50 ಒತ್ತೆಯಾಳುಗಳ ಬಿಡುಗಡೆಗೆ ಇಸ್ರೇಲ್ ಅನುಮೋದನೆ

ಅಕ್ಟೋಬರ್ 7 ರಂದು ಯಹೂದಿ ರಾಷ್ಟ್ರದ ಮೇಲೆ ದಾಳಿ ನಡೆಸಿದಾಗ ಹಮಾಸ್ ಅಪಹರಿಸಿ ಗಾಝಾಕ್ಕೆ ಕರೆದೊಯ್ದ ಸುಮಾರು 50 ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಒಪ್ಪಂದವನ್ನು ಅನುಮೋದಿಸಲು ಇಸ್ರೇಲ್ ಕ್ಯಾಬಿನೆಟ್ ಬುಧವಾರ ಮುಂಜಾನೆ ಮತ ಚಲಾಯಿಸಿತು. ಬಹು ದಿನಗಳ ಕದನ ವಿರಾಮಕ್ಕೆ ಬದಲಾಗಿ ಒತ್ತೆಯಾಳುಗಳನ್ನು ರಕ್ಷಿಸಲು ಈ ಒಪ್ಪಂದವನ್ನು ಮಾಡಿಕೊಳ್ಳಲಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ.
ಒಪ್ಪಂದದ ವಿವರಗಳನ್ನು ತಕ್ಷಣವೇ ಬಹಿರಂಗಪಡಿಸಲಾಗಿಲ್ಲ. ಆದರೆ ಈ ಒಪ್ಪಂದವು ದಿನಕ್ಕೆ 12-13 ಜನರ ಗುಂಪುಗಳಲ್ಲಿ 50 ಇಸ್ರೇಲಿಗಳನ್ನು, ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ ಎಂದು ಇಸ್ರೇಲ್ ಸರ್ಕಾರದ ಅಧಿಕಾರಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಹಮಾಸ್ ವಿರುದ್ಧದ ಯುದ್ಧ ಪ್ರಾರಂಭವಾದ ನಂತರ ಮೊದಲ ಬಾರಿಗೆ, ಇಸ್ರೇಲ್ ನಾಲ್ಕು ದಿನಗಳ ಕಾಲ ಕದನ ವಿರಾಮಕ್ಕೆ ಒಪ್ಪಿಕೊಂಡಿತ್ತು. ಅಂತಿಮವಾಗಿ ಅಂತರರಾಷ್ಟ್ರೀಯ ಸಮುದಾಯದ ನಿರಂತರ ಒತ್ತಡದ ನಂತರ ಮಣಿಯಿತು.
ಕದನ ವಿರಾಮಕ್ಕೆ ಬದಲಾಗಿ ಒತ್ತೆಯಾಳುಗಳನ್ನು ರಕ್ಷಿಸುವ ಒಪ್ಪಂದದ ವರದಿಗಳು ಮಂಗಳವಾರ ಹೊರಬಂದವು.
ಹಮಾಸ್ ಮತ್ತು ಇಸ್ರೇಲ್ ಒಪ್ಪಂದಕ್ಕೆ ಬರಲು “ಹತ್ತಿರದಲ್ಲಿದೆ” ಎಂದು ಹೇಳಿದರು. ಒತ್ತೆಯಾಳುಗಳ ಒಪ್ಪಂದದ ಬಗ್ಗೆ ಮಾತುಕತೆ ನಡೆಸುವಲ್ಲಿ ಕತಾರ್ ಪ್ರಮುಖ ಪಾತ್ರ ವಹಿಸಿದೆ.
ಒಪ್ಪಂದದ ಪ್ರಕಾರ, ಜೈಲುಗಳಲ್ಲಿರುವ ಫೆಲೆಸ್ತೀನ್ ಮಹಿಳೆಯರು ಮತ್ತು ಮಕ್ಕಳನ್ನು ಬಿಡುಗಡೆ ಮಾಡಲು ಇಸ್ರೇಲ್ ಅನುಮತಿಸುತ್ತದೆ ಅಲ್ಲದೇ ಹೆಚ್ಚಾಗಿ ಪಶ್ಚಿಮ ದಂಡೆ ಮತ್ತು ಪೂರ್ವ ಜೆರುಸಲೇಂನಲ್ಲಿರುವ ತಮ್ಮ ಮನೆಗಳಿಗೆ ಮರಳಲು ಅವಕಾಶ ನೀಡುತ್ತದೆ. ಎಷ್ಟು ಜನರನ್ನು ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ಇಸ್ರೇಲ್ ಬಹಿರಂಗಪಡಿಸಿಲ್ಲ ಆದರೆ ಸ್ಥಳೀಯ ಮಾಧ್ಯಮ ವರದಿಗಳು ಈ ಸಂಖ್ಯೆಯನ್ನು 150 ಎಂದು ಹೇಳುತ್ತವೆ.
ಮತ್ತೊಂದು ಮಹತ್ವದ ಕ್ರಮದಲ್ಲಿ, ಗಾಝಾಕ್ಕೆ ಹೆಚ್ಚುವರಿ ಇಂಧನ ಮತ್ತು ದೊಡ್ಡ ಪ್ರಮಾಣದ ಮಾನವೀಯ ಸಹಾಯವನ್ನು ಅನುಮತಿಸಲು ಇಸ್ರೇಲ್ ಒಪ್ಪಿಕೊಂಡಿದೆ. ಮುತ್ತಿಗೆ ಹಾಕಲಾದ ಫೆಲೆಸ್ತೀನ್ ಪ್ರದೇಶವು ಅಭೂತಪೂರ್ವ ಮಾನವೀಯ ಬಿಕ್ಕಟ್ಟನ್ನು ಎದುರಿಸುತ್ತಿದ್ದರೂ, ಇದು ಹಮಾಸ್ ಗೆ ಪ್ರಯೋಜನವನ್ನು ನೀಡುತ್ತದೆ ಎಂಬ ಭಯದಿಂದ ಇಸ್ರೇಲ್ ಗಾಝಾಕ್ಕೆ ಇಂಧನ ಮತ್ತು ಸಹಾಯ ಸರಬರಾಜನ್ನು ನಿರ್ಬಂಧಿಸಿತ್ತು.