ಗಾಝಾ ಪ್ರವೇಶಿಸಿ, ಹಮಾಸ್ ಮೂಲಸೌಕರ್ಯಗಳನ್ನು ನಾಶಪಡಿಸಿ: ಸೈನಿಕರಿಗೆ ಇಸ್ರೇಲ್ ಸೇನಾ ಮುಖ್ಯಸ್ಥರ ಸೂಚನೆ

ಗಾಝಾ ಪಟ್ಟಿಯಲ್ಲಿ ದಾಳಿಗಳು ನಡೆಸುವ ಜೊತೆಗೆ ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್) ಹಮಾಸ್ ಬಂಡುಕೋರರ ಮೇಲೆ ಹೆಚ್ಚಿನ ಬಲದಿಂದ ದಾಳಿ ನಡೆಸುವುದಾಗಿ ಪ್ರತಿಜ್ಞೆ ಮಾಡಿವೆ. ಕಳೆದ ವಾರಾಂತ್ಯದಲ್ಲಿ ಹಮಾಸ್ ಸೈನಿಕರು ತನ್ನ ಭೂಪ್ರದೇಶದ ಮೇಲೆ ನಡೆಸಿದ ದೊಡ್ಡ ದಾಳಿಗೆ ಪ್ರತಿಯಾಗಿ ಇಸ್ರೇಲ್ ಪಡೆಗಳು ನೆಲದ ದಾಳಿಗೆ ತಯಾರಿ ನಡೆಸುತ್ತಿವೆ. ಉತ್ತರ ಗಾಝಾದ ನಿವಾಸಿಗಳಿಗೆ ದಕ್ಷಿಣಕ್ಕೆ ತೆರಳಲು 3 ಗಂಟೆಗಳ ಗಡುವು ನೀಡಲಾಯಿತು.
ಲೆಬನಾನ್ ನ ಹೆಜ್ಬುಲ್ಲಾ ಇಸ್ರೇಲಿನ ಶ್ತುಲಾ ಎಂಬ ರೈತ ಸಮುದಾಯದ ಮೇಲೆ ಕ್ಷಿಪಣಿ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ. ಇದರಲ್ಲಿ ಓರ್ವ ನಾಗರಿಕ ಸಾವನ್ನಪ್ಪಿದ್ದಾನೆ. ಇತರ ಮೂವರು ಗಾಯಗೊಂಡಿದ್ದಾರೆ. ಇದರ ನಂತರ, ಇಸ್ರೇಲ್ ಮಿಲಿಟರಿ ಪ್ರತೀಕಾರವಾಗಿ ಲೆಬನಾನ್ ನಲ್ಲಿ ದಾಳಿ ನಡೆಸುತ್ತಿದೆ. ಲೆಬನಾನ್ ಗಡಿಯ 4 ಕಿ.ಮೀ (2 ಮೈಲಿ) ಒಳಗಿನ ವಲಯವನ್ನು ಸಾರ್ವಜನಿಕ ಪ್ರವೇಶಕ್ಕೆ ಮಿತಿಯಿಲ್ಲದ ವಲಯವೆಂದು ಘೋಷಿಸಲಾಗಿದೆ.
ಗಾಝಾದಲ್ಲಿ ರಾತ್ರಿ ನಡೆದ ವಾಯು ದಾಳಿಯಲ್ಲಿ ಹಮಾಸ್ ನ ಗಣ್ಯ ಮಿಲಿಟರಿ ವಿಭಾಗವಾದ ನುಖ್ಬಾ ಪಡೆಯ ಉನ್ನತ ಕಮಾಂಡರ್ ಬಿಲಾಲ್ ಅಲ್-ಕ್ವೆದ್ರಾ ಅವರನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ಪಡೆಗಳು ಘೋಷಿಸಿವೆ.
ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಈ ಹಿಂದೆ ಗಾಝಾದಲ್ಲಿ ವಾಯು, ನೆಲ ಮತ್ತು ನೌಕಾ ಪಡೆಗಳನ್ನು ಒಳಗೊಂಡ “ಸಂಘಟಿತ” ದಾಳಿಗೆ ಸಿದ್ಧವಾಗಿದೆ ಎಂದು ಘೋಷಿಸಿತ್ತು.