ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದಿದ್ದಾತ, ಪತ್ನಿಯನ್ನು ಇರಿದು ಕೊಂದ: ಅಮೆರಿಕದಲ್ಲಿ ಪತಿಯ ಬಂಧನ
ಶಿಕಾಗೋ / ಅಹಮದಾಬಾದ್: ಕೆಲ ತಿಂಗಳ ಹಿಂದೆ ಪತ್ನಿ ತನ್ನನ್ನು ತೊರೆದು ಹೋದಾಗ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವೀಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದ ಗುಜರಾತ್ ಮೂಲದ ವ್ಯಕ್ತಿಯೊಬ್ಬ, ಈಗ ಅಮೆರಿಕದ ಶಿಕಾಗೋದಲ್ಲಿ ತನ್ನ ಪತ್ನಿಯನ್ನೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಗುಜರಾತ್ ನ ಮೆಹ್ಸಾನಾ ಜಿಲ್ಲೆಯ ಕಡಿ ತಾಲೂಕಿನ ನಿವಾಸಿ, 32 ವರ್ಷದ ಯುವಕನನ್ನು ಶಿಕಾಗೋ ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಮೊದಲ ಹಂತದ ಕೊಲೆ (First-Degree Murder) ಪ್ರಕರಣ ದಾಖಲಿಸಿದ್ದಾರೆ.
ಶಿಕಾಗೋದ ಆಲ್ಬನಿ ಪಾರ್ಕ್ನ ಅಪಾರ್ಟ್ಮೆಂಟ್ ಒಂದರಲ್ಲಿ 32 ವರ್ಷದ ಮಹಿಳೆ ಕುತ್ತಿಗೆಗೆ ತೀವ್ರ ಚಾಕು ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿದರೂ, ಆಕೆ ಈಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.
ಕೊಲೆ ನಡೆದ ಸುಮಾರು 9 ಗಂಟೆಗಳ ನಂತರ ಆರೋಪಿಯನ್ನು ಶಿಕಾಗೋದ ‘ಓಹೇರ್ ಇಂಟರ್ನ್ಯಾಷನಲ್ ಏರ್ಪೋರ್ಟ್’ (O’Hare International Airport) ನಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕುಟುಂಬಸ್ಥರು ನೀಡಿರುವ ಮಾಹಿತಿಯ ಪ್ರಕಾರ, ಈ ದಂಪತಿಗಳು ಕಳೆದ 8 ವರ್ಷಗಳ ಹಿಂದೆ ಅಮೆರಿಕಕ್ಕೆ ತೆರಳಿ ನೆಲೆಸಿದ್ದರು. ಇತ್ತೀಚೆಗೆ ದಂಪತಿಯ ನಡುವೆ ವೈಮನಸ್ಸು ಉಂಟಾಗಿತ್ತು. ಆರೋಪಿಯು ಕೊಲೆ ಮಾಡುವ ಕೆಲವೇ ದಿನಗಳ ಮೊದಲು ತನ್ನ 5 ವರ್ಷದ ಮಗಳನ್ನು ಭಾರತದಲ್ಲಿದ್ದ ತನ್ನ ಸಂಬಂಧಿಕರ ಬಳಿಗೆ ಕಳುಹಿಸಿಕೊಟ್ಟಿದ್ದ.
ಕೊಲೆಯಾದ ದಿನ ಪತ್ನಿಗೆ ಕರೆ ಮಾಡಿ, “ಮಗಳನ್ನು ಕರೆದುಕೊಂಡು ಹೋಗು” ಎಂದು ಸುಳ್ಳು ಹೇಳಿ ಅಪಾರ್ಟ್ಮೆಂಟ್ ಗೆ ಕರೆಸಿಕೊಂಡಿದ್ದ. ನಂತರ ಆಕೆಯ ಮೇಲೆ ಚಾಕುವಿನಿಂದ ದಾಳಿ ನಡೆಸಿ ಹತ್ಯೆ ಮಾಡಿದ್ದಾನೆ.
ಆತ್ಮಹತ್ಯೆ ವೀಡಿಯೊ ಹಂಚಿಕೊಂಡಿದ್ದ ಆರೋಪಿ:
ಈ ವರ್ಷದ ಮೇ ತಿಂಗಳಲ್ಲಿ ಪತ್ನಿ ತನ್ನನ್ನು ಬಿಟ್ಟು ಹೋದಾಗ, ಆರೋಪಿಯು ಗುಜರಾತಿಯಲ್ಲಿ ವೀಡಿಯೊ ಮಾಡಿ “ನನಗೆ ತೀವ್ರ ಮಾನಸಿಕ ಕಿರುಕುಳವಾಗುತ್ತಿದೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದು ಹೇಳಿಕೊಂಡು ಸಂಬಂಧಿಕರ ನೆರವು ಕೋರಿದ್ದ. ನಂತರ ಕೆಲ ದಿನಗಳ ಕಾಲ ಪತ್ನಿ ಮರಳಿದ್ದರೂ, ಮತ್ತೆ ಇಬ್ಬರ ನಡುವೆ ಜಗಳವಾಗಿ ಆಕೆ ದೂರವಾಗಿದ್ದಳು. ಇದರಿಂದ ಆಕ್ರೋಶಗೊಂಡ ಪತಿ ಈ ಭೀಕರ ಕೃತ್ಯ ಎಸಗಿದ್ದಾನೆ. ಶಿಕಾಗೋ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD



























