ಕವಲು ಹಾದಿಗಳ ನಡುವೆ ಶ್ರಮಜೀವಿಗಳ ಪಯಣ | ನಾ ದಿವಾಕರ - Mahanayaka
9:23 AM Thursday 14 - November 2024

ಕವಲು ಹಾದಿಗಳ ನಡುವೆ ಶ್ರಮಜೀವಿಗಳ ಪಯಣ | ನಾ ದಿವಾಕರ

may day
01/05/2021

ಆತ್ಮನಿರ್ಭರ ಭಾರತ ಹೊಸ ಆರ್ಥಿಕ ದಿಸೆಯಲ್ಲಿ ಸಾಗುತ್ತಿರುವ ಸಂದರ್ಭದಲ್ಲೇ ಭಾರತದ ದುಡಿಯುವ ವರ್ಗಗಳು ಹಂತಹಂತವಾಗಿ ಶಿಥಿಲವಾಗುತ್ತಿರುವ ತಮ್ಮ ಸುಭದ್ರ ನೆಲೆಗಳ ಭವಿಷ್ಯದ ಬಗ್ಗೆ ಆತಂಕಗಳನ್ನು ಹೊತ್ತು ಮತ್ತೊಂದು ಮೇ ದಿನವನ್ನು ಆಚರಿಸುತ್ತಿವೆ. 135 ವರ್ಷಗಳ ಇತಿಹಾಸ ಇರುವ ಮೇ ದಿನಾಚರಣೆಗೆ ಈ ಸಂದರ್ಭದಲ್ಲಿ ಒಂದು ಹೊಸ ಆಯಾಮವನ್ನು ನೀಡುವ ಅನಿವಾರ್ಯತೆಯನ್ನೂ  ಕಾರ್ಮಿಕ ಸಂಘಟನೆಗಳು ಎದುರಿಸುತ್ತಿವೆ. “ ವಿಶ್ವ ಕಾರ್ಮಿಕರೇ ಒಂದಾಗಿ ” ಎನ್ನುವ ಘೋಷಣೆ ಮೊಳಗಿಸುವ ಮುನ್ನ ಒಂದಾಗಬೇಕಿರುವುದು ಏತಕ್ಕಾಗಿ ಎನ್ನುವ ಪ್ರಶ್ನೆ ನಮ್ಮನ್ನು ಕಾಡಲೇಬೇಕಿದೆ.

ಹೇ ಮಾರ್ಕೆಟ್ ಚೌಕದಲ್ಲಿ ನಡೆದ ಘಟನೆಗಳ ನಂತರ ವಿಶ್ವ ಸಾಕಷ್ಟು ಬದಲಾಗಿದೆ. ಬದಲಾಗುತ್ತಲೂ ಇದೆ. ಬಂಡವಾಳದ ಸ್ವರೂಪ, ಬಂಡವಾಳ ಹೂಡಿಕೆ ಮತ್ತು ಹರಿವಿನ ಮಾರ್ಗಗಳು, ಉತ್ಪಾದನೆಯ ಮಾರ್ಗ ಮತ್ತು ವಿಧಾನಗಳು, ಉತ್ಪಾದನಾ ಸಂಬಂಧಗಳು ಮತ್ತು ಉತ್ಪಾದನಾ ಸಾಧನಗಳ ಬಳಕೆ ಹೀಗೆ ಎಲ್ಲ ಆಯಾಮಗಳಲ್ಲೂ ವಿಶ್ವ ಆರ್ಥಿಕತೆ ರೂಪಾಂತರಗೊಳ್ಳುತ್ತಿದೆ. ಶೋಷಣೆಯ ಮಾರ್ಗಗಳೂ ಬದಲಾಗುತ್ತಿವೆ. ಶೋಷಣೆಯ ಸ್ವರೂಪ ವಿಭಿನ್ನ ನೆಲೆಗಳಲ್ಲಿ ವ್ಯಕ್ತವಾಗುತ್ತಿದೆ. ಕಾರ್ಮಿಕರ ಬದುಕೂ ಬದಲಾಗಿದೆ, ಜೀವನ ಮಟ್ಟ ಸುಧಾರಿಸಿದೆ ಹಾಗೆಯೇ ಶ್ರಮಜೀವಿಗಳ ದೃಷ್ಟಿಕೋನವೂ ಬದಲಾಗುತ್ತಲೇ ಬಂದಿದೆ.

ಭಾರತದ ಸಂದರ್ಭದಲ್ಲಿ ಹೇಳುವುದಾದರೆ ಕಾರ್ಮಿಕ ಚಳುವಳಿ ಮತ್ತೊಂದು ರೂಪಾಂತರದತ್ತ ಹೊರಳಬೇಕಿದೆ.  ನಾಲ್ಕನೆ ಔದ್ಯಮಿಕ ಕ್ರಾಂತಿ ಅಥವಾ ಡಿಜಿಟಲ್ ಯುಗದ ಸಂದರ್ಭದಲ್ಲಿ ಭಾರತದ ದುಡಿಯುವ ವರ್ಗಗಳು ಹಲವು ಸಮಸ್ಯೆಗಳನ್ನು, ವಿಭಿನ್ನ ನೆಲೆಗಳಲ್ಲಿ, ವಿಭಿನ್ನ ಆಯಾಮಗಳಲ್ಲಿ ಎದುರಿಸುತ್ತಿದ್ದಾರೆ. ಹಳ್ಳಿಗಾಡಿನ ಭೂಹೀನ ಕೃಷಿ ಕಾರ್ಮಿಕನಿಂದ ಹವಾನಿಯಂತ್ರಿತ ಕೊಠಡಿಯಲ್ಲಿನ ಸಾಫ್ಟ್ ವೇರ್ ಕೂಲಿಯವರೆಗೂ ದುಡಿಮೆ ಮಾರುಕಟ್ಟೆ ವ್ಯವಸ್ಥೆಯನ್ನು ಪೋಷಿಸುವ ಒಂದು ಸಾಧನವಾಗಿದೆ. ಈ ದುಡಿಮೆಯ ನೆಲೆಗಳು ಸಾಮಾಜಿಕ, ಆರ್ಥಿಕ, ಭೌಗೋಳಿಕ ಮತ್ತು ಸಾಂಸ್ಕೃತಿಕ ಭೂಮಿಕೆಗಳಲ್ಲಿ ಮುನ್ನೆಲೆಗೆ ಬರುತ್ತಿವೆ.

ಶ್ರಮಜೀವಿಗಳು ಕಳೆದುಕೊಳ್ಳಬೇಕಿರುವ ದಾಸ್ಯದ ಸಂಕೋಲೆಗಳು ಕೇವಲ ಮಾರುಕಟ್ಟೆ ಆರ್ಥಿಕತೆಗೆ ಸೀಮಿತವಾಗಿ ಉಳಿದಿಲ್ಲ. ತನ್ನ ಶ್ರಮವನ್ನು ಕೂಲಿಗಾಗಿ ಖರ್ಚು ಮಾಡುವ ಶ್ರಮಿಕನಿಗೆ ತಾನು ಪಡೆಯುವ ಅಲ್ಪ ಕೂಲಿಯೊಡನೆಯೇ ತನ್ನ ಸಮಾಜೋ ಸಾಂಸ್ಕೃತಿಕ ಅಸ್ಮಿತೆಗಳನ್ನು, ಭೌಗೋಳಿಕ ನೆಲೆಗಳನ್ನು ಕಾಪಾಡಿಕೊಳ್ಳುವ ಅನಿವಾರ್ಯತೆ ಎದುರಾಗಿದೆ. ಡಾ ಬಿ ಆರ್ ಅಂಬೇಡ್ಕರ್ ಹೇಳಿದಂತೆ ಭಾರತದಲ್ಲಿ ಶ್ರಮ ವಿಭಜನೆಯೊಂದಿಗೇ ಶ್ರಮಿಕರ ವಿಭಜನೆಯೂ ಒಂದು ಬೃಹತ್ ಸಮಸ್ಯೆಯಾಗಿಯೇ ತೋರುತ್ತದೆ. ಈ ಶ್ರಮಿಕರ ವಿಭಜನೆ ಸಾಮಾಜಿಕ ನೆಲೆಯಲ್ಲಿ ಧೃವೀಕರಣಗೊಂಡರೆ, ಶ್ರಮವಿಭಜನೆ ಆರ್ಥಿಕ ನೆಲೆಯಲ್ಲಿ ವ್ಯಕ್ತವಾಗುತ್ತದೆ.




70 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರವೂ ಭಾರತದ ಹಳ್ಳಿಗಾಡುಗಳಲ್ಲಿ ಮತ್ತು ಕಾಸ್ಮಾಪಾಲಿಟನ್ ನಗರಗಳಲ್ಲೂ ಸಹ ಈ ವಿಭಜನೆಯ ಆಯಾಮಗಳನ್ನು ಅರಿತುಕೊಳ್ಳುವುದರಲ್ಲಿ ನಾವು ಎಡವುತ್ತಿದ್ದೇವೆ. ಸಾಮಾಜಿಕ ಶೋಷಣೆಯ ಸ್ವರೂಪಗಳು ಬದಲಾಗುತ್ತಿದ್ದರೂ, ಶೋಷಣೆಯ ಮೂಲ ತಾತ್ವಿಕ ನೆಲೆಗಳು ದಿನೇದಿನೇ ಗಟ್ಟಿಯಾಗುತ್ತಿರುವುದನ್ನು ನಾವು ಗಮನಿಸಬೇಕಿದೆ. ಇದು ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಅಂತಃಶಕ್ತಿ ಎನ್ನುವ ವಾಸ್ತವವನ್ನೂ ಅರ್ಥಮಾಡಿಕೊಳ್ಳಬೇಕಿದೆ. ಪ್ರಾತಿನಿಧಿಕ ನೆಲೆಯಲ್ಲಿ ನೋಡಿದಾಗ ಕಾರ್ಮಿಕ ಚಳುವಳಿಗಳು ತಮ್ಮ ದೃಷ್ಟಿ ದಿಗಂತವನ್ನು ಇನ್ನೂ ವಿಸ್ತರಿಸಿಕೊಳ್ಳಬೇಕಿದೆ. ಇದು ವಾಸ್ತವ.

ಭಾರತ ಇಂದು ಹೊಸ ದಿಕ್ಕಿನತ್ತ ಚಲಿಸುತ್ತಿದೆ. ಭಾರತದ ಆಳುವ ವರ್ಗಗಳು ದೇಶವನ್ನು ಮತ್ತೊಮ್ಮೆ ವಸಾಹತು ಕಾಲದ ಆಡಳಿತ ವ್ಯವಸ್ಥೆಯತ್ತ ಕೊಂಡೊಯ್ಯುತ್ತಿವೆ. ಕಂಪನಿ ರಾಜ್ ಎಂದು ಕರೆಯಲಾಗುತ್ತಿದ್ದ ಔದ್ಯಮಿಕ ಬಂಡವಾಳ ವ್ಯವಸ್ಥೆ ಮತ್ತು ಸಾಮ್ರಾಜ್ಯಶಾಹಿ ಧೋರಣೆಗಳನ್ನು ಇಂದು ಹಣಕಾಸು ಬಂಡವಾಳದ ಕಾರ್ಪೋರೇಟ್ ರಾಜ್ ರೂಪದಲ್ಲಿ ಕಾಣುತ್ತಿದ್ದೇವೆ. ಬಂಡವಾಳ ರೂಪಾಂತರಗೊಂಡಿದೆ ಆದರೆ ಬಂಡವಾಳದ ಶೋಷಣೆಯ ಮಾರ್ಗಗಳು ಯಥಾಸ್ಥಿತಿಯಲ್ಲಿವೆ.  ಔದ್ಯಮಿಕ ಬಂಡವಾಳದ ಸಂದರ್ಭದಲ್ಲಿದ್ದ ದುಡಿಮೆಯ ವಿಧಾನಗಳು ಹಣಕಾಸು ಬಂಡವಾಳ ವ್ಯವಸ್ಥೆಯಲ್ಲಿ ಬದಲಾಗಿವೆ. ಆದರೆ ಶ್ರಮಿಕ ಶ್ರಮಶಕ್ತಿಯನ್ನು ಖರೀದಿಸುವ ಬಂಡವಾಳದ ವಿಧಾನಗಳು ಯಥಾಸ್ಥಿತಿಯಲ್ಲಿವೆ.

ಈ ಬದಲಾದ ಸನ್ನಿವೇಶದಲ್ಲಿ ಭಾರತವೂ ಬದಲಾಗುತ್ತಿದೆ. ಆರ್ಥಿಕ ನೆಲೆಯಲ್ಲಿ , ವಿಶ್ವ ಮಾರುಕಟ್ಟೆಯ ಜಗುಲಿಯಲ್ಲಿ ವಿಶ್ವಗುರುವಾಗಿ ವಿಜೃಂಭಿಸಲು #ಆತ್ಮನಿರ್ಭರ ಭಾರತ ಸರ್ವ ಸಿದ್ಧತೆ ನಡೆಸಿದೆ. 2024-25ರ ವೇಳೆಗೆ 5 ಲಕ್ಷ ಕೋಟಿ  ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮುವ ನವ ಭಾರತದ ಕನಸು ನನಸಾಗಲು ಇನ್ನೂ ಸಾಕಷ್ಟು ಹಾದಿ ಕ್ರಮಿಸಬೇಕಿದೆ. #ಆತ್ಮನಿರ್ಭರ ಭಾರತ ತನ್ನ ಮಾರುಕಟ್ಟೆ ದಂಡಯಾತ್ರೆಯಲ್ಲಿ ಕ್ರಮಿಸಬಹುದಾದ ಈ ಹಾದಿಯ ಇಬ್ಬದಿಗಳಲ್ಲಿ ಕಾರ್ಪೋರೇಟ್ ಜಗತ್ತಿನ ಬೃಹತ್ ವೃಕ್ಷಗಳು ತಮ್ಮ ಸುಭದ್ರ ನೆಲೆ ಕಂಡುಕೊಳ್ಳಲಿವೆ. ಈ ಹಾದಿಯುದ್ದಕ್ಕೂ ಚೆಲ್ಲಬಹುದಾದ ಹಣಕಾಸು ಬಂಡವಾಳದ ತುಣುಕುಗಳು ಭಾರತದ ಒಂದು ವರ್ಗಕ್ಕೆ ಚೆಲ್ಲಿದ ಮಲ್ಲಿಗೆಯಂತೆ ಕಾಣುತ್ತಿವೆ.

ಆದರೆ ಈ ಹಾದಿಗೆ ಅಡಿಗಲ್ಲು ಹಾಕಲು ಭಾರತದ ಕಾರ್ಪೋರೇಟ್ ಸ್ನೇಹಿ ಪ್ರಭುತ್ವ ಬಳಸುತ್ತಿರುವ ಆಯುಧಗಳನ್ನು, ಸಲಕರಣೆಗಳನ್ನು ಮತ್ತು ನಿರ್ಮಾಣದ ವಸ್ತುಗಳನ್ನು ಸೂಕ್ಷ್ಮವಾಗಿ ಗಮನಿಸಲೇಬೇಕು. ಸ್ವತಂತ್ರ ಭಾರತದ ಸ್ವಾವಲಂಬಿ ಆರ್ಥಿಕತೆಯನ್ನು ನಿರ್ಮಿಸಲು ಬಳಸಲಾದ ಎಲ್ಲ ಔದ್ಯಮಿಕ ನೆಲೆಗಳು ಮುಂಬರುವ ನವ ಭಾರತದ ಅಡಿಗಲ್ಲುಗಳಾಗುತ್ತವೆ. ಈ ಔದ್ಯಮಿಕ ಲೋಕವನ್ನು ವಿಸ್ತರಿಸಲು, ಬೆಳೆಸಲು ಮತ್ತು ಪೋಷಿಸಲು ಶ್ರಮಿಸಿದ ಲಕ್ಷಾಂತರ ಕಾರ್ಮಿಕರು ಈ ಹೊಸ ಲೋಕದ ಮೆಟ್ಟಿಲುಗಳಾಗುತ್ತಿದ್ದಾರೆ. ಈ ಕಾರ್ಮಿಕರ ಸಾಮುದಾಯಿಕ ಅಸ್ಮಿತೆಗಳು ಹೊಸ ಮಾರ್ಗದಲ್ಲಿ ಹಾಸುಗಲ್ಲುಗಳಾಗಲಿವೆ.

