ಇಸ್ರೇಲ್ ಮೇಲೆ ಹಿಜ್ಬುಲ್ಲಾ ದಾಳಿ: ಭಾರತೀಯ ಪ್ರಜೆ ಸಾವು, ಇಬ್ಬರಿಗೆ ಗಾಯ

ಉತ್ತರ ಇಸ್ರೇಲ್ ನ ಲೆಬನಾನ್-ಇಸ್ರೇಲ್ ಗಡಿಯಲ್ಲಿ ಹಿಜ್ಬುಲ್ಲಾ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ ಓರ್ವ ಭಾರತೀಯ ಪ್ರಜೆ ಸಾವನ್ನಪ್ಪಿ, ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿ ಮಂಗಳವಾರ ಪ್ರಕಟಿಸಿದೆ.
ಮೃತನನ್ನು ಕೇರಳ ಮೂಲದ 31 ವರ್ಷದ ವ್ಯಕ್ತಿ ಕೇರಳದ ಕೊಲ್ಲಂ ಜಿಲ್ಲೆಯ ಪತ್ರೋಸ್ ಮ್ಯಾಕ್ಸ್ವೆಲ್ ಅವರ ಪುತ್ರ ನಿಬಿನ್ ಮ್ಯಾಕ್ಸ್ವೆಲ್ (31) ಎಂದು ಗುರುತಿಸಲಾಗಿದೆ. ಗಾಯಗೊಂಡ ಇತರ ಇಬ್ಬರು ಸಹ ಕೇರಳದವರು ಎಂದು ವರದಿಗಳು ದೃಢಪಡಿಸಿವೆ. ನಿಬಿನ್ ಮ್ಯಾಕ್ಸ್ವೆಲ್ ಎರಡು ತಿಂಗಳ ಹಿಂದೆ ಇಸ್ರೇಲ್ ತಲುಪಿದ್ದು, ಅಲ್ಲಿನ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದರು.
ಇಸ್ರೇಲ್ ರಾಯಭಾರ ಕಚೇರಿಯು ತನ್ನ ಹೇಳಿಕೆಯಲ್ಲಿ, “ಶಿಯಾ ಭಯೋತ್ಪಾದಕ ಸಂಘಟನೆ ಹಿಜ್ಬುಲ್ಲಾ ನಿನ್ನೆ ಮಧ್ಯಾಹ್ನ ಉತ್ತರದ ಗ್ರಾಮವಾದ ಮಾರ್ಗಲಿಯಟ್ ನಲ್ಲಿ ತೋಟವನ್ನು ನೋಡಿಕೊಳ್ಳುತ್ತಿದ್ದ ಶಾಂತಿಯುತ ಕೃಷಿ ಕಾರ್ಮಿಕರ ಮೇಲೆ ನಡೆಸಿದ ಹೇಡಿತನದ ಭಯೋತ್ಪಾದಕ ದಾಳಿಯಿಂದಾಗಿ ಓರ್ವ ಭಾರತೀಯ ಪ್ರಜೆಯ ಸಾವು ಮತ್ತು ಇತರ ಇಬ್ಬರು ಗಾಯಗೊಂಡಿರುವುದು ನಮಗೆ ತೀವ್ರ ದಿಗ್ಭ್ರಮೆ ಮತ್ತು ದುಃಖವನ್ನುಂಟುಮಾಡಿದೆ” ಎಂದಿದೆ.
“ಇಸ್ರೇಲಿ ವೈದ್ಯಕೀಯ ಸಂಸ್ಥೆಗಳು ಗಾಯಾಳುಗಳ ಸೇವೆ ಮಾಡುತ್ತಿದೆ. ಅವರು ನಮ್ಮ ಅತ್ಯುತ್ತಮ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭಯೋತ್ಪಾದನೆಯಿಂದಾಗಿ ಗಾಯಗೊಂಡ ಅಥವಾ ಕೊಲ್ಲಲ್ಪಟ್ಟ ಇಸ್ರೇಲಿ ಅಥವಾ ವಿದೇಶಿ ಪ್ರಜೆಗಳನ್ನು ಇಸ್ರೇಲ್ ಸಮಾನವಾಗಿ ಪರಿಗಣಿಸುತ್ತದೆ. ಕುಟುಂಬಗಳನ್ನು ಬೆಂಬಲಿಸಲು ಮತ್ತು ಅವರಿಗೆ ಸಹಾಯ ನೀಡಲು ನಾವು ಇರುತ್ತೇವೆ. ನಾಗರಿಕ ನಷ್ಟದಲ್ಲಿ ಉತ್ತಮ ಅನುಭವ ಹೊಂದಿರುವ ನಮ್ಮ ದೇಶಗಳು, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳುವ ಮತ್ತು ಮೃತರ ಕುಟುಂಬಕ್ಕೆ ಸಾಂತ್ವನ ನೀಡುವ ಭರವಸೆಯಲ್ಲಿ ಒಗ್ಗಟ್ಟಾಗಿ ನಿಂತಿವೆ” ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರ ಕಚೇರಿ ತಿಳಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth