ದರ್ಶನ್ ರನ್ನು ಬಚಾವ್ ಮಾಡಲು ಪ್ರಭಾವಿಗಳಿಂದ ಒತ್ತಡ ಇದೆಯಾ?: ಗೃಹ ಸಚಿವ ಡಾ.ಜಿ.ಪರಮೇಶ್ವರ್ - Mahanayaka

ದರ್ಶನ್ ರನ್ನು ಬಚಾವ್ ಮಾಡಲು ಪ್ರಭಾವಿಗಳಿಂದ ಒತ್ತಡ ಇದೆಯಾ?: ಗೃಹ ಸಚಿವ ಡಾ.ಜಿ.ಪರಮೇಶ್ವರ್

parameshwar
12/06/2024


Provided by

ಬೆಂಗಳೂರು: ಕಾನೂನು ಎಲ್ಲರಿಗೂ ಒಂದೇ ಎಂದು  ಗೃಹ ಸಚಿವ ಡಾ. ಜಿ.ಪರಮೇಶ್ವರ್ ಅವರು ದರ್ಶನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದರ್ಶನ್ ಹಾಗೂ ತಂಡದಿಂದ ರೇಣುಕಾಸ್ವಾಮಿ ಎಂಬ ಯುವಕನ ಹತ್ಯೆ ನಡೆದಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.

ನಟ ದರ್ಶನ್ ಪ್ರಕರಣದಿಂದ ಬಚಾವ್ ಆಗಲು ಪ್ರಭಾವಿ ರಾಜಕಾರಣಿಯಿಂದ ಪ್ರಯತ್ನ ಮಾಡಿದ್ದರು ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು,  ನನಗೆ ಗೊತ್ತಿರುವಂತೆ ಯಾರು ಸಹ ಪ್ರಯತ್ನ ಮಾಡಿಲ್ಲ. ಕಾನೂನಿನಲ್ಲಿ ಏನೆಲ್ಲ‌ ಕ್ರಮ ತೆಗೆದುಕೊಳ್ಳಲು ಅವಕಾಶವಿದೆ ಅದನ್ನು ಪೊಲೀಸರು ಮಾಡುತ್ತಾರೆ. ಇದರಲ್ಲಿ ಸರ್ಕಾರದಿಂದ ನಾವ್ಯಾರು ಮಧ್ಯ ಪ್ರವೇಶಿಸುವುದಿಲ್ಲ. ಮುಕ್ತವಾಗಿ ತನಿಖೆ ನಡೆಸಲು ಪೊಲೀಸರಿಗೆ ಅವಕಾಶವಿದೆ ಎಂದು ಹೇಳಿದರು.

ಕೊಲೆಯಾದ ರೇಣುಕಾಸ್ವಾಮಿ ಕುಟುಂಬ ವರ್ಗದ ಕುರಿತು ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುತ್ತೇನೆ. ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವ ಅಗತ್ಯವಿಲ್ಲ. ಪ್ರಕರಣದಲ್ಲಿ ಭಾಗಿಯಾಗಿದ್ದ 13 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣದ ತನಿಖೆಯನ್ನು ಬೇರೆ ಏಜೆನ್ಸಿಗೆ ಕೊಡುವ ಅಗತ್ಯವಿಲ್ಲ. ತನಿಖೆ ಪೂರ್ಣವಾದ ಬಳಿಕ ಎಲ್ಲ ಮಾಹಿತಿ ಗೊತ್ತಾಗುತ್ತದೆ. ಅಲ್ಲಿಯವರೆಗೆ ಈ ಬಗ್ಗೆ ಅಧಿಕಾರಿಗಳನ್ನು ನಾವು ಕೇಳುವುದಿಲ್ಲ, ಅವರೂ ನಮಗೆ ಹೇಳುವುದಿಲ್ಲ ಎಂದರು.

ನಟ ದರ್ಶನ್ ಅವರ ಘಟನೆಗಳು ಇದೇ ಮೊದಲಲ್ಲ. ಮಾಧ್ಯಮಗಳಲ್ಲಿ ಬಂದಿರುವುದನ್ನು ಗಮನಿಸಿದ್ದೇನೆ. ಪೊಲೀಸರು ತನಿಖೆ ಮಾಡುತ್ತಾರೆ. ತನಿಖೆ ನಂತರ ವರದಿಯಲ್ಲಿ ಏನು ಶಿಫಾರಸ್ಸು ಮಾಡುತ್ತಾರೆ ನೋಡಬೇಕು. ಪೊಲೀಸರಿಗೆ ಫ್ರೀ ಹ್ಯಾಂಡ್ ಇದೆ. ಸೆಕ್ಷನ್ ಹಾಕುವುದಕ್ಕೆ ಅವರು ಸಮರ್ಥರು. ನಮ್ಮನ್ನು ಕೇಳಿಕೊಂಡು ಸೆಕ್ಷನ್ ಹಾಕುವುದಿಲ್ಲ ಎಂದು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