ಹಣಕಾಸು ಬಂಡವಾಳ ಮತ್ತು ಡಿಜಿಟಲ್ ಪ್ರಪಂಚದ ನವ ನಿರ್ಮಾಣಕ್ಕೆ ನರೇಂದ್ರ ಮೋದಿ ಸರ್ಕಾರ ಈ ಹಾದಿಯನ್ನು ವ್ಯವಸ್ಥಿತವಾಗಿ ನಿರ್ಮಿಸುತ್ತಿದೆ. ಈ ಹಾದಿಯ ನಿರ್ಮಾಣಕ್ಕೆ ನೆರವಾಗಲು ಕಳೆದ ಮೂರು ದಶಕಗಳಿಂದ ಭಾರತದ ದುಡಿಯುವ ವರ್ಗಗಳನ್ನು ಜಾತಿ, ಮತಧರ್ಮ ಮತ್ತು ಪ್ರಾದೇಶಿಕ ಅಸ್ಮಿತೆಗಳ ಮೂಲಕ ವಿಘಟಿಸುವ ಒಂದು ಸಂಚು ನಡೆಯುತ್ತಲೇ ಬಂದಿದೆ. ನೂರು ವರ್ಷಗಳ ಇತಿಹಾಸ ಇರುವ ಭಾರತದ ಕಾರ್ಮಿಕ ಚಳುವಳಿಯನ್ನು ಭಂಗಗೊಳಿಸಲು ಈ ಅಸ್ಮಿತೆಗಳ ರಾಜಕಾರಣವೇ ಬ್ರಹ್ಮಾಸ್ತ್ರವಾಗಿರುವುದನ್ನು ಅಯೋಧ್ಯೆಯಿಂದ ಶಹೀನ್‍ಭಾಗ್‍ವರೆಗೂ ಕಂಡಿದ್ದೇವೆ. ಸಮ ಸಮಾಜವನ್ನು ಸ್ಥಾಪಿಸುವ ಕ್ರಾಂತಿಕಾರಿ ಆಂದೋಲನಕ್ಕೆ ಕಾಲಾಳುಗಳಾಗಬೇಕಾದ ಶ್ರಮಜೀವಿಗಳನ್ನು ಮಂದಿರ ನಿರ್ಮಾಣಕ್ಕೆ ಕಾಲಾಳುಗಳಂತೆ ಬಳಸುವ ಮೂಲಕ ಶ್ರಮಜೀವಿಗಳನ್ನು ಅಸ್ಮಿತೆಗಳ ಸಂಕೋಲೆಗಳಲ್ಲಿ ಬಂಧಿಸಲಾಗಿದೆ. ಬಂಡವಾಳದ ದಾಸ್ಯದಿಂದ ವಿಮೋಚನೆಗಾಗಿ ಹೋರಾಡುತ್ತಿರುವ ಕಾರ್ಮಿಕರು ಈ ಅಸ್ಮಿತೆಯ ಸಂಕೋಲೆಗಳಲ್ಲೇ ಹಿತವಲಯವೊಂದನ್ನು ಸೃಷ್ಟಿಸಿಕೊಂಡಿರುವುದನ್ನು ಸಂಘಟಿತ ವಲಯದಲ್ಲಿ ಗಮನಿಸಬಹುದಾಗಿದೆ.

ಸ್ವಾತಂತ್ರ್ಯಪೂರ್ವದಲ್ಲಿದ್ದ ವಸಾಹತು ಆಳ್ವಿಕೆಯ ಬಂಡವಾಳಶಾಹಿ ಅರ್ಥವ್ಯವಸ್ಥೆಯಲ್ಲಿ ಕಾರ್ಮಿಕರ ಹೋರಾಟ ಔದ್ಯಮಿಕ ಬಂಡವಾಳ ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ಕೇಂದ್ರೀಕೃತವಾಗಿತ್ತು. ಸ್ವಾತಂತ್ರ್ಯಾನಂತರದಲ್ಲಿ ಭಾರತೀಯ ಸಮಾಜದಲ್ಲಿ ಗುಪ್ತಗಾಮಿನಿಯಾಗಿ ಹರಿಯುತ್ತಿದ್ದ ಊಳಿಗಮಾನ್ಯ ಧೋರಣೆ, ಭೂ ಮಾಲೀಕರ ಶೋಷಣೆ ಮತ್ತು ಉತ್ಪಾದನಾ ಸಂಬಂಧಗಳಲ್ಲಿನ ತಾರತಮ್ಯಗಳು ಒಮ್ಮೆಲೆ ತಲೆದೋರಿದ್ದವು. ಬಂಡವಾಳ ವ್ಯವಸ್ಥೆಯ ಬುನಾದಿಯನ್ನು ಭಂಗಗೊಳಿಸದೆಯೇ ಸಮಾಜವಾದಿ ಆರ್ಥಿಕ ನೀತಿಯನ್ನು ಅನುಸರಿಸಿದ ಸ್ವತಂತ್ರ ಭಾರತದಲ್ಲಿ ಸಂಪತ್ತಿನ ಕ್ರೋಢೀಕರಣ ಮತ್ತು ಸಂಪನ್ಮೂಲಗಳ ಕೇಂದ್ರೀಕರಣ ಪ್ರಕ್ರಿಯೆ ಅಡೆತಡೆಯಿಲ್ಲದೆ ಸಾಗಿದ್ದರಿಂದಲೇ 1960ರ ದಶಕದಲ್ಲಿ ಪ್ರಜೆಗಳ ಆಕ್ರೋಶ ಸ್ಫೋಟಿಸಲು ಮೂಲ ಕಾರಣವಾಗಿತ್ತು.

