ವಿಶೇಷ ಪ್ಯಾಕೇಜ್ ಮೂರು ನಾಮ? | ಮುಂಗೈಗೆ ಬೆಲ್ಲ ಒರೆಸಿ ನೆಕ್ಕಿ ಎಂದಿತಾ ರಾಜ್ಯ ಸರ್ಕಾರ?
ಬೆಂಗಳೂರು: ರಾಜ್ಯ ಸರ್ಕಾರ ಸಂಕಷ್ಟದಲ್ಲಿರುವ ಜನರಿಗೆ ಪ್ಯಾಕೇಜ್ ಘೋಷಣೆ ಮಾಡಿ, ಅದನ್ನು ಜಾರಿಗೊಳಿಸದೇ ಜನರಿಗೆ ಮೂರು ನಾಮ ಹಾಕುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದ್ದು, ಪ್ಯಾಕೇಜ್ ಘೋಷಣೆಯಾಗಿ 5 ದಿನಗಳಾದರೂ ಇಲ್ಲಿಯವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿಲ್ಲ.
ಈ ಬಾರಿ ಲಾಕ್ ಡೌನ್ ಸಂದರ್ಭದಲ್ಲಿ 3.04 ಲಕ್ಷ ಮಂದಿಗೆ ನೆರವು ನೀಡುವುದಾಗಿ ರಾಜ್ಯ ಸರ್ಕಾರ ಹೇಳಿತ್ತು. ಆದರೆ ಪ್ಯಾಕೇಜ್ ಘೋಷಣೆಯಾಗಿ ಐದು ದಿನಗಳಾದರೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿಲ್ಲ. ಈ ನಡುವೆ ಲಾಕ್ ಡೌನ್ ಕೂಡ ಬಿಗಿಗೊಳಿಸುವ ಬಗ್ಗೆ ಸರ್ಕಾರ ಮಾತನಾಡುತ್ತಿದೆ. ಜನರು ರಸ್ತೆಗೆ ಇಳಿಯದಿದ್ದರೆ, ಅರ್ಜಿಯನ್ನೂ ನೀಡುವುದಾದರೂ ಹೇಗೆ? ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೇಳಿದರೆ, ಹಳ್ಳಿಯ ಜನ ಹೇಗೆ ತಾನೆ ಸರ್ಕಾರದ ಸವಲತ್ತು ಪಡೆಯಲು ಸಾಧ್ಯ? ಎನ್ನುವ ಸಾವಿರ ಪ್ರಶ್ನೆಗಳ ನಡುವೆಯೇ, ಕೊರೊನಾ ಪ್ರಕರಣಗಳ ಇಳಿಕೆಯ ಆಧಾರದಲ್ಲಿ ಸರ್ಕಾರ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿದೆ ಎನ್ನುವ ಅನುಮಾನಗಳೂ ಕೇಳಿ ಬಂದಿದೆ.
ಪ್ಯಾಕೇಜ್ ಘೋಷಣೆಯ ಬಳಿಕ ಎಲ್ಲ ಇಲಾಖೆಗಳು ಕೂಡ ಅರ್ಜಿ ಸಲ್ಲಿಕೆಗೆ ಪ್ರತ್ಯೇಕ ಸಾಫ್ಟ್ ವೇರ್ ಲಿಂಕ್ ಅಳವಡಿಸಲು ಮುಂದಾಗಿವೆ. ಈ ಕೆಲಸ ಇನ್ನೂ ಪೂರ್ಣಗೊಂಡಿಲ್ಲ. ಜೂನ್ 7ರ ವೇಳೆಗೆ ಕೊರೊನಾ ಸೋಂಕಿನ ಪ್ರಕರಣಗಳು ತೀರಾ ಕಡಿಮೆಯಾಗಲಿದೆ ಎಂದು ಸರ್ಕಾರ ಹೇಳುತ್ತಿದೆ. ಹೀಗಾಗಿ ಜೂನ್ 7ರ ಬಳಿಕ ಲಾಕ್ ಡೌನ್ ಓಪನ್ ಆಗುವ ಸಾಧ್ಯತೆಗಳಿವೆ. ಲಾಕ್ ಡೌನ್ ಓಪನ್ ಆದ ಬಳಿಕ ಜನರು ತಮ್ಮ ದುಡಿಮೆಗೆ ಮರಳುತ್ತಾರೆ. ಆ ಬಳಿಕ ಸರ್ಕಾರದ ಪ್ಯಾಕೇಜ್ ನ ಹಿಂದೆ ಹೋಗಲು ಯಾರಿಗೂ ಸಮಯ ಕೂಡ ಇರುವುದಿಲ್ಲ. ಹೀಗಾಗಿ ಅರ್ಜಿ ಸಲ್ಲಿಸಿದ ಕೆಲವೇ ಕೆಲವು ಮಂದಿಗೆ ಸರ್ಕಾರ ಪರಿಹಾರ ನೀಡಿ, ನಾವು ಕೊವಿಡ್ ಸೋಂಕಿನ ಸಂದರ್ಭದಲ್ಲಿ ಪರಿಹಾರ ನೀಡಿದ್ದೇವೆ ಎನ್ನುವ ಲಾಭದ ಪ್ರಚಾರವನ್ನು ಸರ್ಕಾರ ಪಡೆದುಕೊಳ್ಳಲಿದೆ ಹಿಡಿದಿದೆ ಎಂದು ಸಾರ್ವಜನಿಕರವಾಗಿ ಅಭಿಪ್ರಾಯಗಳು ಕೇಳಿ ಬಂದಿದೆ.
ಜನರಿಗೆ ಸರ್ಕಾರದ ಪ್ಯಾಕೇಜ್ ಅಗತ್ಯವಿರುವುದು, ಲಾಕ್ ಡೌನ್ ನ ಈ ಅವಧಿಯಲ್ಲಿ. ಆದರೆ ಸರ್ಕಾರ ಪ್ಯಾಕೇಜ್ ಘೋಷಿಸಿ ಐದು ದಿನವಾದರೂ, ಅರ್ಜಿ ಸಲ್ಲಿಕೆಗೆ ಅವಕಾಶ ನೀಡಿಲ್ಲ, ಪ್ಯಾಕೇಜ್ ಘೋಷಣೆಯ ಬಳಿಕ ಆ ಪ್ಯಾಕೇಜ್ ಬಗ್ಗೆ ಆಡಳಿತ ಪಕ್ಷ ಏನು ಕೂಡ ಮಾತನಾಡುತ್ತಲೂ ಇಲ್ಲ. ಬೇರೆ ರಾಜ್ಯಗಳು ಪ್ಯಾಕೇಜ್ ಘೋಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಒತ್ತಡಕ್ಕೆ ಸಿಲುಕಿ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ಪ್ಯಾಕೇಜ್ ಘೋಷಣೆ ಮಾಡಲು ಸರ್ಕಾರಕ್ಕೂ ಉತ್ಸಾಹ ಇರಲಿಲ್ಲ, ಅರೆ ಮನಸ್ಸನಲ್ಲಿ ಘೋಷಣೆ ಮಾಡಿದ ಪ್ಯಾಕೇಜ್ ಊಟಕ್ಕಿಲ್ಲದ, ಉಪ್ಪಿನ ಕಾಯಿಯಾಗಿದ್ದು, ಮುಂಗೈಗೆ ಬೆಲ್ಲ ಒರೆಸಿ ನೆಕ್ಕಿಸುವ ಪ್ರಯತ್ನವಾಗಿದೆ ಎನ್ನುವ ಆಕ್ರೋಶದ ಮಾತುಗಳು ಕೇಳಿ ಬಂದಿವೆ.