ಲೆಬನಾನ್ ಗಡಿಯಲ್ಲಿ ಇಸ್ರೇಲ್ ಶೆಲ್ ದಾಳಿ: ಓರ್ವ ಪತ್ರಕರ್ತ ಬಲಿ, 6 ಮಂದಿಗೆ ಗಾಯ - Mahanayaka

ಲೆಬನಾನ್ ಗಡಿಯಲ್ಲಿ ಇಸ್ರೇಲ್ ಶೆಲ್ ದಾಳಿ: ಓರ್ವ ಪತ್ರಕರ್ತ ಬಲಿ, 6 ಮಂದಿಗೆ ಗಾಯ

14/10/2023


Provided by

ದಕ್ಷಿಣ ಲೆಬನಾನ್ ಗಡಿಯಲ್ಲಿ ನಡೆದ ಘರ್ಷಣೆಗಳನ್ನು ವರದಿ ಮಾಡುತ್ತಿದ್ದ ಅಂತರರಾಷ್ಟ್ರೀಯ ಪತ್ರಕರ್ತರ ಗುಂಪಿನ ಮೇಲೆ ಇಸ್ರೇಲ್ ಶೆಲ್ ದಾಳಿ ನಡೆಸಿದ್ದು, ಇದೇ ವೇಳೆ ರಾಯಿಟರ್ಸ್ ವಿಡಿಯೋಗ್ರಾಫರ್ ಸಾವನ್ನಪ್ಪಿದ್ದು, ಇತರ ಆರು ಪತ್ರಕರ್ತರು ಗಾಯಗೊಂಡಿದ್ದಾರೆ.

ಘಟನಾ ಸ್ಥಳದಲ್ಲಿದ್ದ ಅಸೋಸಿಯೇಟೆಡ್ ಪ್ರೆಸ್ ಛಾಯಾಗ್ರಾಹಕ ರೊಬ್ಬರು ಈ ಕುರಿತು ಮಾಹಿತಿ ನೀಡಿ, ರಾಯಿಟರ್ಸ್ ವಿಡಿಯೋಗ್ರಾಫರ್ ಇಸಾಮ್ ಅಬ್ದುಲ್ಲಾ ಸಾವನ್ನಪ್ಪಿದ್ದಾರೆ. ಆರು ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಕೆಲವರನ್ನು ಆಂಬ್ಯುಲೆನ್ಸ್ ಗಳಲ್ಲಿ ಆಸ್ಪತ್ರೆಗಳಿಗೆ ಸಾಗಿಸಲಾಯಿತು.

“ನಮ್ಮ ವಿಡಿಯೋಗ್ರಾಫರ್ ಇಸಾಮ್ ಅಬ್ದುಲ್ಲಾ ಅವರನ್ನು ಕೊಲ್ಲಲಾಗಿದೆ ಎಂದು ಹೇಳಲು ನಮಗೆ ತುಂಬಾ ದುಃಖವಾಗಿದೆ” ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಅಬ್ದಲ್ಲಾ ದಕ್ಷಿಣ ಲೆಬನಾನ್ ನಲ್ಲಿ ಲೈವ್ ಸಿಗ್ನಲ್ ನೀಡುತ್ತಿದ್ದ ರಾಯಿಟರ್ಸ್ ತಂಡದ ಭಾಗವಾಗಿದ್ದರು ಎಂದು ಏಜೆನ್ಸಿ ಹೇಳಿದೆ.
ಗಡಿ ಪ್ರದೇಶದಲ್ಲಿ ನಡೆದ ಶೆಲ್ ದಾಳಿಯಲ್ಲಿ ತನ್ನ ಇಬ್ಬರು ಪತ್ರಕರ್ತರಾದ ಥಾರ್ ಅಲ್-ಸುಡಾನಿ ಮತ್ತು ಮಹೆರ್ ನಝೆಹ್ ಗಾಯಗೊಂಡಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.

ಗಾಯಗೊಂಡವರಲ್ಲಿ ಕತಾರ್ ನ ಇಬ್ಬರು ಉದ್ಯೋಗಿಗಳಾದ ಎಲೀ ಬ್ರಾಖ್ಯಾ ಮತ್ತು ವರದಿಗಾರ ಕಾರ್ಮೆನ್ ಜೌಖಾದರ್ ಕೂಡ ಸೇರಿದ್ದಾರೆ ಎಂದು ಕತಾರ್ ನ ಅಲ್-ಜಜೀರಾ ಟಿವಿ ತಿಳಿಸಿದೆ.

ಇತ್ತೀಚಿನ ಸುದ್ದಿ