1960-70ರ ದಶಕದಲ್ಲಿ ಪ್ರಭುತ್ವದ ಆಡಳಿತ ನೀತಿಗಳು ಮತ್ತು  ಬದಲಾದ ಆರ್ಥಿಕ ನೀತಿಗಳ ಸಂದರ್ಭದಲ್ಲಿ ಭಾರತದ ಕಾರ್ಮಿಕ ಚಳುವಳಿ ರೂಪಾಂತರಗೊಳ್ಳಬೇಕಿತ್ತು. ನಕ್ಸಲ್‍ಬಾರಿ ಚಳುವಳಿ ಗ್ರಾಮೀಣ ಭಾರತದಲ್ಲಿದ್ದ ಕೃಷಿ ಕಾರ್ಮಿಕರ ಮತ್ತು ಗ್ರಾಮೀಣ ಬಡಜನತೆಯ ಸಮಸ್ಯೆಗಳನ್ನು ಮುನ್ನೆಲೆಗೆ ತಂದಿತ್ತು. ಭೂ ಸಂಬಂಧಗಳ ಸುತ್ತ ನಡೆದ ಹೋರಾಟಗಳು ಭಾರತದ ಕೃಷಿ ಕ್ಷೇತ್ರದಲ್ಲಿದ್ದ ಊಳಿಗಮಾನ್ಯ ಧೋರಣೆ ಮತ್ತು ಶೋಷಣೆಯನ್ನು ಸ್ಪಷ್ಟವಾಗಿ ತೆರೆದಿಟ್ಟಿದ್ದವು. ಭಾರತದ ಬಹುಸಂಖ್ಯಾತ ಜನತೆಯ ಭೂಮಿಯೊಡಗಿನ ಸಂಬಂಧಕ್ಕೂ ಚುರುಕುಗೊಳ್ಳುತ್ತಿದ್ದ ನಗರೀಕರಣ ಪ್ರಕ್ರಿಯೆಯಿಂದ ನಗರಗಳಲ್ಲಿ ಉದ್ಭವಿಸುತ್ತಿದ್ದ ಸಮಸ್ಯೆಗಳಿಗೂ ಇರುವ ಸೂಕ್ಷ್ಮ ಸಂಬಂಧಗಳನ್ನು ಕಾರ್ಮಿಕ ಚಳುವಳಿಗಳು ಗುರುತಿಸಬೇಕಿತ್ತು.

ಬ್ಯಾಂಕ್ ರಾಷ್ಟ್ರೀಕರಣ ಮತ್ತು ಸಾರಿಗೆ ಮತ್ತಿತರ ಸಾರ್ವಜನಿಕ ಸಂಸ್ಥೆಗಳ ರಾಷ್ಟ್ರೀಕರಣದಿಂದ ಸಂಘಟಿತ ಕಾರ್ಮಿಕ ವಲಯದಲ್ಲಿ ಸೃಷ್ಟಿಯಾದ ಆತಂಕಗಳಿಗೆ ಕಾರ್ಮಿಕ ಚಳುವಳಿಗಳು ಕೂಡಲೇ ಸ್ಪಂದಿಸಿದ್ದವು. ಈ ಸಂದರ್ಭದಲ್ಲಿ ನಡೆದ ರೈಲ್ವೆ ಮುಷ್ಕರ ಒಂದು ನಿದರ್ಶನ. ಭಾರತದ ಸಂಘಟಿತ ಕಾರ್ಮಿಕ ಚಳುವಳಿಗೆ 1970ರ ದಶಕ ಪರ್ವಕಾಲ. ಈ ಸಂದರ್ಭದಲ್ಲಿ ಪ್ರಭುತ್ವದ ನೀತಿಗಳು ಸಮಾಜವಾದಿ ಮಾರ್ಗದಲ್ಲಿ ಚಲಿಸುತ್ತಿದೆ ಎನ್ನುವ ಭ್ರಮೆ ಎಡಪಂಥೀಯ ಕಾರ್ಮಿಕ ಚಳುವಳಿಯ ಹೋರಾಟದ ಸ್ವರೂಪವನ್ನು ಸಂಕುಚಿತಗೊಳಿಸಿದ್ದನ್ನೂ ಇಂದು ನಾವು ಗಮನಿಸಬೇಕಿದೆ. ಬಂಡವಾಳ ಶೇಖರಣೆ, ಕ್ರೋಢೀಕರಣ ಮತ್ತು ಔದ್ಯಮಿಕ ಬಂಡವಾಳದ ಧೃವೀಕರಣಕ್ಕೆ ಈ ದಶಕದ ಹಲವು ಆರ್ಥಿಕ ನೀತಿಗಳು ಪೂರಕವಾಗಿದ್ದುದರಿಂದಲೇ 1980ರ ನಂತರ ಭಾರತದ ಅರ್ಥವ್ಯವಸ್ಥೆ ಉದಾರೀಕರಣದತ್ತ ಸುಲಭವಾಗಿ ಚಲಿಸಲು ಸಾಧ್ಯವಾಗಿತ್ತು.

