ಜಾತಿ ಸವಾಲು | ನೀತಿ ಕಥೆ: ಸಂಚಿಕೆ- 2 |  ಜಾತಿ ಬೇಧ ಇದೆಯೇ ಎಂಬ ಹುಡುಕಾಟದಲ್ಲಿ ಸ್ನೇಹಿತರು - Mahanayaka

ಜಾತಿ ಸವಾಲು | ನೀತಿ ಕಥೆ: ಸಂಚಿಕೆ- 2 |  ಜಾತಿ ಬೇಧ ಇದೆಯೇ ಎಂಬ ಹುಡುಕಾಟದಲ್ಲಿ ಸ್ನೇಹಿತರು

20/12/2020

ಅದೊಂದು ಪುಟ್ಟ ಹಳ್ಳಿ. ಅಲ್ಲಿ ಇಬ್ಬರು ಪ್ರಾಣ ಸ್ನೇಹಿತರಿದ್ದರು. ಆ ಇಬ್ಬರಲ್ಲಿ ಒಬ್ಬರಿಗೆ ಏನೇ ಸಮಸ್ಯೆಯಾದರೂ ಅವರು ಪರಸ್ಪರ ಪ್ರಾಣ ನೀಡಲು ಹಿಂದೆ ಮುಂದೆ ನೋಡಂತಹ ಸ್ನೇಹ ಅವರದ್ದಾಗಿತ್ತು. ಸಂದೀಪ್-ವಿರೂಪಾಕ್ಷ ಎಂದರೆ ಆ ಊರಿನಲ್ಲಿ ಅಂತಹ ಯಾವುದೇ ಸ್ನೇಹಿತರು ಇರಲಿಲ್ಲ.  ಒಂದು ದಿನ ಅವರು ತಮ್ಮ ಊರಿನ ಕಟ್ಟೆಯಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದರು.  ಆ ವೇಳೆ ವಿರೂಪಾಕ್ಷ ತನ್ನು ಕೈಯಲ್ಲಿದ್ದ ನ್ಯೂಸ್ ಪೇಪರ್ ನ್ನು ನೋಡುತ್ತಾ, “ಮೇಲ್ಜಾತಿಯವರ ತಟ್ಟೆಯನ್ನು ಮುಟ್ಟಿದನೆಂದರು ದಲಿತನ ಹತ್ಯೆ” ಎಂದು ಸುದ್ದಿಯೊಂದನ್ನು ಓದಿದ. ಬಳಿಕ ಸ್ವಲ್ಪ ಯೋಚಿಸಿ ಸಂದೀಪ್ ಬಳಿ ಕೇಳಿದ, “ಅಲ್ಲ ಸಂದೀಪ್, ಈ ಜಾತಿ ಇವೆಲ್ಲ ಈಗಲೂ ಇದೆಯಾ? ಯಾಕೆ ಎಲ್ಲ ನ್ಯೂಸ್ ಪೇಪರ್ ನಲ್ಲಿ ಸುಳ್ಳು ಸುಳ್ಳು ಬರೆಯುತ್ತಾರೆ? ನಾನಂತೂ ಈ ನ್ಯೂಸ್ ಪೇಪರ್ ಓದುವುದೇ ಇಲ್ಲ. ಸುಮ್ಮನೆ ಏನೇನೋ ಬರೆಯುತ್ತಾರೆ”  ಎಂದು ಕೋಪದಲ್ಲಿ ಹೇಳಿದ.


Provided by

ಆಗ ಸಂದೀಪ್ ಹೇಳಿದ. “ವಿರೂಪಾಕ್ಷ, ನಾವು ಯಾವುದೇ ವಿಷಯವನ್ನು ಅನುಭವ ಇಲ್ಲದೇ ತಿಳಿದುಕೊಳ್ಳಲು ಸಾಧ್ಯವಿಲ್ಲ. ಸಮಾಜದಲ್ಲಿ ಎಂದಿಗೂ ಪೂರ್ತಿ ಒಳ್ಳೆಯದು ಅಥವಾ ಪೂರ್ತಿ ಕೆಟ್ಟದ್ದು ಎನ್ನುವುದು ಎಂದಿಗೂ ಇರಲು ಸಾಧ್ಯವಿಲ್ಲ. ಹಾಗೆಯೇ ಈ ಜಾತಿ ಎನ್ನುವುದು ಹಿಂದಿನಿಂದಲೂ ಜನರನ್ನು ಹಿಂಡಿ ಹಿಂಸೆ ನೀಡುತ್ತಿದೆ. ಆದರೆ, ಅದನ್ನು ಯಾರೂ ಕೂಡ ಒಪ್ಪುವುದಿಲ್ಲ. ಕೆಲವರು ಜಾತಿ ವ್ಯವಸ್ಥೆ ಒಳ್ಳೆಯದು ಎಂದು ಹೇಳುತ್ತಾರೆ. ಇನ್ನು ಕೆಲವರು ಜಾತಿ ವ್ಯವಸ್ಥೆ ಕೆಟ್ಟದು ಎಂದು ಹೇಳುತ್ತಾರೆ. ಆದರೆ, ಜಾತಿ ವ್ಯವಸ್ಥೆ ಒಳ್ಳೆಯದೋ ಕೆಟ್ಟದೋ ಎನ್ನುವುದು ಅನುಭವದಿಂದ ಮಾತ್ರವೇ ಸ್ಪಷ್ಟವಾಗಿ ಹೇಳಲು ಸಾಧ್ಯ” ಎಂದು ಹೇಳಿದ.

