ನಿರ್ಮಾಣವಾಯಿತು ಹೊಸ ಇತಿಹಾಸ: ಆಸ್ಟ್ರೇಲಿಯಾದಲ್ಲಿ ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸಿದ ಆಸ್ಟ್ರೇಲಿಯನ್ ಸೆನೆಟರ್

ಇದು ಹೊಸ ಇತಿಹಾಸ. ಹೌದು. ಆಸ್ಟ್ರೇಲಿಯಾದ ಸೆನೆಟ್‌ನಲ್ಲಿ ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯ ಮಹತ್ವ ಪಸರಿಸಿದೆ. ಭಾರತೀಯ ಮೂಲದ ಆಸ್ಟ್ರೇಲಿಯನ್ ಸೆನೆಟರ್ ವರುಣ್ ಘೋಷ್ ಭಗವದ್ಗೀತೆ ಮೇಲೆ ಕೈಯಿಟ್ಟು ಪ್ರಮಾಣ ವಚನ ಸ್ವೀಕರಿಸುವ ಮೂಲಕ ಇತಿಹಾಸ ಬರೆದಿದ್ದಾರೆ.
ವರುಣ್ ಘೋಷ್ ಅವರು ಮಂಗಳವಾರ ಆಸ್ಟ್ರೇಲಿಯಾದ ಸಂಸತ್ತಿನಲ್ಲಿ ಭಗವದ್ಗೀತೆಯ ಮೇಲೆ ಕೈಯಿಟ್ಟು ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಪಶ್ಚಿಮ ಆಸ್ಟ್ರೇಲಿಯಾದ ವರುಣ್, ಫೆಡರಲ್ ಸಂಸತ್ತಿನ ಸೆನೆಟ್‌ನಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಲೆಜಿಸ್ಟೇಟಿವ್ ಅಸೆಂಬ್ಲಿ ಮತ್ತು ಲೆಜಿಸ್ಟೇಟಿವ್ ಕೌನ್ಸಿಲ್ ಎರಡದಿಂದಲೂ ಬೆಂಬಲವನ್ನು ಪಡೆದ ನಂತರ ಘೋಷ್ ಅವರನ್ನು ಸೆನೆಟರ್ ಆಗಿ ನೇಮಿಸಲಾಯಿತು.
ವರುಣ್ ಘೋಷ್ ಅವರ ನಡೆ ಇದೀಗ ಎಲ್ಲೆಡೆ ಪ್ರಶಂಸೆಗೆ ಕಾರಣವಾಗಿದೆ. ಆಸ್ಟ್ರೇಲಿಯಾದ ಪ್ರಧಾನಿ ಅಂಥೋನಿ ಅಲ್ಬನಿಸ್, ವಿದೇಶಾಂಗ ಸಚಿವ ಪೆನ್ನಿ ವಾಂಗ್ ಅವರು ಘೋಷ ಅವರಿಗೆ ಶುಭ ಹಾರೈಸಿ ಲೇಬರ್ ಸೆನೆಟ್ ತಂಡಕ್ಕೆ ಸ್ವಾಗತಿಸಿದರು. ಪಶ್ಚಿಮ ಆಸ್ಟ್ರೇಲಿಯಾದ ನಮ್ಮ ಹೊಸ ಸೆನೆಟರ್ ವರುಣ್ ಘೋಷ ಅವರಿಗೆ ಸುಸ್ವಾಗತ. ಸೆನೆಟರ್ ಘೋಷ್ ಅವರು ಭಗವದ್ಗೀತೆ ಮೇಲೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯಾದ ಸೆನೆಟರ್ ಆಗಿದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಈ ನಡೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.