ಪ್ರಜಾಸತ್ತಾತ್ಮಕ ಕ್ರಾಂತಿಯನ್ನು ಸಾಧಿಸುವ ನಿಟ್ಟಿನಲ್ಲಿ ಮುಂಚೂಣಿ ನಾಯಕತ್ವ ವಹಿಸಬೇಕಿದ್ದ ಕಾರ್ಮಿಕ ವಲಯ ಈ ಹಂತದಿಂದಲೇ ವಾಸ್ತವಕ್ಕೆ ವಿಮುಖವಾಗತೊಡಗಿದ್ದೂ ಚಾರಿತ್ರಿಕ ಸತ್ಯ. ಸಾರ್ವಜನಿಕ ಉದ್ದಿಮೆಗಳು ಮತ್ತು ನಗರ ಕೇಂದ್ರಿತ ಉತ್ಪಾದನಾ ಕ್ಷೇತ್ರಗಳಿಂದಾಚೆಗೂ ಒಂದು ಶ್ರಮಜೀವಿ ವರ್ಗ ಇರುವುದನ್ನು ಈ ಸಂದರ್ಭದಲ್ಲಿ ಗಂಭೀರವಾಗಿ ಗಮನಿಸಬೇಕಿತ್ತು. ಕೃಷಿ ಕಾರ್ಮಿಕರು, ಗ್ರಾಮೀಣ ಬಡಜನತೆ ಮತ್ತು ನಗರ ಪಟ್ಟಣಗಳಲ್ಲಿನ ವಲಸೆ ದಿನಗೂಲಿ ನೌಕರರನ್ನೊಳಗೊಂಡ ಈ ವರ್ಗವೇ ದುಡಿಮೆಯ ಭಾರತದ ಅಂತಃಸತ್ವ. ಈ ಶ್ರಮಜೀವಿಗಳನ್ನು ಸಂಘಟಿಸುವ ನಿಟ್ಟಿನಲ್ಲಿ ಎಡಪಂಥೀಯ ಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳು ಸಾಕಷ್ಟು ಪರಿಶ್ರಮ ವಹಿಸಿದ್ದರೂ, ಒಟ್ಟಾರೆ ಕಾರ್ಮಿಕ ಚಳುವಳಿಯೊಡನೆ ಸಮನ್ವಯ ಸಾಧಿಸಲು ಸಾಧ್ಯವಾಗಲಿಲ್ಲ ಎನ್ನುವುದು ವಾಸ್ತವ.

ಈ ಸಮನ್ವಯದ ಕೊರತೆ ಇಂದು, #ಆತ್ಮನಿರ್ಭರ ಭಾರತದ ಕ್ರೂರ ಆಡಳಿತ ವ್ಯವಸ್ಥೆಯ ಸಂದರ್ಭದಲ್ಲಿ ನಮ್ಮನ್ನು ಕಾಡುತ್ತಿದೆ. ನಗರ ಕೇಂದ್ರಿತ ಸಂಘಟಿತ ವಲಯದ ಕಾರ್ಮಿಕರು , ಹೋರಾಟಗಳ ಮೂಲಕ ಸೃಷ್ಟಿಸಿಕೊಂಡ ಹಿತವಲಯಗಳಿಂದಾಚೆಗೆ ದೃಷ್ಟಿ ಹಾಯಿಸದೆ ಹೋಗಲು ಕಾರಣವೇನು ? ಈ ಪ್ರಶ್ನೆಗೆ ನಾವು ಉತ್ತರ ಕಂಡುಕೊಳ್ಳಬೇಕಿದೆ. ಸಾಮಾಜಿಕ ನೆಲೆಯಲ್ಲಿ, ಸಾಂಸ್ಕೃತಿಕವಾಗಿ ತಮ್ಮ ಸಾಮುದಾಯಿಕ, ಪ್ರಾದೇಶಿಕ ಮತ್ತು ಜಾತಿ ಅಸ್ಮಿತೆಗಳೊಡನೆ ಗುರುತಿಸಿಕೊಳ್ಳುವ ಸಂದರ್ಭದಲ್ಲೇ ತಮ್ಮ ಪೂರ್ವಾಶ್ರಮದ ಸಾಮಾಜಿಕ ನೆಲೆಗಳಲ್ಲಿ ಇದ್ದಿರಬಹುದಾದ ಅಸಮಾನತೆ, ಶೋಷಣೆ, ದೌರ್ಜನ್ಯ ಮತ್ತು ತಾರತಮ್ಯಗಳ ಬಗ್ಗೆ ಕಾರ್ಮಿಕ ವರ್ಗ ಯೋಚಿಸಬೇಕಿತ್ತಲ್ಲವೇ ? ಬಹುಶಃ ಎಡಪಕ್ಷಗಳ ಕಾರ್ಮಿಕ ಸಂಘಟನೆಗಳಲ್ಲೂ ಈ ಪ್ರಯತ್ನಗಳು ನಡೆದಿಲ್ಲ ಎನ್ನಬಹುದು.

ಹಾಗಾಗಿಯೇ 1990ರ ನಂತರದ ನವ ಉದಾರವಾದಿ ನೀತಿಗಳು ಕಾರ್ಮಿಕ ಚಳುವಳಿಗಳನ್ನು ಕವಲು ಹಾದಿಯಲ್ಲಿ ತಂದು ನಿಲ್ಲಿಸಿದ್ದವು. ದಶಕಗಳ ಹೋರಾಟದ ಅನುಭವ ಮತ್ತು ಸಂಘರ್ಷಗಳ ಹಿನ್ನೆಲೆಯಿದ್ದಾಗಲೂ ಪ್ರಜಾಸತ್ತಾತ್ಮಕ ಕ್ರಾಂತಿಗೆ ಪೂರಕವಾದ ಐಕ್ಯತೆ ಮತ್ತು ಐಕಮತ್ಯವನ್ನು ತಾತ್ವಿಕ ನೆಲೆಗಟ್ಟಿನಲ್ಲಿ ಸಾಧಿಸಲಾಗದೆ ಹೋದದ್ದು ಎಡಪಂಥೀಯ ಕಾರ್ಮಿಕ ಸಂಘಟನೆಗಳ ಬಹುದೊಡ್ಡ ವೈಫಲ್ಯ ಎಂದು ಈಗ ಅರ್ಥವಾಗುತ್ತಿದೆ. ನವ ಉದಾರವಾದ ಏಕಾಂಗಿಯಾಗಿ ಭಾರತವನ್ನು ಆಕ್ರಮಿಸಲಿಲ್ಲ. ಇದರೊಟ್ಟಿಗೆ ಬಲಪಂಥೀಯ ರಾಜಕಾರಣವೂ ಸಕ್ರಿಯವಾಗಿತ್ತು. ಮತ್ತೊಂದೆಡೆ ಸಂಘಟಿತ ವಲಯದಲ್ಲೇ ನಿರ್ಲಕ್ಷಿತರಾಗಿದ್ದೇವೆ ಎಂಬ ಭಾವನೆಯಿಂದ ದಲಿತ ಸಮುದಾಯದ ಕಾರ್ಮಿಕರಲ್ಲೂ ಅಸಮಾಧಾನ ಹೆಚ್ಚಾಗಿತ್ತು. ಈ ಅಸಮಾಧಾನದ ಲಾಭ ಪಡೆದಿದ್ದು ಬಲಪಂಥೀಯ ರಾಜಕಾರಣ ಮತ್ತು ಹಿಂದುತ್ವವಾದ.

