ಕೋಮುವಾದದ ವಿರುದ್ದ ಜಾತ್ಯತೀತತೆಯನ್ನು ಸಂಭ್ರಮಿಸಬೇಕಾಗಿದೆ: ದಿನೇಶ್ ಅಮೀನ್ ಮಟ್ಟು
ಉಡುಪಿ: ನಾವು ಸತ್ಯ, ನ್ಯಾಯ, ಸಂಸ್ಕೃತಿ, ಭಾವಾಕ್ಯತೆಯನ್ನು ಸಂಭ್ರಮಿಸುವ ಮೂಲಕ ಮೋಸ, ಸುಳ್ಳು, ಕೆಡುಕು, ಕೋಮುವಾದವನ್ನು ಎದುರಿಸಬೇಕು. ಆದುದರಿಂದ ನಾವು ಕೋಮುವಾದದ ವಿರುದ್ದ ಪ್ರತಿಭಟನೆ ನಡೆಸುವುದರೊಂದಿಗೆ ಜಾತ್ಯತೀತತೆಯನ್ನು ಸಂಭ್ರಮಿಸಬೇಕಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದ್ದಾರೆ
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ಉಡುಪಿ ಅಂಬಾಗಿಲಿನ ಅಮೃತ್ ಗಾರ್ಡನ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾದ ವಿವಿಧ ಸಮುದಾಯ ಗಳ ಸ್ನೇಹ ಸಮಾವೇಶ ಹಾಗೂ ‘ಮಾನವ ರತ್ನ’ ಹಾಗೂ ‘ಸೇವಾ ರತ್ನ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ನಾವು ಕೂಡಿ ಕಟ್ಟಿದ್ದೇವೆ. ಆದರೆ ಇಂದು ನಮ್ಮಲ್ಲಿನ ವಿಶ್ವಾಸಾರ್ಹತೆಗೆ ಧಕ್ಕೆ ಬರುತ್ತಿದೆ. ಈ ಬಗ್ಗೆ ನಾವೆಲ್ಲ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ಧರ್ಮವನ್ನು ಮುಂದಿಟ್ಟುಕೊಂಡು ಮನುಷ್ಯ ಸಂಬಂಧವನ್ನು ಹಾಳು ಮಾಡುತ್ತಿದೆ. ಇದರಿಂದ ನಿಜವಾದ ಧರ್ಮ ಆಚರಣೆ ಆಗುತ್ತಿಲ್ಲ ಎಂದರು.
ಚುನಾವಣಾ ಸಂದರ್ಭದಲ್ಲಿ ರಾಜಕಾರಣಿಗಳಿಗೆ ಧರ್ಮ ದೇವರ ಹೆಸರಿನಲ್ಲಿ ನಮ್ಮ ಮಧ್ಯೆ ಬಿರುಕು ಮೂಡಿಸಿ ಲಾಭ ಪಡೆಯಲು ಅವಕಾಶ ನೀಡಬಾರದು. ಆ ಬಗ್ಗೆ ಎಲ್ಲರು ಗಟ್ಟಿ ತೀರ್ಮಾನ ತೆಗೆದುಕೊಳ್ಳಬೇಕು. ಆ ಮೂಲಕ ನಾವೆಲ್ಲ ನಿಜವಾದ ಧರ್ಮವನ್ನು ಆಚರಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಶಿವಮೊಗ್ಗದ ಕುವೆಂಪು ವಿವಿ ಸಂಶೋಧನಾ ಮತ್ತು ಬೋಧನಾ ಸಹಾಯಕಿ ಡಾ.ಹಸೀನಾ ಎಚ್.ಕೆ. ಮಾತನಾಡಿ, ಸಮಾಜವನ್ನು ಮುನ್ನಡೆಸಿಕೊಂಡು ಹೋಗಲು ನಮಗೆ ಮಾನವೀಯ ಮೌಲ್ಯಗಳು ಅಗತ್ಯ. ಇದನ್ನು ಶಿಕ್ಷಣದಲ್ಲಿ ಅಳವಡಿಸಿಕೊಳ್ಳಬೇಕು. ಸಮನ್ವಯದ ಸಮಾಜ ನಿರ್ಮಿಸಲು ಗಾಂಧಿ, ಅಂಬೇಡ್ಕರ್, ಪ್ರವಾದಿ, ಬಸವಣ್ಣ ಅವರ ತತ್ವಗಳನ್ನು ಒಗ್ಗೂಡಿಸಬೇಕು. ಇದರಿಂದ ಪ್ರೀತಿ ಸಾಮರಸ್ಯ ತಂದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಮುಖ್ಯ ಅತಿಥಿಯಾಗಿ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಮಾತನಾಡಿ, ತಪ್ಪನ್ನು ತಪ್ಪು ಎಂಬುದನ್ನು ಧೈರ್ಯವಾಗಿ ಹೇಳುವ ಮನೋಭಾವ ಎಲ್ಲರಲ್ಲಿಯೂ ಬರಬೇಕು ಆಗ ಸಮಾಜದಲ್ಲಿ ಶಾಂತಿ ನೆಲೆಸಲು ಸಾಧ್ಯವಾಗಲಿದೆ. ಸೌಹಾರ್ದತೆ ಜಾತ್ಯಾತೀತ ತತ್ವದಡಿ ಪ್ರೀತಿ ವಿಶ್ವಾಸದಿಂದ ಸಾಗಿದಾಗ ದೇಶದ ಸಂವಿಧಾನದ ಆಶಯ ಉಳಿಯಲು ಸಾಧ್ಯ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ವಿಚಾರವಾದಿ, ಸಾಹಿತಿ ಗೋಪಾಲ್ ಬಿ.ಶೆಟ್ಟಿ ಅವರಿಗೆ ‘ಮಾನವ ರತ್ನ’ ಹಾಗೂ ಹಿರಿಯರಾದ ಹಾಜಿ ಅಬ್ದುಲ್ಲಾ ಪರ್ಕಳ ಅವರಿಗೆ ‘ಸೇವಾರತ್ನ’ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ವಿವಿಧ ಸಮುದಾಯಗಳ ಹಿರಿಯರಾದ ಅಲೆಯೂರು ಗಣಪತಿ ಕಿಣಿ, ಜನಾರ್ದನ ತೋನ್ಸೆ, ಈಶ್ವರ ಮಲ್ಪೆಹಾಗೂ ಸುಶೀಲ ನಾಡ ಅವರನ್ನು ಸನ್ಮಾನಿಸಲಾಯಿತು.
