ದೃಶ್ಯಂ ಬಳಿಕ ಸಂಚಲನ ಮೂಡಿಸಿದ “ಜೋಜಿ” | ನಿಮ್ಮೊಳಗೂ ಈ ಜೋಜಿ ಇರಬಹುದು ಚಿತ್ರ ನೋಡಿ - Mahanayaka

ದೃಶ್ಯಂ ಬಳಿಕ ಸಂಚಲನ ಮೂಡಿಸಿದ “ಜೋಜಿ” | ನಿಮ್ಮೊಳಗೂ ಈ ಜೋಜಿ ಇರಬಹುದು ಚಿತ್ರ ನೋಡಿ

joji
09/04/2021

ದೃಶ್ಯಂ ಚಿತ್ರದ ಬಳಿಕ ಇನ್ನೊಂದು ಮಲಯಾಳಂ ಚಿತ್ರ ಸದ್ಯ ಭಾರೀ ಚರ್ಚೆಯಲ್ಲಿದೆ. ಕೇರಳದ ಜನಪ್ರಿಯ ನಟ ಫಹಾದ್ ಫಾಝಿಲ್ ನಟಿಸಿರುವ ಚಿತ್ರದ ಕಥೆ ವೀಕ್ಷಕನನ್ನು ಹಾಗೆಯೇ ಕುತೂಹಲಕ್ಕೀಡು ಮಾಡುತ್ತಲೇ ಹೋಗುತ್ತದೆ.

ಜೋಜಿ ಈ ಚಿತ್ರದಲ್ಲಿ ನಾಯಕನೂ ಹೌದು, ಖಳನಾಯಕನೂ ಹೌದು. ತನ್ನ ಆಸೆಗಳನ್ನೂ ಪೂರೈಸಿಕೊಳ್ಳಲು ಯಾವುದೇ ಅಡೆ ತಡೆಗಳು ಎದುರಾದರೂ ಜೋಜಿ ಅದನ್ನು ಅಳಿಸಿ ಮುಂದೆ ಹೋಗುವ ಸ್ವಭಾವದವನು.

ಜೋಜಿಯ ತಂದೆ ಬಹಳ ಬಲಿಷ್ಠ ವ್ಯಕ್ತಿ. ಆತನ ಬಳಿ ಭಾರೀ ಸಂಪತ್ತು ಇದ್ದರೂ ಮಕ್ಕಳಿಗೆ ಲೆಕ್ಕಕ್ಕಿಂತ 1 ರೂಪಾಯಿ ಹೆಚ್ಚು ಕೊಡಲು ಆತ ಮುಂದಾಗುವುದಿಲ್ಲ. ಒಂದು ವೇಳೆ ಆತನ ಕಣ್ತಪ್ಪಿಸಿ ಮಕ್ಕಳು ಹಣ ಕದ್ದರೆ ಮಕ್ಕಳಿಗೆ ಸರಿಯಾದ ಬುದ್ಧಿ ಹೇಳುತ್ತಾನೆ.

ಹೀಗಿರುವಾಗ ಒಂದು ದಿನ ಜೋಜಿಯ ತಂದೆ ತಮ್ಮ ಪುಟ್ಟ ಬಾವಿಯಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಕೆಸರಿನಲ್ಲಿ ಹೂತು ಹೋಗಿದ್ದ ಪಂಪ್ ನ ಪೈಪ್ ತೆಗೆಯಲು ವಿಪರೀತ ಬಲ ಪ್ರಯೋಗಿಸುತ್ತಾರೆ. ಪೈಪ್ ಕೆಸರಿನಿಂದ ಮೇಲೆ ಬಂದಾಗ ಜೋಜಿಯ ತಂದೆ  ಕುಸಿದು ಬೀಳುತ್ತಾರೆ.

ಕುಸಿದು ಬಿದ್ದ ಅವರನ್ನು ಆಸ್ಪತ್ರೆಗೆ ಕೊಂಡು ಹೋಗುತ್ತಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ವಾಪಸ್ ಕರೆ ತರುವಾಗ ತಂದೆ ಬಹಳ ಕ್ಷೀಣ ಸ್ಥಿತಿಯಲ್ಲಿರುತ್ತಾರೆ. ಈ ಸ್ಥಿತಿಯಲ್ಲಿಯೇ ಮಕ್ಕಳ ತಲೆಯೊಳಗೆ ಏನೆಲ್ಲ ಇದೆ ಎನ್ನುವುದು ಹೊರ ಬರುತ್ತದೆ.

ತಂದೆ ಸತ್ತು ಹೋದರೆ ಅವರ ಉತ್ತರಾಧಿಕಾರ, ಆಸ್ತಿ ಸಿಗುತ್ತದೆ ಎನ್ನುವ ಆಸೆಯಲ್ಲಿ ಮಕ್ಕಳಿರುತ್ತಾರೆ. ಪ್ರತಿಯೊಬ್ಬರ ತಲೆಯಲ್ಲಿಯೂ  ತಂದೆ ಸಾಯಬೇಕು ಎನ್ನುವ ಆಸೆ ಇದೆ. ಅದನ್ನು ತಂದೆಯ ಮೇಲಿನ ಪ್ರೀತಿಯಿಂದ ಹೇಳುವಂತೆ ಅವರು ನಟಿಸುತ್ತಾರೆ. ತಂದೆಗೆ ಸಂಧ್ಯಾ ಪ್ರಾರ್ಥನೆ ಮಾಡಬೇಕು. ಅವರ ಕೊನೆ ಕ್ಷಣದಲ್ಲಿ ಅವರು ಮಾಡಿದ ಪಾಪ ಕರ್ಮಗಳಿಗೆ ದೇವರ ಬಳಿ ಕ್ಷಮೆ ಕೇಳ ಬೇಕು ಎಂದು ಹೇಳುತ್ತಾರೆ.

ಈ ಪ್ರಾರ್ಥನೆ ಮನೆಯಲ್ಲಿ ನಡೆಯುತ್ತಿದ್ದಂತೆಯೇ ಹಿರಿಯ ಪುತ್ರ ತಂದೆಯನ್ನು ಬಲವಂತವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ತಂದೆಗೆ ಸರ್ಜರಿ ನಡೆಸಲಾಗುತ್ತದೆ. ಈ ವೇಳೆ ಜೋಜಿಯ ತಂದೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಬರುತ್ತದೆ. ಇದನ್ನು ಕಂಡು ಮಕ್ಕಳಿಗೆ ಮತ್ತೆ ನಿರಾಸೆಯಾಗುತ್ತದೆ. ಈ ನಡುವೆ ಜೋಜಿ ತನ್ನ ತಂದೆಯನ್ನು ಸಮಾಧಾನ ಮಾಡುವ ನೆಪದಲ್ಲಿ ತಂದೆಯ ಬಳಿಗೆ ಬರುತ್ತಾನೆ. ತನಗೆ ಹಣ ನೀಡುವಂತೆ ಕೇಳುತ್ತಾನೆ. ಆದರೆ ತಂದೆ ಆಗಲೂ ಆತನ ಕತ್ತು ಹಿಡಿದು ಎತ್ತಿ ಎಸೆಯುತ್ತಾರೆ.

ತಂದೆ ಗುಣಮುಖರಾದರೆ ತನಗೆ ಉಳಿಗಾಲವಿಲ್ಲ ಎಂದು ಅರಿತ ಜೋಜಿ ತಂದೆಯ ಕೊಲೆಗೆ ಪ್ಲಾನ್ ಮಾಡುತ್ತಾನೆ. ಆತ ಏನೇನು ಮಾಡುತ್ತಾನೆ ಮತ್ತು ಕೊನೆಗೆ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ.

ಪ್ರತಿಯೊಂದು ಮನೆಯಲ್ಲಿಯೂ ಮನೆಯ ಹಿರಿಯರು ಸಾವಿಗೀಡಾಗುವ ಸಂದರ್ಭ ಏನೆಲ್ಲ ಕಂಡು ಬರುತ್ತದೋ ಅದೆಲ್ಲವೂ ಜೋಜಿ ಚಿತ್ರದಲ್ಲಿದೆ. ಚಿತ್ರವು ಬಹಳ ಸರಳವಾಗಿ ಮತ್ತು ಇದು ನಿಜವಾಗಿಯೇ ನಡೆಯುತ್ತಿದೆ ಎಂಬ ಭ್ರಮೆಗೆ ಹೋಗುವಷ್ಟರ ಮಟ್ಟಿಗೆ ಕಥೆಗಳಿವೆ. ಭಾಷೆ ಬೇರೆಯೇ ಆಗಿದ್ದರೂ, ಈ ಚಿತ್ರ ಸುಲಭವಾಗಿ ಅರ್ಥವಾಗುತ್ತದೆ.   ಚಿತ್ರವು ಈ ತಿಂಗಳ 7 ರಂದು ಅಮೆಜಾನ್ ಪ್ರೈಮ್‌ ನಲ್ಲಿ ಬಿಡುಗಡೆಯಾಗಿದೆ. ಪ್ರತಿಯೊಬ್ಬರು ಈ ಚಿತ್ರವನ್ನು ನೋಡಲೇ ಬೇಕಿದೆ. ನಮ್ಮೊಳಗಿರುವ ಜೋಜಿಯನ್ನು ಆಗ ನಾವು ಕಾಣಬಹುದಾಗಿದೆ.

ಇತ್ತೀಚಿನ ಸುದ್ದಿ