ನವ ಉದಾರವಾದ ಸೃಷ್ಟಿಸಿದ ಭ್ರಮಾಲೋಕ ಮತ್ತು ಮಂದಿರ ಕೇಂದ್ರಿತ ಬಲಪಂಥೀಯ ರಾಜಕಾರಣ ಸೃಷ್ಟಿಸಿದ ಸಾಂಸ್ಕೃತಿಕ ರಾಷ್ಟ್ರೀಯತೆಯ ಪರಿಣಾಮ ಭಾರತದ ಹಿತವಲಯದ-ಮಧ್ಯಮ ವರ್ಗದ ಕಾರ್ಮಿಕರನ್ನು ಹೋರಾಟದ ಮಾರ್ಗಗಳಿಂದ ವಿಮುಖರಾಗಿಸಿತ್ತು. ಇದೇ ಸಂದರ್ಭದಲ್ಲಿ ಭೂ ಹೋರಾಟಗಳು ಮತ್ತು ಗ್ರಾಮೀಣ ಕೃಷಿ ಕಾರ್ಮಿಕರ ಹೋರಾಟಗಳು ಕ್ಷೀಣಿಸಲಾರಂಭಿಸಿದ್ದವು. ನಗರ ಕೇಂದ್ರಿತ ಹಿತವಲಯದ ಕಾರ್ಮಿಕರು ತಮ್ಮ ಆರ್ಥಿಕ ಭದ್ರಕೋಟೆಗಳಿಂದಾಚೆಗಿನ ಪ್ರಪಂಚವನ್ನು ನೋಡಲು ವಿಫಲರಾದರು. ವಿಶ್ವ ಕಾರ್ಮಿಕರೇ ಒಂದಾಗಿ ಎಂಬ ಘೋಷಣೆ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದ್ದರೂ  ವಾಸ್ತವವಾಗಿ ಸಂಕುಚಿತ ಚೌಕಟ್ಟುಗಳಿಗೆ ಸೀಮಿತವಾಗುತ್ತಾ ಹೋಯಿತು. ಸಾಮಾಜಿಕ ಘನತೆ, ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಸಾಧಿಸಲು ಅಗತ್ಯವಾಗಿದ್ದ ಸಮನ್ವಯ ಮತ್ತು ಪರಾನುಭೂತಿ (Empathy) ಶಕ್ತಿಯನ್ನು ಕಾರ್ಮಿಕ ವರ್ಗ ಸಂಪೂರ್ಣ ಕಳೆದುಕೊಂಡಿತ್ತು.

ಈ ಹಂತದಲ್ಲಿ ಎಡಪಕ್ಷಗಳು ಮತ್ತು ಎಡಪಂಥೀಯ ಕಾರ್ಮಿಕ ಸಂಘಟನೆಗಳು ಹೋರಾಟಗಳ ಸಂದರ್ಭದಲ್ಲಿ ಐಕ್ಯವೇದಿಕೆಗಳನ್ನು ರೂಪಿಸಿದರೂ, ತಾತ್ವಿಕ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಂಡು ಸಮಗ್ರ ನೆಲೆಗಟ್ಟಿನಲ್ಲಿ ದೇಶದ ಶ್ರಮಜೀವಿಗಳ ಹೋರಾಟಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸಲಿಲ್ಲ ಎನ್ನುವುದು ಚಾರಿತ್ರಿಕ ಸತ್ಯ . ಎಡಪಂಥೀಯ ಪಕ್ಷಗಳ ಸೈದ್ಧಾಂತಿಕ-ತಾತ್ವಿಕ ನಿಲುವುಗಳಿಗೆ ಪೂರಕವಾಗಿ ಶ್ರಮಜೀವಿಗಳ ಹೋರಾಟವನ್ನು ರೂಪಿಸಬೇಕಾದ ಕಾರ್ಮಿಕ ಸಂಘಟನೆಗಳು ಪಕ್ಷಗಳ ತಂಗುದಾಣಗಳಾಗಿದ್ದು ಈ ಹಂತದಲ್ಲಿ ಕಾಣಬಹುದಾದ ಒಂದು ನ್ಯೂನತೆ. ಇಂದಿಗೂ ಎಡಪಕ್ಷಗಳ ಐಕ್ಯತೆಗೆ ತೊಡಕಾಗಿರುವುದು ಕಾರ್ಮಿಕ ಸಂಘಟನೆಗಳೇ ಎನ್ನುವ ಅಂಶವನ್ನು ಇನ್ನಾದರೂ ಗಂಭೀರವಾಗಿ ಪರಾಮರ್ಶಿಸಿ ಮುನ್ನಡೆಯಬೇಕಿದೆ. ಇದು ತುರ್ತು ಚರ್ಚೆಗೊಳಗಾಗಬೇಕಾದ ವಿಚಾರ.