ಸಂದೀಪ್ ನ ಮಾತುಗಳು ಯಾಕೋ ವಿರೂಪಾಕ್ಷನಿಗೆ ಇಷ್ಟವಾಗಲಿಲ್ಲ. “ಸಂದೀಪ್ ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಲ್ಲಿಯವರೆಗೆ ನಾನಾಗಲಿ, ನನ್ನ ಕುಟುಂಬಸ್ಥರಾಗಲಿ ಜಾತಿಯ ಕಾರಣಕ್ಕೆ ಯಾರನ್ನೂ ನೋಯಿಸಿಲ್ಲ. ಮತ್ತು ಯಾರ ಬಳಿಯೂ ಜಾತಿ ಕೇಳಿದವರಲ್ಲ. ಅವರ ಬಗ್ಗೆ ಕೆಟ್ಟದಾಗಿ ಮಾತನಾಡಿದವರಲ್ಲ. ನಾನು ನೋಡಿದ ಪ್ರಕಾರ ಸಮಾಜದಲ್ಲಿ ಎಲ್ಲಿಯೂ ಬೇಧ ಭಾವ ಇಲ್ಲ. ಎಲ್ಲರೂ ಅಂಗಡಿ, ಬೇಕರಿ, ಹೊಟೇಲ್ , ದೇವಸ್ಥಾನಕ್ಕೆ ಹೋಗುತ್ತಾರೆ, ಎಲ್ಲಿಯೂ ಜಾತಿಗಾಗಿ ಯಾರನ್ನೂ ದೂಷಣ ಮಾಡಲಾಗುತ್ತಿಲ್ಲ. ಜಾತಿ ದೌರ್ಜನ್ಯ ಎನ್ನುವುದು ಕೇವಲ ಅನುಕಂಪಗಿಟ್ಟಿಸಿಕೊಳ್ಳಲು, ಮೀಸಲಾತಿ ಪಡೆದುಕೊಳ್ಳಲು ಜನರು ಬಳಸಿಕೊಳ್ಳುತ್ತಿರುವ ಒಂದು ನೆಪ ಅಷ್ಟೆ” ಎಂದು ಹೇಳುತ್ತಾನೆ.

ಸಂದೀಪ್, “ಇಲ್ಲ ವಿರೂಪಾಕ್ಷ… ನಾನು ಜಾತಿ ಬೇಧದ ನೋವನ್ನು ನೋಡಿದ್ದೇನೆ. ಆದರೆ ನಿನಗೆ ಅದು ಅರ್ಥವಾಗಲು ಸಾಧ್ಯವಿಲ್ಲ.  ಎಷ್ಟೋ ಬಾರಿ ನಾನು ಜಾತಿಯ ಕಾರಣಕ್ಕಾಗಿ ಅವಮಾನ ಎದುರಿಸಿದ್ದೇನೆ. ಅದು ಅಂತಿಂತಹ ನೋವಲ್ಲ. ಪ್ರಪಂಚದಲ್ಲಿ ಅಷ್ಟೊಂದು ಚಿತ್ರ ಹಿಂಸೆ ಬೇರೆ ಯಾವುದೂ ಇರಲು ಸಾಧ್ಯವಿಲ್ಲ”. ಸಂದೀಪ್ ನ ಮಾತು ಕೇಳುತ್ತಿದ್ದಂತೆಯೇ ವಿರೂಪಾಕ್ಷನಿಗೆ ಬಹಳ ಕೋಪ ಬಂತು. “ಸಾಕು ಸಂದೀಪ್… ನೀನು ಕೂಡ ಅದೇ ವರ್ಗಕ್ಕೆ ಸೇರಿದವನು ತಾನೆ. ನಿಮಗೆಲ್ಲ, ಜಾತಿಯನ್ನು ತೋರಿಸಿ ಅನುಕಂಪಗಿಟ್ಟಿಸಿಕೊಳ್ಳದೇ ಬದುಕಲು ಗೊತ್ತಿಲ್ಲ. ಯಾಕೆ ಇಂತಹ ಬದುಕು ಬದುಕುತ್ತೀರಿ. ಎಲ್ಲದರಲ್ಲೂ ಮೀಸಲಾತಿ ಬೇಕು ಎಂದು ಕೇಳುತ್ತೀರಿ. ಯಾಕೆ ಬೇರೆ ಜಾತಿಯವರಲ್ಲಿ ಬಡವರೇ ಇಲ್ವಾ? ಅವರೆಲ್ಲ ದುಡಿದು ಬದುಕುತ್ತಿಲ್ವಾ? ನಿಮಗೆ ಮಾತ್ರ ಮೀಸಲಾತಿ ಇಲ್ಲದೇ ಬದುಕಲು ಆಗುವುದಿಲ್ಲ” ಎಂದು ಬಹಳ ಕೋಪದಿಂದ ಬೈದ.

ಸಂದೀಪ್ ಆತನ ಮಾತಿಗೆ ಬೇಸರ ಮಾಡಿಕೊಳ್ಳಲಿಲ್ಲ. “ಸರಿ… ವಿರೂಪಾಕ್ಷ ನಾವು ಅದರ ಬಗ್ಗೆ ಜಗಳ ಮಾಡುವುದು ಬೇಡ. ನಾನು ನಿನಗೆ ಒಂದು ಸವಾಲು ಹಾಕುತ್ತೇನೆ. ಆ ಸವಾಲನ್ನು ನೀನು ಸ್ವೀಕರಿಸು” ಎಂದ. ವಿರೂಪಾಕ್ಷ “ಸರಿ ಏನು ನಿನ್ನ ಸವಾಲು?” ಎಂದು ಕೋಪದಿಂದಲೇ ಕೇಳಿದ. ಸಂದೀಪ್ ಹೇಳಿದ “ ನೀನು ನಿನ್ನ ಪರಿಚಯವೇ ಇಲ್ಲದ ಊರಿಗೆ ಹೋಗಬೇಕು ಮತ್ತು ಅಲ್ಲಿ ಮನೆಯೊಂದನ್ನು ಮಾಡಿಕೊಂಡು ನಾನು ದಲಿತ ಎಂದು ಗುರುತಿಸಿಕೊಂಡು, ಕನಿಷ್ಠ 2 ತಿಂಗಳು ಜೀವಿಸಬೇಕು. ಎಲ್ಲರಲ್ಲೂ ಪ್ರೀತಿ ಹಂಚಬೇಕು. ಎಲ್ಲರಲ್ಲಿಯೂ ಸೇರಿ ಬದುಕಬೇಕು”. ಸಂದೀಪ್ ನ ಸವಾಲನ್ನು ಕೇಳಿ ಸ್ವಲ್ಪ ಹೊತ್ತು ಯೋಚಿಸಿ, “ಇದೇನು ಮಹಾ ಸವಾಲು ನಾನು ನಿನ್ನ ಸವಾಲನ್ನು ಪೂರೈಸುತ್ತೇನೆ. ಒಂದು ವೇಳೆ ನೀನು ಈ ಸವಾಲಿನಲ್ಲಿ ಸೋತರೆ ನಾನು ಹೇಳಿದಂತೆ ನೀನು ಕೇಳಬೇಕು” ಎಂದು ವಿರೂಪಾಕ್ಷ ಸಂದೀಪ್ ಗೆ ಷರತ್ತು ಹಾಕಿದ. ಸಂದೀಪ್ ಕೂಡ ಒಪ್ಪಿದ.

ಸಂದೀಪ್ ನ ಸವಾಲು ಸ್ವೀಕರಿಸಿದ ವಿರೂಪಾಕ್ಷ, ತನ್ನ ಪರಿಚಯವೇ ಇಲ್ಲದ ಊರೊಂದಕ್ಕೆ ಬಂದನು. ಅಲ್ಲಿ ಬಾಡಿಗೆ ಮನೆಯೊಂದನ್ನು ಹುಡುಕಲು ಹೊರಟ. ಒಂದು ಸುಂದರವಾದ ಮನೆ ಕಂಡಿತು. ಅದರ ಮುಂಭಾಗದಲ್ಲಿ ಮನೆ ಬಾಡಿಗೆಗೆ ಇದೆ ಎಂದು ಬೋರ್ಡ್ ಕಾಣಿಸಿತು. ನನ್ನ ಕೆಲಸ ಸುಲಭವಾಯಿತು ಅಂದುಕೊಂಡ ವಿರೂಪಾಕ್ಷ ಪಕ್ಕದಲ್ಲಿಯೇ ಇದ್ದ ಓನರ್ ಮನೆಯ ಬೆಲ್ ಪ್ರೆಸ್ ಮಾಡಿದ. ಆಗ ಅಂದಾಜು 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಹೊರ ಬಂದು,  “ಏನು” ಎಂದು ಕೇಳಿದ. ವಿರೂಪಾಕ್ಷ, “ಮನೆ ಬಾಡಿಗೆಗೆ ಇದೆ ಎಂದು ಬೋರ್ಡ್ ಹಾಕಿದ್ದೀರಿ” ಎಂದ. ಆ ವ್ಯಕ್ತಿ “ಹಾಂ… ಇದೆ ಬನ್ನಿ ಎಂದು ಮನೆ ತೋರಿಸಿದ. ವಿರೂಪಾಕ್ಷನಿಗೆ ಮನೆ ತುಂಬಾ ಇಷ್ಟವಾಯಿತು. “ನನಗೆ ಮನೆ ಇಷ್ಟವಾಯ್ತು ಎಷ್ಟು ಅಡ್ವಾನ್ಸ್ ಕೊಡಬೇಕು, ಬಾಡಿಗೆ ಎಷ್ಟು?” ಎಂದು ಪ್ರಶ್ನಿಸಿದ. ಆ ಮನೆ ಓನರ್ ವಿರೂಪಾಕ್ಷನನ್ನು ನೋಡಿ, “ನಿಮ್ಮ ಹೆಸರೇನು?” ಎಂದು ಹೇಳಿದ. “ನನ್ನ ಹೆಸರು ವಿರೂಪಾಕ್ಷ” ಎಂದು ವಿರೂಪಾಕ್ಷ ಹೇಳಿದ. “ಹೌದಾ…! ನೀವು ಸಸ್ಯಹಾರಿಯೇ?” ಎಂದು ಮತ್ತೆ ಓನರ್ ಪ್ರಶ್ನಿಸಿದ. ಹೌದು ಎನ್ನಲು ಮುಂದಾಗಿದ್ದ ವಿರೂಪಾಕ್ಷನಿಗೆ ಸಂದೀಪ್  ಜೊತೆಗೆ ಮಾಡಿದ ಸವಾಲು ನೆನಪಾಗಿ. “ಇಲ್ಲ” ಎಂದು ಹೇಳಿದ. ಆಗ ಓನರ್ ಮುಖ ಕಳೆಗುಂದಿತು. ಆತ, “ನಾವು ಮಾಂಸಹಾರಿಗಳಿಗೆ ಮನೆ ಕೊಡುವುದಿಲ್ಲ” ಎಂದ. ವಿರೂಪಾಕ್ಷ ಅಂದುಕೊಂಡ ಇರಬಹುದು ಅವರ ಮನೆ ಅವರಿಗೆ ಮಾಂಸಾಹಾರ ಇಷ್ಟವಿರಲಿಕ್ಕಿಲ್ಲ, ಹಾಗಾಗಿ ಹೇಳುತ್ತಿದ್ದಾರೆ ಎಂದು ಕೊಂಡು. “ಹೌದಾ ಸರ್… ನಾನು ನಿಮ್ಮ ಮನೆಯಲ್ಲಿ ಮಾಂಸಾಹಾರ ಮಾಡುವುದಿಲ್ಲ, ಅದಕ್ಕೆ ಭಯಪಡಬೇಡಿ” ಎಂದು ಸಂದೀಪ್ ಹೇಳಿದ. ಓನರ್ ಈಗ ಬೇರೆಯೇ ಪ್ರಶ್ನೆ ಕೇಳಲು ಆರಂಭಿಸಿದ,  “ನಿನ್ನ ಜಾತಿ ಯಾವುದು?”  ಎಂದು ಓನರ್ ಪ್ರಶ್ನಿಸಿದ ಆಗ ವಿರೂಪಾಕ್ಷ ತಕ್ಷಣ, “ನಾನು ದಲಿತ” ಎಂದು ಹೇಳುತ್ತಾನೆ. ಈಗ ಮನೆ ಓನರ್ ನ ಮುಖ ಕಪ್ಪಾಯಿತು. “ಇಲ್ಲಿ ಮನೆ ಇಲ್ಲ, ನೀನು ಇನ್ನು ಹೋಗಬಹುದು” ಎಂದು ಮುಖಕ್ಕೆ ಹೊಡೆದಂತೆ ಹೇಳಿ ಬಿಟ್ಟ.   ವಿರೂಪಾಕ್ಷ ಅಂದುಕೊಂಡ ಇವನೇನು ಹುಚ್ಚನೇ? ಮಾನಸಿಕ ಅಸ್ವಸ್ಥ ಇರಬಹುದೇನೋ? ಇಲ್ಲಿಯವರೆಗೆ ಮನೆ ಇದೆ ಅನ್ನುತ್ತಿದ್ದವನಿಗೆ ಏನಾಯಿತು? ಎನ್ನುವುದು ತಿಳಿಯದೇ ಹೊರ ಬಂದ.

ವಿರೂಪಾಕ್ಷ ಹಲವು ಕಡೆಗಳಲ್ಲಿ ಹೀಗೆ ಮನೆ ಹುಡುಕಿದ. ಕೆಲವು ಪ್ರದೇಶಗಳಲ್ಲಿ ಇವನಿಗೆ ಮನೆ ಇಷ್ಟವಾಗಲಿಲ್ಲ. ಬೇರೆ ಕಡೆಗಳಲ್ಲಿ ಸಸ್ಯಹಾರಿಗಳಿಗೆ ಮಾತ್ರವೇ ಮನೆ ಎಂದು ಹೇಳುತ್ತಿದ್ದಾರೆ. ಸಸ್ಯಾಹಾರಿಗಳಿಗೆ ಮಾತ್ರವೇ ಮನೆ ಎಂದು ಹೇಳುವ ಕಡೆಗಳಲ್ಲಿ ಕೊನೆಗೆ ಬೈಗಳು ತಿಂದೇ ವಾಪಸ್ ಬರಬೇಕಾಯಿತು. ಅವನಿಗೆ ಈಗ ಧರ್ಮ ಸಂಕಟ. ಒಂದು ಕಡೆಯಲ್ಲಿ ಸಂಜೆಯಾಗುತ್ತಿದೆ. ಸೂರ್ಯ ಮೆಲ್ಲಗೆ ಆಕಾಶದಿಂದ ಜಾರಿ ಬೆಟ್ಟದಂಚಿನಲ್ಲಿ ಅಡಗಿ ಕುಳಿತುಕೊಳ್ಳಲು ಸಜ್ಜಾಗುತ್ತಿದ್ದಾನೆ. ಆದರೆ, ವಿರೂಪಾಕ್ಷನಿಗೆ ಇನ್ನೂ ಮನೆ ಸಿಕ್ಕಿಲ್ಲ. ವಿರೂಪಾಕ್ಷ ಅವನ ಜೀವನದಲ್ಲಿ ಎಲ್ಲಿಯೂ ಸೋತವನಲ್ಲ.  ಆದರೆ, ಮೊದಲ ಬಾರಿಗೆ ಸಂದೀಪ್ ಎದುರು ಸೋತು ಬಿಡುತ್ತೇನೆ ಅಂದುಕೊಂಡ. ಆದರೆ ಅವನು ಛಲ ಬಿಡಲಿಲ್ಲ. ಮತ್ತೆ ಎದ್ದುಕೊಂಡು ಹೋದ. ಒಂದು ಪ್ರದೇಶದಲ್ಲಿ ಅವನಿಗೆ ಮನೆ ಸಿಕ್ಕಿತು.  ಮನೆಯ ಓನರ್ ಕೇಳಿದ. ನಿನ್ನ ಹೆಸರೇನು ? ಅಂತ. ವಿರೂಪಾಕ್ಷ ತನ್ನ ಹೆಸರು ಹೇಳಿದ. ಸರಿ ನಿನಗೆ ಮನೆ ಕೊಡೋಣ ಎನ್ನುತ್ತಾ ಮನೆ ನೀಡಿದ. ಇಡೀ ದಿನ ಮನೆ ಹುಡುಕಾಡದಿಂದಾಗಿ ಬಳಲಿದ್ದ ವಿರೂಪಾಕ್ಷ  ಭಾರೀ ನಿದ್ದೆಗೆ ಜಾರಿದ.

ಮುಂದುವರಿಯುವುದು…

ಮುಂದಿನ ಭಾಗ ಪ್ರಕಟಗೊಳ್ಳುವ ದಿನಾಂಕ:  ಡಿಸೆಂಬರ್ 22

ಇತ್ತೀಚಿನ ಸುದ್ದಿ