ಶೈಕ್ಷಣಿಕ ರಂಗದಲ್ಲಿನ ಸೇವೆಗಾಗಿ ಮೂಳೂರಿನ ಅಲ್ಇಹ್ಸಾನ್ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ವಿಶೇಷ ಮಕ್ಕಳ ಸೇವೆಗಾಗಿ ಪಾಂಬೂರಿನ ಮಾನಸ ವಿಶೇಷ ಮಕ್ಕಳ ಶಾಲೆಗಳನ್ನು ಗೌರವಿಸಲಾಯಿತು. ಕ್ರಮವಾಗಿ ಎಂ ಎಚ್ ಬಿ ಮುಹಮ್ಮದ್ ಹಾಗೂ ಹೆನ್ರಿ ಮಿನಜಸ್ ಗೌರವ ಸ್ವೀಕರಿಸಿದರು. ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಹೇಬ್ ಕೋಟ ವಹಿಸಿದ್ದರು.
ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ರಮೇಶ್ ಕಾಂಚನ್, ಜನತಾದಳ ಜಿಲ್ಲಾಧ್ಯಕ್ಷ ಯೋಗಿಶ್ ಶೆಟ್ಟಿ, ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಸಂಯುಕ್ತ ಜಮಾಅತ್ ಅಧ್ಯಕ್ಷ ಅಬೂಬಕರ್ ನೇಜಾರ್, ದಲಿತ ಸಂಘರ್ಷ ಸಮಿತಿ ಸಂಚಾಲಕ ಸುಂದರ್ ಮಾಸ್ಟರ್ ಹಾಗೂ ಕ್ರೈಸ್ತ ಮುಖಂಡ ವಿನೋದ್ ಕ್ರಾಸ್ತ ಗೌರವ ಅತಿಥಿಗಳಾಗಿದ್ದರು.
ಒಕ್ಕೂಟದ ಪ್ರಶಸ್ತಿ ಪ್ರದಾನ ಸಮಾರಂಭದ ಸಂಚಾಲಕ ಇರ್ಷಾದ್ ಅಹ್ಮದ್ ನೇಜಾರ್, ಒಕ್ಕೂಟದ ಅಧ್ಯಕ್ಷ ಹಾಜಿ ಇಬ್ರಾಹಿಂ ಸಾಹೇಬ್ ಕೋಟ, ಮಾಜಿ ಅಧ್ಯಕ್ಷ ಯಾಸೀನ್ ಮಲ್ಪೆ, ಉಪಾಧ್ಯಕ್ಷೆ ಇದ್ರೀಸ್ ಹೂಡೆ, ಕಾರ್ಯದರ್ಶಿ ಇಸ್ಮಾಯಿಲ್ ಹುಸೇನ್ ಕಟಪಾಡಿ, ಖಾಸಿಂ ಬಾರಕೂರು, ಮುಹಮ್ಮದ್ ಶರೀಫ್, ಖತೀಬ್ ರಶೀದ್, ಶಬಿಹ್ ಅಹಮದ್ ಖಾಝಿ, ಮುಹಮ್ಮದ್ ಅಶ್ಪಾಕ್, ಮುಹಮ್ಮದ್ ಗೌಸ್, ಜಫರುಲ್ಲಾ, ಬಿ ಎಸ್ ಎಫ್ ಮುಹಮ್ಮದ್ ರಫೀಕ್ ಮೊದಲಾದವರು ಉಪಸ್ಥಿತರಿದ್ದರು.
ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯಿದಿನಬ್ಬ ಪ್ರಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮೌಲಾ ಸ್ವಾಗತಿಸಿದರು. ಮುಹಮ್ಮದಾಲಿ ಕಮ್ಮರಡಿ ಕಾರ್ಯಕ್ರಮ ನಿರೂಪಿಸಿದರು.
ಪ್ರಶಸ್ತಿಯೊಂದಿಗೆ ದೊರೆತ 25 ಸಾವಿರ ರೂ. ಗೌರವ ಧನವನ್ನು ಹಾಜಿ ಅಬ್ದುಲ್ಲಾ ಪರ್ಕಳ ಅವರು ಹಲವು ಮಂದಿಯ ಜೀವವನ್ನು ರಕ್ಷಿಸಿದ ಸಾಮಾಜಿಕ ಕಾರ್ಯಕರ್ತ ಈಶ್ವರ್ ಮಲ್ಪೆ ಅವರಿಗೆ ನೀಡುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka