ಅಮೆರಿಕದ ಒತ್ತಡದ ಬಳಿಕ ದಕ್ಷಿಣ ಗಾಝಾಗೆ ನೀರು ಪೂರೈಕೆ ಪುನರ್ ಆರಂಭಿಸಿದ ಇಸ್ರೇಲ್

ಅಮೆರಿಕದ ಜೋ ಬೈಡನ್ ಆಡಳಿತದ ಬಲವಾದ ಒತ್ತಡದ ನಂತರ ಇಸ್ರೇಲ್ ದಕ್ಷಿಣ ಗಾಝಾ ಪಟ್ಟಿಗೆ ನೀರು ಸರಬರಾಜನ್ನು ಪುನರ್ ಆರಂಭಿಸಿದೆ ಎಂದು ಇಬ್ಬರು ಇಸ್ರೇಲಿ ಅಧಿಕಾರಿಗಳು ತಿಳಿಸಿದ್ದಾರೆ.
ಗಾಝಾಗೆ ನೀರು ಸರಬರಾಜನ್ನು ಸಂಪೂರ್ಣವಾಗಿ ನಿಲ್ಲಿಸುವ ಇಸ್ರೇಲ್ ನ ನಿರ್ಧಾರವು ಗಾಝಾದಲ್ಲಿ ಈಗಾಗಲೇ ಭೀಕರ ಮಾನವೀಯ ಪರಿಸ್ಥಿತಿಯನ್ನು ಉಲ್ಬಣಗೊಳಿಸಿದೆ. ಯುದ್ಧದ ಎರಡನೇ ದಿನದಂದು ಇಸ್ರೇಲ್, ಗಾಝಾಗೆ ಎಲ್ಲಾ ನೀರು ಸರಬರಾಜನ್ನು ನಿಲ್ಲಿಸುವುದಾಗಿ ಘೋಷಿಸಿತು. ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವವರೆಗೂ “ಯಾವುದೇ ನೀರಿನ ಗೇಟ್ ತೆರೆಯಲಾಗುವುದಿಲ್ಲ” ಎಂದು ಇಸ್ರೇಲ್ ಇಂಧನ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದರು.
ಆದರೆ ಅಮೆರಿಕದ ಬೈಡನ್ ಆಡಳಿತವು ಕಳೆದ 48 ಗಂಟೆಗಳಲ್ಲಿ ಇಸ್ರೇಲ್ ಸರ್ಕಾರದ ಮೇಲೆ ನೀರು ಸರಬರಾಜನ್ನು ಪುನರಾರಂಭಿಸುವಂತೆ ಒತ್ತಡ ಹೇರಿದೆ ಎಂದು ಇಸ್ರೇಲ್ ಅಧಿಕಾರಿಗಳು ತಿಳಿಸಿದ್ದಾರೆ.
ಇಸ್ರೇಲ್ ನ ನಿರೀಕ್ಷಿತ ನೆಲದ ಆಕ್ರಮಣದಿಂದ ಹಾನಿಯಾಗುವುದನ್ನು ತಪ್ಪಿಸಲು ಗಾಝಾ ಪಟ್ಟಿಯ ಉತ್ತರ ಭಾಗವನ್ನು ದಕ್ಷಿಣಕ್ಕೆ ಸ್ಥಳಾಂತರಿಸುವಂತೆ ಇಸ್ರೇಲ್ 1 ದಶಲಕ್ಷಕ್ಕೂ ಹೆಚ್ಚು ಫೆಲೆಸ್ತೀನೀಯರಿಗೆ ತಿಳಿಸಿದೆ.