಾಥ್ ನಾಯಕ್ ಅವರಿಗೆ ಬೆಂಬಲ ಘೋಷಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka