ಭೀಕರ ರಸ್ತೆ ಅಪಘಾತ: ರಸ್ತೆ ಬದಿ ನಿಂತಿದ್ದ ವ್ಯಕ್ತಿಯ ದಾರುಣ ಸಾವು

ಮೂಡಿಗೆರೆ: ತಾಲ್ಲೂಕಿನ ಗೋಣಿಬೀಡು ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ವ್ಯಕ್ತಿ ಪ್ರಾಣ ಕಳೆದುಕೊಂಡಿದ್ದಾರೆ. ಗೋಣಿಬೀಡು ಚರ್ಚ್ ಹಾಲ್ ಸಮೀಪ ಭಾನುವಾರ ಸಂಜೆ ಸುಮಾರು 4 ಗಂಟೆಯ ಸಮಯದಲ್ಲಿ ಗೂಡ್ಸ್ ಆಟೋ ಒಂದು ರಸ್ತೆ ಬದಿಯಲ್ಲಿ ನಿಂತಿದ್ದ ಜನ್ನಾಪುರ ಸಮೀಪದ ಹೊಯ್ಸಳಲು ಗ್ರಾಮದ ಸುಧಾಕರ್ (36 ವರ್ಷ) ಎಂಬುವವರಿಗೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡಿದ್ದ ಸುಧಾಕರ್ ಕೊನೆಯುಸಿರೆಳೆದಿದ್ದಾರೆ.
ಹಾಸನದಿಂದ ಮಂಗಳೂರು ಕಡೆಗೆ ತರಕಾರಿ ಸಾಗಿಸುತ್ತಿದ್ದ ಮಿನಿ ಗೂಡ್ಸ್ ಗಾಡಿ ರಸ್ತೆ ಬೈಕ್ ಒಂದನ್ನು ತಪ್ಪಿಸುವ ಪ್ರಯತ್ನದಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಸುಧಾಕರ್ ಅವರಿಗೆ ಡಿಕ್ಕಿ ಹೊಡೆದಿದ್ದು, ನಂತರ ಎದುರಿನಿಂದ ಬರುತ್ತಿದ್ದ ಪ್ರವಾಸಿಗರ ಕಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸುಧಾಕರ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದವರಿಗೆ ತೀವ್ರ ಗಾಯಗಳಾಗಿವೆ. ಅವರನ್ನು ಮೂಡಿಗೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕರೆದೊಯ್ಯಲಾಗಿದೆ.
ಮೃತ ಸುಧಾಕರ್ ಜನ್ನಾಪುರ ಸಮೀಪದ ಹೊಯ್ಸಳಲು ಗ್ರಾಮದವರಾಗಿದ್ದು, ಚಿನ್ನಿಗ ಗ್ರಾಮ ಪಂಚಾಯಿತಿ ಉದ್ಯೋಗಿಯಾಗಿದ್ದರು. ಭಾನುವಾರ ಚಿಂತನ ಫೌಂಡೇಷನ್ ವತಿಯಿಂದ ಗೋಣಿಬೀಡಿನ ಸಾಲುಮರದಲ್ಲಿ ಏರ್ಪಡಿಸಿದ್ದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಊರಿಗೆ ಮರಳಲು ಬಸ್ ಕಾಯುತ್ತಾ ನಿಂತಿದ್ದರು ಎನ್ನಲಾಗಿದೆ.
ಸುಧಾಕರ್ ಅವರು ಸಹೃದಯಿ ವ್ಯಕ್ತಿಯಾಗಿದ್ದರು, ಎಲ್ಲರ ಪ್ರೀತಿವಿಶ್ವಾಸ ಗಳಿಸಿದ್ದರು. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಇತ್ತೀಚೆಗೆ ತಾನೇ ಹೊಸ ಮನೆಯ ಗೃಹಪ್ರವೇಶ ನೆರವೇರಿಸಿದ್ದರು. ಸುಧಾಕರ್ ನಿಧನಕ್ಕೆ ಜನ್ನಾಪುರ ಸುತ್ತಮುತ್ತಲ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ. ಗೋಣಿಬೀಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD