ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ತಿಕ್ ಗೌಡ ಪಾರ್ಥೀವ ಶರೀರದೆದುದು ಕಣ್ಣೀರಾದ ಸಾಕುನಾಯಿ - Mahanayaka

ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ತಿಕ್ ಗೌಡ ಪಾರ್ಥೀವ ಶರೀರದೆದುದು ಕಣ್ಣೀರಾದ ಸಾಕುನಾಯಿ

karethik gowda
24/11/2023


Provided by

ಕಾಡಾನೆ ದಾಳಿಯಿಂದ ಮೃತಪಟ್ಟ ಕಾರ್ತಿಕ್ ಗೌಡ ಅವರ ಅಂತಿಮ ದರ್ಶನದ ವೇಳೆ ದುಃಖಭರಿತ ಭಾವುಕ ಕ್ಷಣವೊಂದಕ್ಕೆ ಸಾಕ್ಷಿಯಾಯಿತು.

ಕಾರ್ತಿಕ್ ಗೌಡ ಅವರ ಮುದ್ದಿನ ಸಾಕುನಾಯಿ ತನ್ನ ಒಡೆಯನ ಪಾರ್ಥೀವ ಶರೀರದೆದುರು ಮೂಕವಾಗಿ ಕಣ್ಣೀರು ಹಾಕಿ ನೆರೆದಿದ್ದ ನೂರಾರು ಜನರ ಕಣ್ಣಾಲಿಗಳು ನೀರಾದ ಘಟನೆ ನಡೆಯಿತು.

ಮೂಡಿಗೆರೆ ತಾಲ್ಲೂಕಿನ ಹೊಸಕೆರೆ ಗ್ರಾಮದಲ್ಲಿ ಬುಧವಾರ ಸಂಜೆ ಆನೆಯನ್ನು ಕಾಡಿಗಟ್ಟುತ್ತಿದ್ದ ಸಂದರ್ಭದಲ್ಲಿ ಆನೆ ಕಾರ್ಯಾಚರಣೆ ಪಡೆಯ ನೌಕರ ಕಾರ್ತಿಕ್ ಗೌಡ ಮೇಲೆ ಕಾಡಾನೆ ದಾಳಿ ನಡೆಸಿ ಸಾಯಿಸಿದ್ದ ಘಟನೆ ನಡೆದಿತ್ತು.

ಮರಣೋತ್ತರ ಪರೀಕ್ಷೆಯ ನಂತರ ಕಾರ್ತಿಕ್ ಅವರ ಸ್ವಗ್ರಾಮ ಗೌಡಹಳ್ಳಿಯ ಅವರ ಮನೆಯಲ್ಲಿ ಗುರುವಾರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಗುರುವಾರ ಬೆಳಗ್ಗೆಯಿಂದಲೂ ಸಾವಿರಾರು ಜನರು ತಂಡೋಪತಂಡವಾಗಿ ಆಗಮಿಸಿ ಕಾರ್ತಿಕ್ ಗೌಡ ಅವರ ಅಂತಿಮ ದರ್ಶನ ಪಡೆದರು.

ಕಾರ್ತಿಕ್ ಗೌಡ ಅವರು ಮುದ್ದಿನಿಂದ ಸಾಕಿದ್ದ ಅವರ ಸಾಕುನಾಯಿ ಚಾರ್ಲಿ ಮನೆಯಂಗಳದ ಗೂಡಿನಲ್ಲಿ ಮೂಕ ಪ್ರೇಕ್ಷಕನಾಗಿ ಮನೆಯೆದುರು ನಡೆಯುತ್ತಿದ್ದ ಸನ್ನಿವೇಶವನ್ನು ಗಮನಿಸುತ್ತಿತ್ತು. ಇಷ್ಟೊಂದು ಜನರಿದ್ದರೂ ತನ್ನ ಯಜಮಾನ ಮಾತ್ರ ಕಣ್ಣಿಗೆ ಬೀಳದೇ ಇದ್ದುದ್ದರಿಂದ ಒಂದು ರೀತಿಯಲ್ಲಿ ವಿಚಲಿತವಾಗಿ ಬಾಲ ಅಲ್ಲಾಡಿಸುತ್ತಾ ನಿಂತಿತ್ತು.

ಮಧ್ಯಾಹ್ನ ಸುಮಾರು 3 ಗಂಟೆಯ ಸಮಯದಲ್ಲಿ ನಾಯಿಯನ್ನು ಗೂಡಿನಿಂದ ಹೊರತಂದ ತಕ್ಷಣ ತನ್ನ ಒಡೆಯನ ಪಾರ್ಥೀವ ಶರೀರದೆದುರು ಬಂದು ಭಾವುಕವಾಗಿ ಕಣ್ಣೀರು ಹಾಕಿತು. ಹತ್ತಿರಕ್ಕೆ ಬಂದರೂ ತನ್ನ ಯಜಮಾನ ಯಾಕೆ ತನ್ನನ್ನು ಮುದ್ದಿಸುತ್ತಿಲ್ಲ ಎಂದು ಮೂಕವೇದನೆ ಅನುಭವಿಸಿತು. ಪಾರ್ಥೀ ಶರೀರದೆದುರು ಅತ್ತಿಂದಿತ್ತ ತಿರುಗುತ್ತಾ ತನ್ನ ನೋವನ್ನು ವ್ಯಕ್ತಪಡಿಸುತ್ತಿತ್ತು.

ಈ ದೃಶ್ಯವನ್ನು ಕಂಡು ಮೃತ ಕಾರ್ತಿಕ್ ತಾಯಿ ಇನ್ನಷ್ಟು ದುಃಖಿತರಾದರು, ನೆರೆದಿದ್ದ ಬಂಧುಗಳು ಇನ್ನಷ್ಟು ಭಾವುಕರಾಗಿ ಕಣ್ಣೀರು ಸುರಿಸಿದರು. ಕೊನೆಗೆ ಚಾರ್ಲಿಯನ್ನು ಒತ್ತಾಯ ಪೂರ್ವಕವಾಗಿ ಅಲ್ಲಿಂದ ಕರೆದೊಯ್ದು ಗೂಡಿಗೆ ಸೇರಿಸಲಾಯ್ತು.

ಸಾಕುಪ್ರಾಣಿಗಳ ಪ್ರಿಯನಾಗಿದ್ದ ಕಾರ್ತಿಕ್ ತನ್ನ ಮುದ್ದಿನ ನಾಯಿಗೆ ಚಾರ್ಲಿ ಎಂದು ಹೆಸರಿಟ್ಟು ಪ್ರೀತಿಯಿಂದ ಸಾಕಿದ್ದರು. ಹಾಗೆಯೇ ಅವರ ಮನೆಯಲ್ಲಿ ಅನೇಕ ಗೋವುಗಳನ್ನು ಸಾಕಿ ಸಲಹಿದ್ದರು. ತನ್ನ ಕೆಲಸ ಮುಗಿದು ಬಂದ ನಂತರ ಸಂಜೆ ಬೇಗ ಮನೆಗೆ ಬಂದಾಗ, ರಜಾ ದಿನಗಳಲ್ಲಿ ಗೋವುಗಳನ್ನು ಸಮೀಪದ ಗದ್ದೆ ಬಯಲಿನಲ್ಲಿ ತಾವೇ ಸ್ವತಃ ಕರೆದೊಯ್ದು ಮೇಯಿಸುತ್ತಿದ್ದರು.

ಹೀಗೆ ಸಾಕುಪ್ರಾಣಿಗಳೆಂದರೆ ಅತ್ಯಂತ ಪ್ರಿಯವಾಗಿದ್ದ ಕಾರ್ತಿಕ್ ಬದುಕಿಗೆ ಕಾಡುಪ್ರಾಣಿಯೊಂದು ಎರವಾಗಿ ಪರಿಣಮಿಸಿತ್ತು. ಆನೆ ಕಾರ್ಯಪಡೆಯಲ್ಲಿ ಕಳೆದ ಒಂದು ವರ್ಷದಿಂದ ಕಾರ್ಯನಿರ್ವಹಿಸುತ್ತಿದ್ದ ಕಾರ್ತಿಕ್ ಸಾಹಸಮಯ ವ್ಯಕ್ತಿತ್ವ ಹೊಂದಿದ್ದು ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಿಂತು ಆನೆಗಳನ್ನು ಕಾಡಿಗಟ್ಟಲು ಮುಂದಾಗುತ್ತಿದ್ದರು. ಈ ಹಿಂದೆಯೂ ಅನೇಕ ಬಾರಿ ಕೂದಲೆಳೆಯ ಅಂತರದಿಂದ ಪಾರಾಗಿದ್ದರು. ಆದರೆ ಬುಧವಾರ ಮಾತ್ರ ಅವರ ಬದುಕಿನ ಅಂತ್ಯವೇ ಆಗಿತ್ತು.

ಇತ್ತೀಚಿನ ಸುದ್ದಿ