ಪತ್ನಿಯ ಆಸೆ ಪೂರೈಸಲು ಕಳ್ಳತನಕ್ಕಿಳಿದ ಪತಿ ಈಗ ಪೊಲೀಸರ ಅತಿಥಿ!

ಬೆಂಗಳೂರು: ಪತ್ನಿಯ ಆಸೆ ಪೂರೈಸಲು ಪತಿಯೋರ್ವ ಕಳ್ಳತನಕ್ಕೆ ಇಳಿದು ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ರಾಜಧಾನಿ ಬೆಂಗಳೂರಲ್ಲಿ ನಡೆದಿದೆ.
ಮಹದೇವಪುರದ ದೊಡ್ಡನೆಕ್ಕುಂದಿ ಬಳಿ ಈ ಘಟನೆ ನಡೆದಿದ್ದು, ಮನೆ ಕೆಲಸಕ್ಕೆಂದು ಅಸ್ಸಾಂ ಮೂಲದ ಸುರೇಂದ್ರ ಎಂಬಾತನನ್ನು ಮುಂಬೈಯ ಉದ್ಯಮಿ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ನೇಮಿಸಿಕೊಂಡಿದ್ದರು.
3 ವರ್ಷಗಳಿಂದ ಸ್ವಾಮಿ ನಿಷ್ಠೆಯಿಂದ ಕೆಲಸ ಮಾಡಿದ್ದ ಸುರೇಂದ್ರನಿಗೆ ಪ್ರತಿ ತಿಂಗಳು 18 ಸಾವಿರ ಸಂಬಳವನ್ನೂ ನೀಡಲಾಗುತ್ತಿತ್ತು. ಈ ನಡುವೆ ಉದ್ಯಮಿ ಕುಟುಂಬ ಇತ್ತೀಚೆಗೆ ಮುಂಬೈಗೆ ಹೋಗಿತ್ತು. ಈ ವೇಳೆ ಸುರೇಂದ್ರ ಉದ್ಯಮಿ ಮನೆಯಲ್ಲಿದ್ದ 50 ಲಕ್ಷ ರೂಪಾಯಿ ಮೌಲ್ಯದ 502 ಗ್ರಾಂ. ಚಿನ್ನಾಭರಣ ಮತ್ತು 99.5 ಗ್ರಾಂ ಡೈಮಂಡ್ ಹಾಗೂ ಅಮೇರಿಕನ್ ಡಾಲರ್ ಗಳನ್ನ ಕದ್ದು ವಿಜಯವಾಡಕ್ಕೆ ಪರಾರಿಯಾಗಿದ್ದಾನೆ.
ಸುರೇಂದ್ರ ಹಣ ಕದ್ದು ವಿಜಯವಾಡಕ್ಕೆ ಹೋಗಿದ್ದಾನೆ. ಅಲ್ಲಿ ಕದ್ದ ಚಿನ್ನ, ಡೈಮಂಡ್ ಮಾರಲು ಆಗದೆ ರೂಂ ಒಂದರಲ್ಲಿ ಬಚ್ಚಿಟ್ಟಿದ್ದ. ಸದ್ಯ ಮಹದೇವಪುರ ಪೊಲೀಸರು ಆರೋಪಿಯನ್ನ ಪತ್ತೆ ಹಚ್ಚಿ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಪತ್ನಿಯ ಆಸೆ ಪೂರೈಸಲು ಕದ್ದ!:
ಬೆಂಗಳೂರಲ್ಲಿ ಅಷ್ಟು ವರ್ಷದಿಂದ ಬರೀ 18 ಸಾವಿರ ರೂಪಾಯಿ ಸಂಬಳ ತಗೊಂಡು ಹೇಗೆ ಜೀವನ ಮಾಡೋಕೆ ಆಗುತ್ತೆ ಅಂತ ಸುರೇಂದ್ರನ ಪತ್ನಿ ಪದೇ ಪದೇ ಆತನಿಗೆ ಅವಮಾನ ಮಾಡುತ್ತಿದ್ದಳಂತೆ! ಇದರಿಂದ ರೋಸಿ ಹೋಗಿ ಒಂದೇ ಬಾರಿಗೆ ಹಣ ಮಾಡಬೇಕು ಎನ್ನುವ ಕಾರಣಕ್ಕೆ ಈ ಕೃತ್ಯ ಎಸಗಿರೋದಾಗಿ ಸುರೇಂದ್ರ ಹೇಳಿದ್ದಾನೆ ಎಂದು ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth