ಅಪರೂಪದ ಪ್ರಕರಣ: 23 ವರ್ಷದ ದಿವ್ಯಾಂಗ ಯುವತಿಯ ಗರ್ಭಾಶಯ ತೆಗೆಯಲು ಹೈಕೋರ್ಟ್ ಮಹತ್ವದ ಅನುಮತಿ - Mahanayaka

ಅಪರೂಪದ ಪ್ರಕರಣ: 23 ವರ್ಷದ ದಿವ್ಯಾಂಗ ಯುವತಿಯ ಗರ್ಭಾಶಯ ತೆಗೆಯಲು ಹೈಕೋರ್ಟ್ ಮಹತ್ವದ ಅನುಮತಿ

karnataka high court.jpg
23/06/2026

ಬೆಂಗಳೂರು: ತೀವ್ರ ದಿವ್ಯಾಂಗತೆಯಿಂದಾಗಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಅಸಮರ್ಥಳಾಗಿರುವ 23 ವರ್ಷದ ಯುವತಿಯ ಆರೋಗ್ಯದ ಹಿತದೃಷ್ಟಿಯಿಂದ, ಆಕೆಯ ಗರ್ಭಾಶಯವನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲು ಕರ್ನಾಟಕ ಹೈಕೋರ್ಟ್ ಅಪರೂಪದ ಹಾಗೂ ಮಹತ್ವದ ಆದೇಶ ನೀಡಿದೆ. ನಗರದ ವಾಣಿ ವಿಲಾಸ್ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ನಡೆಸುವಂತೆ ನ್ಯಾಯಾಲಯ ಸೂಚಿಸಿದೆ.

ಯುವತಿಯು ದಿನನಿತ್ಯದ ಮೂಲಭೂತ ಚಟುವಟಿಕೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಸ್ವತಂತ್ರವಾಗಿ ಬದುಕಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾಳೆ. ಆಕೆಗೆ ಅನಿಯಮಿತ ಮಾಸಿಕ ಋತುಚಕ್ರದ ಸಮಸ್ಯೆಯಿದ್ದು, ಋತುಸ್ರಾವದ ಸಮಯದಲ್ಲಿ ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಆಕೆಗೆ ಪದೇ ಪದೇ ಸೋಂಕು (Infection), ಜ್ವರ ಹಾಗೂ ಇತರೆ ಗಂಭೀರ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ ಎಂದು ಪೋಷಕರು ನ್ಯಾಯಾಲಯದ ಗಮನಕ್ಕೆ ತಂದಿದ್ದರು. ತಾವು ಕೂಡ ವಯೋವೃದ್ಧರಾಗುತ್ತಿದ್ದು, ಮಗಳ ಏಕೈಕ ಆರೈಕೆದಾರರಾಗಿ ದೈಹಿಕ ಮತ್ತು ಮಾನಸಿಕ ಒತ್ತಡ ಎದುರಿಸುತ್ತಿರುವುದಾಗಿ ಪೋಷಕರು ಮನವಿಯಲ್ಲಿ ಉಲ್ಲೇಖಿಸಿದ್ದರು.

ವೈದ್ಯಕೀಯ ಮಂಡಳಿಯ ವರದಿಯ ಪ್ರಕಾರ, ಯುವತಿಯು ‘ಗ್ಲೋಬಲ್ ಡೆವಲಪ್ಮೆಂಟ್ ಡಿಲೆ’ ಮತ್ತು ‘ಮಾಡರೇಟ್ ಪರ್ಮನೆಂಟ್ ಇಂಟಲೆಕ್ಚುವಲ್ ಆಂಡ್ ಡೆವಲಪ್ಮೆಂಟಲ್ ಡಿಸಾಬಿಲಿಟಿ’ ಸಮಸ್ಯೆಯಿಂದ ಬಳಲುತ್ತಿದ್ದಾಳೆ. 23 ವರ್ಷ ವಯಸ್ಸಾಗಿದ್ದರೂ ಆಕೆಯ ಮಾನಸಿಕ ಹಾಗೂ ಸಾಮಾಜಿಕ ವಯಸ್ಸು ಕೇವಲ 5 ವರ್ಷ 4 ತಿಂಗಳ ಮಗುವಿನ ಮಟ್ಟದಲ್ಲಿದೆ. ಆಕೆಯ ಐಕ್ಯೂ (IQ) ಕೇವಲ 36 ಆಗಿದ್ದು, ಶೇಕಡಾ 75 ರಷ್ಟು ಶಾಶ್ವತ ಅಂಗವೈಕಲ್ಯ ಹೊಂದಿದ್ದಾಳೆ. ಇದರೊಂದಿಗೆ ಆಕೆಗೆ ಅಪಸ್ಮಾರ (Seizures) ಸಮಸ್ಯೆಯೂ ಇರುವುದು ದೃಢಪಟ್ಟಿದೆ.

ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠವು ಈ ಮಹತ್ವದ ಆದೇಶ ಪ್ರಕಟಿಸಿದೆ. “ಈ ಶಸ್ತ್ರಚಿಕಿತ್ಸೆಯನ್ನು ಯುವತಿಯ ಆರೋಗ್ಯ, ವೈಯಕ್ತಿಕ ಸ್ವಚ್ಛತೆ, ಘನತೆ, ಸುರಕ್ಷತೆ ಮತ್ತು ಜೀವನದ ಗುಣಮಟ್ಟವನ್ನು ಸುಧಾರಿಸುವ ಮಾನವೀಯ ಉದ್ದೇಶದಿಂದಲೇ ಶಿಫಾರಸು ಮಾಡಲಾಗಿದೆ. ಇದು ಜನಸಂಖ್ಯೆ ನಿಯಂತ್ರಣ ಅಥವಾ ದಿವ್ಯಾಂಗರ ಹಕ್ಕುಗಳನ್ನು ಕಸಿದುಕೊಳ್ಳುವ ಕ್ರಮವಲ್ಲ, ಬದಲಿಗೆ ಆಕೆಯ ಕಲ್ಯಾಣಕ್ಕಾಗಿ ತೆಗೆದುಕೊಳ್ಳಲಾದ ನಿರ್ಧಾರ” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

ಇತ್ತೀಚಿನ ಸುದ್ದಿ