ರಾಜಸ್ಥಾನ ಎಲೆಕ್ಷನ್ ಹವಾ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಔಟ್; ಸರ್ದಾರ್ ಪುರದಿಂದ ಸಿಎಂ ಗೆಹ್ಲೋಟ್ ಸ್ಪರ್ಧೆ ಖಚಿತ - Mahanayaka

ರಾಜಸ್ಥಾನ ಎಲೆಕ್ಷನ್ ಹವಾ: ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಔಟ್; ಸರ್ದಾರ್ ಪುರದಿಂದ ಸಿಎಂ ಗೆಹ್ಲೋಟ್ ಸ್ಪರ್ಧೆ ಖಚಿತ

22/10/2023

ರಾಜಸ್ಥಾನದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ 33 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಶನಿವಾರ ಬಿಡುಗಡೆ ಮಾಡಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಸರ್ದಾರ್ ಪುರದಿಂದ ಮತ್ತು ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಅವರನ್ನು ಟೋಂಕ್ ನಿಂದ ಕಣಕ್ಕಿಳಿಸಲಾಗಿದೆ ಎಂದು ಕಾಂಗ್ರೆಸ್ ತನ್ನ ಪಟ್ಟಿಯಲ್ಲಿ ಘೋಷಿಸಿದೆ.

ಮೊದಲ ಪಟ್ಟಿಯಲ್ಲಿ ಸಚಿನ್ ಪೈಲಟ್ ಬಣದ ನಾಲ್ವರು ಸದಸ್ಯರಿಗೆ ಟಿಕೆಟ್ ಸಿಕ್ಕಿದೆ. ವಿಧಾನಸಭಾ ಸ್ಪೀಕರ್ ಸಿಪಿ ಜೋಶಿ ಅವರನ್ನು ನಾಥದ್ವಾರದಿಂದ ಕಣಕ್ಕಿಳಿಸಲಾಗಿದ್ದು, ಆರ್ ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋಟಾಸಾರಾ ಅವರನ್ನು ಲಕ್ಷ್ಮಣಗಢದಿಂದ ಕಣಕ್ಕಿಳಿಸಲಾಗಿದೆ.

ದೌಸಾದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಗೆಹ್ಲೋಟ್, ಜಿಲ್ಲೆಯಲ್ಲಿರುವ ಸದ್ಯದ ಎಲ್ಲಾ ಹಾಲಿ ಶಾಸಕರಿಗೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು. ದೌಸಾ ಜಿಲ್ಲೆಯ ಕಾಂಗ್ರೆಸ್ ನ ಹಾಲಿ ಶಾಸಕರಾದ ಪರ್ಸಾದಿ ಲಾಲ್ ಮೀನಾ, ಮಮತಾ ಭೂಪೇಶ್, ಮುರಾರಿ ಲಾಲ್ ಮೀನಾ, ಜಿಆರ್ ಖತಾನಾ ಅವರನ್ನು ಹೆಸರಿಸಿದ ಗೆಹ್ಲೋಟ್, ತಮಗೆ ಮತ ಚಲಾಯಿಸುವಂತೆ ಜನರಿಗೆ ಮನವಿ ಮಾಡಿದರು. ಇದೇ ವೇಳೆ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿರುವ ಸ್ವತಂತ್ರ ಶಾಸಕ ಓಂಪ್ರಕಾಶ್ ಹುಡ್ಲಾ ಅವರನ್ನೂ ಮುಖ್ಯಮಂತ್ರಿ ಹೊಗಳಿದರು.

ಮುಖ್ಯಮಂತ್ರಿಗಳು ತಮ್ಮ ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಇದೇ ವೇಳೆ ಎತ್ತಿ ತೋರಿಸಿದರು. ಅಲ್ಲದೇ ಸರ್ಕಾರದ ಕಾರ್ಯಕ್ಷಮತೆಯ ಮೇಲೆ ಚುನಾವಣೆಯನ್ನು ಎದುರಿಸಲಾಗುವುದು ಎಂದು ಹೇಳಿದರು.

ದೌಸಾದಲ್ಲಿ ಒಟ್ಟು ಐದು ವಿಧಾನಸಭಾ ಸ್ಥಾನಗಳಿವೆ. ಅವುಗಳಲ್ಲಿ ನಾಲ್ಕು ಕಾಂಗ್ರೆಸ್ ವಶದಲ್ಲಿವೆ ಮತ್ತು ಒಂದು ಸ್ವತಂತ್ರ ಶಾಸಕ ಹುಡ್ಲಾ ಅವರ ವಶದಲ್ಲಿದೆ. ರಾಜಸ್ಥಾನದಲ್ಲಿ ನವೆಂಬರ್ 25ರಂದು ಚುನಾವಣೆ ನಡೆಯಲಿದೆ. ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

ಇತ್ತೀಚಿನ ಸುದ್ದಿ