ಇಬ್ಭಾಗವಾಗುತ್ತಾ ಜೆಡಿಎಸ್?: ನಮ್ಮದೇ ನೈಜ ಜೆಡಿಎಸ್, 'ಇಂಡಿಯಾ' ಮೈತ್ರಿಕೂಟಕ್ಕೆ ನಮ್ಮ ಬೆಂಬಲ' ಎಂದ ಸಿಎಂ ಇಬ್ರಾಹಿಂ - Mahanayaka
12:39 AM Saturday 23 - August 2025

ಇಬ್ಭಾಗವಾಗುತ್ತಾ ಜೆಡಿಎಸ್?: ನಮ್ಮದೇ ನೈಜ ಜೆಡಿಎಸ್, ‘ಇಂಡಿಯಾ’ ಮೈತ್ರಿಕೂಟಕ್ಕೆ ನಮ್ಮ ಬೆಂಬಲ’ ಎಂದ ಸಿಎಂ ಇಬ್ರಾಹಿಂ

cm ibrahim
17/10/2023


Provided by

ತಮ್ಮದೇ ನೈಜ ಜೆಡಿಎಸ್ ಎಂದಿರುವ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಸಿ.ಎಂ.ಇಬ್ರಾಹಿಂ, ‘ಜೆಡಿಎಸ್‌ ಜಾತ್ಯತೀತ ಸಿದ್ಧಾಂತದ ಪಕ್ಷ, ಬಿಜೆಪಿ ಅದಕ್ಕೆ ವಿರುದ್ಧವಾದ ಪಕ್ಷ. ನಾವು ಬಿಜೆಪಿಯನ್ನು ಬೆಂಬಲಿಸುವುದಿಲ್ಲ. ‘ಇಂಡಿಯಾ’ ಮೈತ್ರಿಕೂಟಕ್ಕೆ ನಮ್ಮ ಬೆಂಬಲ’ ಎಂದಿದ್ದಾರೆ

ಬಿಜೆಪಿ ಜತೆ ಮೈತ್ರಿ ಮಾಡಿಕೊಂಡಿರುವ ಪಕ್ಷದ ವರಿಷ್ಠರ ವಿರುದ್ಧ ಮುನಿಸಿಕೊಂಡಿರುವ ಅವರು, ‘ಜೆಡಿಎಸ್–ಕರ್ನಾಟಕ ಚಿಂತನ ಮಂಥನ ಸಭೆ’ ಹೆಸರಿನಲ್ಲಿ ಸೋಮವಾರ ತಮ್ಮ ಬೆಂಬಲಿಗರ ಸಭೆ ನಡೆಸಿದ ಅವರು, ‘ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಬೇಕು. ಅದಕ್ಕಾಗಿ ‘ಇಂಡಿಯಾ’ ಮೈತ್ರಿಕೂಟವನ್ನು ಬೆಂಬಲಿಸುತ್ತೇವೆ’ ಎಂದು ಘೋಷಿಸಿದರು.

‘ಬಿಜೆಪಿ ಜತೆಗಿನ ಮೈತ್ರಿಯನ್ನು ನಾನು ಒಪ್ಪುವುದಿಲ್ಲ. ಮೈತ್ರಿ ಕುರಿತು ಪಕ್ಷದಲ್ಲಿ ಸಭೆ ನಡೆದಿದೆಯೆ? ಶಾಸಕರ ಜತೆ ಚರ್ಚಿಸಲಾಗಿದೆಯೆ? ನಿರ್ಣಯ ಕೈಗೊಳ್ಳಲಾಗಿದೆಯೆ? ಯಾವುದೂ ಆಗಿಲ್ಲ. ಯಾರನ್ನೂ ಕೇಳದೆ ಎಚ್‌.ಡಿ. ಕುಮಾರಸ್ವಾಮಿ ಅವರು ದೆಹಲಿಗೆ ಹೋಗಿ ಏಕಪಕ್ಷೀಯವಾಗಿ ಮೈತ್ರಿ ಮಾತುಕತೆ ನಡೆಸಿದ್ದಾರೆ. ಅಮಿತ್ ಶಾ ಜತೆ ಫೋಟೊ ತೆಗೆಸಿಕೊಂಡು ಮೈತ್ರಿ ಘೋಷಣೆ ಮಾಡಿದ್ದಾರೆ. ಪಕ್ಷವೆಂದರೆ ಕುಟುಂಬವಲ್ಲ, ಎಲ್ಲರ ಅಭಿಪ್ರಾಯವೂ ಮುಖ್ಯ’ ಎಂದು ವಾಗ್ದಾಳಿ ನಡೆಸಿದರು.

ಮುಸ್ಲಿಮರು ಜೆಡಿಎಸ್‌ ಗೆ ಬೆಂಬಲ ನೀಡಿದ್ದರಿಂದಲೇ ಕುಮಾರಸ್ವಾಮಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅವರು ಶಾಸಕರಾದ ಕಾರಣಕ್ಕೆ ಅಮಿತ್ ಶಾ ಭೇಟಿ ಮಾಡಿದ್ದಾರೆ. ಇಲ್ಲವಾದರೆ ಅವರನ್ನು ಕೇಳುತ್ತಿರಲಿಲ್ಲ. ಕುಮಾರಸ್ವಾಮಿ ಅವರ ಮಗನಿಗೂ ಮುಸ್ಲಿಮರು ಮತ ನೀಡಿದ್ದರು ಎಂದು ಹೇಳಿದರು.

‘ಒಂದು ವರ್ಷ ಹಗಲು, ರಾತ್ರಿ ಸುತ್ತಿ ಪಕ್ಷ ಸಂಘಟಿಸಿದ್ದೇನೆ. ಸಮಾಜದವರ ಕಾಲುಹಿಡಿದು ಮತ ಹಾಕಿಸಿದ್ದೇನೆ. ಪಕ್ಷ ಸಂಘಟಿಸುತ್ತೇನೆ. ಮುಂದೆ ಏನಾಗುವುದೋ ಪರದೆ ಮೇಲೆ ನೋಡಿ’ ಎಂದರು.

‘ನಮ್ಮದೇ ನೈಜ ಜೆಡಿಎಸ್. ನನ್ನನ್ನು ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದ ತೆಗೆಯಲು ಯಾರಿಗೂ ಸಾಧ್ಯವಿಲ್ಲ. 19 ಶಾಸಕರ ಜತೆಗೂ ಚರ್ಚಿಸುತ್ತೇನೆ. ಹೊಸ ಕೋರ್ ಕಮಿಟಿ ರಚಿಸುತ್ತೇನೆ. ಎಲ್ಲರ ಜತೆ ಚರ್ಚಿಸಿದ ಬಳಿಕ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡರನ್ನು ಭೇಟಿಮಾಡಿ ನಮ್ಮ ನಿರ್ಧಾರವನ್ನು ತಿಳಿಸುತ್ತೇನೆ’ ಎಂದು ಇಬ್ರಾಹಿಂ ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಗ್ಗೆ ದ್ವೇಷವಿಲ್ಲ. ಆದರೆ, ಸೈದ್ಧಾಂತಿಕವಾಗಿ ನಾವು ಮತ್ತು ಅವರು ವಿರುದ್ಧ ಇರುವವರು. ಜಾತ್ಯತೀತ ಸಿದ್ಧಾಂತಕ್ಕೆ ನಮ್ಮ ಬೆಂಬಲ. ದೇವೇಗೌಡರೇ ನಿಮಗೀಗ 92 ವರ್ಷ ವಯಸ್ಸಾಗಿದೆ. ಈಗ ತಪ್ಪು ಹೆಜ್ಜೆ ಇಡಬೇಡಿ, ಬಿಜೆಪಿ ಜತೆಗಿನ ಮೈತ್ರಿ ನಿರ್ಧಾರವನ್ನು ಕೈಬಿಡಿ’ ಎಂದು ಮನವಿ ಮಾಡಿದರು.

ಜೆಡಿಎಸ್ ಜಾತ್ಯತೀತ ತತ್ವ ಹಾಗೂ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟಿರುವ ಪಕ್ಷ. ಜಾತ್ಯತೀತ ಸಿದ್ಧಾಂತವನ್ನು ಉಳಿಸಿಕೊಳ್ಳುವುದಕ್ಕಾಗಿಯೇ ದೇವೇಗೌಡರನ್ನು ಪ್ರಧಾನಿ ಮಾಡಲಾಗಿತ್ತು. ಅವರು ರಾಷ್ಟ್ರೀಯ ನಾಯಕರು. ಈ ಬೆಳವಣಿಗೆಯ ಬಗ್ಗೆ ಅವರಿಗೆ ನೋವಿದೆ. ಆದರೆ, ಸ್ವತಂತ್ರವಾಗಿ ನಿರ್ಣಯ ಕೈಗೊಳ್ಳಲು ಅವರಿಗೆ ಸಾಧ್ಯವಾಗುತ್ತಿಲ್ಲ ಎಂದರು.

ಇತ್ತೀಚಿನ ಸುದ್ದಿ