ಆಘಾತ: ಹತ್ಯೆಗೀಡಾದ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ರ ತಂದೆ ಇನ್ನಿಲ್ಲ: ಕೊಲೆ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವೇ ದಿನಗಳಲ್ಲಿ ನಿಧನ

ಪತ್ರಕರ್ತೆ ಸೌಮ್ಯ ವಿಶ್ವನಾಥನ್ ಹಂತಕರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೆಲವು ದಿನಗಳ ನಂತರ ಅವರ ತಂದೆ ಎಂ.ಕೆ.ವಿಶ್ವನಾಥನ್ ನಿಧನರಾಗಿದ್ದಾರೆ.
ಸೌಮ್ಯ ಹಂತಕರಿಗೆ ನವೆಂಬರ್ 25ರಂದು ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಸೌಮ್ಯ ಅವರ 82 ವರ್ಷದ ತಂದೆ ಹೃದಯಾಘಾತದಿಂದ ವಿಚಾರಣೆಗೆ ಎರಡು ದಿನಗಳ ಮೊದಲು ಆಸ್ಪತ್ರೆಗೆ ದಾಖಲಾಗಿದ್ದರು. ಐವರು ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸುತ್ತಿದ್ದಂತೆ ಎಂ.ಕೆ.ವಿಶ್ವನಾಥನ್ ಅವರಿಗೆ ತೀವ್ರ ನಿಗಾ ಘಟಕದಿಂದ (ಐಸಿಯು) ಕಲಾಪಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲು ಕುಟುಂಬ ಸದಸ್ಯರೊಬ್ಬರು ಆಸ್ಪತ್ರೆಯಿಂದ ಆನ್ ಲೈನ್ ನಲ್ಲಿ ವಿಚಾರಣೆಗೆ ಲಾಗ್ ಇನ್ ಆಗಿದ್ದರು.
2008ರಲ್ಲಿ 26 ವರ್ಷದ ಸೌಮ್ಯ ವಿಶ್ವನಾಥನ್ ಕೊಲೆಯಾದ ಬಳಿಕ ಆಕೆಯ ಪೋಷಕರಾದ ಎಂ.ಕೆ.ವಿಶ್ವನಾಥನ್ ಮತ್ತು ಮಾಧವಿ ವಿಶ್ವನಾಥನ್ ತಮ್ಮ ಮಗಳಿಗೆ ನ್ಯಾಯ ದೊರಕಿಸಿಕೊಡಲು ಸುದೀರ್ಘ ಕಾನೂನು ಹೋರಾಟ ನಡೆಸಿದ್ದರು.
14 ವರ್ಷಗಳ ವಿಚಾರಣೆಯುದ್ದಕ್ಕೂ ಪೋಷಕರು ಇಬ್ಬರೂ ನ್ಯಾಯಾಲಯದಲ್ಲಿ ಒಂದು ಭಾಗವಾಗಿದ್ದರು. ಪ್ರತಿ ವಿಚಾರಣೆಗೆ ಹಾಜರಾಗುತ್ತಿದ್ದರು ಮತ್ತು ವಿಚಾರಣೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
ತನ್ನ ಆರೋಗ್ಯ ಸಮಸ್ಯೆಗಳು ಉದ್ಭವಿಸಿದರೂ ವಿಶ್ವನಾಥನ್ ಕೈಯಲ್ಲಿ ವಾಕಿಂಗ್ ಸ್ಟಿಕ್ ಹಿಡಿದು ನ್ಯಾಯಾಲಯಕ್ಜೆ ಹಾಜರಾಗುತ್ತಿದ್ದರು. ಮತ್ತು ತಮ್ಮ ಮಗಳಿಗೆ ನ್ಯಾಯ ಸಿಗಲಿ ಎಂದು ಬಯಸಿದ್ದರು.
ಐವರು ಆರೋಪಿಗಳಿಗೆ ಶಿಕ್ಷೆಯಾದ ದಿನ ನಿರಾಳರಾದ ಎಂ.ಕೆ.ವಿಶ್ವನಾಥನ್ ಅವರು ಈ ವಿಷಯವು “ಅದರ ತಾರ್ಕಿಕ ಅಂತ್ಯಕ್ಕೆ ಬರಬೇಕು” ಎಂದು ಹೇಳಿದ್ದರು.