ಈ ವಿಘಟನೆಯೇ ಭಾರತದ ಶ್ರಮಜೀವಿಗಳನ್ನು ಹಿಂದುತ್ವ ರಾಜಕಾರಣದ ಕಾಲಾಳುಗಳನ್ನಾಗಿ, ಸಮರ್ಥಕರನ್ನಾಗಿ ಮಾಡಿರುವುದು ಸತ್ಯ.  ಇಂದು ಕೆಂಬಾವುಟದಡಿ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ದುಡಿಯುವ ವರ್ಗಗಳು ಒಂದೆಡೆ ರಾಜಕೀಯ ನೆಲೆಯಲ್ಲಿ ಹಿಂದುತ್ವದ ಆರಾಧಕರಾಗಿದ್ದರೆ ಸಾಂಸ್ಕೃತಿಕ ನೆಲೆಯಲ್ಲಿ ಮತಾಂಧತೆಗೆ ಬಲಿಯಾಗಿದ್ದಾರೆ. ತಮ್ಮ ಉದ್ಯೋಗ ಭದ್ರತೆ ಮತ್ತು ರಕ್ಷಣೆಯಿಂದಾಚೆಗೆ ಕೆಂಬಾವುಟ ಕೇವಲ ಒಂದು ತುಂಡು ಬಟ್ಟೆಯಾಗಿಯೇ ಇವರಿಗೆ ಕಾಣುತ್ತಿದೆ. ಮತ್ತೊಂದೆಡೆ ಸಂಘಟನಾತ್ಮಕವಾಗಿಯೂ ಎಡಪಂಥೀಯ ಕಾರ್ಮಿಕ ಸಂಘಟನೆಗಳು ಎಲ್ಲ ಶ್ರಮಜೀವಿ ವರ್ಗಗಳ ನಡುವೆ ಸಮನ್ವಯ ಸಾಧಿಸುವ ಪ್ರಯತ್ನವನ್ನು ಮಾಡದಿರುವುದೂ ಈ ಧೋರಣೆಗೆ ಪೂರಕವಾಗಿಯೇ ಇದೆ.

ಮೇ ದಿನಾಚರಣೆಯ ಸಂದರ್ಭದಲ್ಲಿ ಈ ಆತ್ಮಾವಲೋಕನ ನಮ್ಮ ಆದ್ಯತೆಯಾಗಬೇಕಿದೆ. #ಆತ್ಮನಿರ್ಭರ ಭಾರತ, ಐದು ಲಕ್ಷ ಕೋಟಿ ರೂಗಳ ಭಾರತ ಇದೇ ಶ್ರಮಜೀವಿಗಳ ಸಮಾಧಿಯ ಮೇಲೆ ನಿರ್ಮಾಣವಾಗುತ್ತಿದೆ. ದಶಕಗಳ ಪರಿಶ್ರಮದಿಂದ, ಬೆವರು ಸುರಿಸಿ ಕಟ್ಟಿದ ಭದ್ರ ಕೋಟೆಗಳು ಒಂದೊಂದಾಗಿ ಕಳಚಿಕೊಳ್ಳುತ್ತಿರುವುದನ್ನು ಮೌನವಾಗಿ ಸಹಿಸಿಕೊಳ್ಳುತ್ತಿದ್ದೇವೆ. ತಮ್ಮ ಸುಭದ್ರ ಸೂರು ಮತ್ತು ಸುರಕ್ಷಿತ  ಗೋಡೆಗಳಿಂದಾಚೆಗೂ ಒಂದು ಶ್ರಮಜೀವಿಗಳ ಲೋಕ ಇದೆ ಎನ್ನುವ ವಾಸ್ತವವನ್ನು ಸಂಘಟಿತ ಕಾರ್ಮಿಕರಿಗೆ ಮನದಟ್ಟು ಮಾಡಬೇಕಿದೆ. ಈ ಶ್ರಮಜೀವಿ ಲೋಕದ ದುಡಿಮೆಗಾರರಿಗೆ, ದೂರದ ಹಿತವಲಯಗಳಲ್ಲೂ ತಮ್ಮ ಹೆಗಲಿಗೆ ಹೆಗಲು ನೀಡುವ ಜೀವಗಳಿವೆ ಎಂಬ ಭರವಸೆ ಮೂಡಿಸಬೇಕಿದೆ.

135 ವರ್ಷಗಳ ನಂತರವೂ ಮೇ ದಿನದ ಭರವಸೆಯ ಕಿಡಿಗಳು ಹೊಳೆಯುತ್ತಲೇ ಇವೆ. ಡಿಜಿಟಲ್ ಯುಗದ ಶೋಷಣೆಗೂ, ಔದ್ಯಮಿಕ ಯುಗದ ಶೋಷಣೆಗೂ ವ್ಯತ್ಯಾಸವೇನಾದರೂ ಇದ್ದರೆ ಅದು ಕೇವಲ ನಮ್ಮ ಗ್ರಹಿಕೆಯಲ್ಲಿ ಮಾತ್ರ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಿದೆ. ಇಂದಿಗೂ ಶ್ರಮಿಕ ತನ್ನ ಶ್ರಮಶಕ್ತಿಯನ್ನು ಅಗ್ಗದ ಬೆಲೆಗೆ ಮಾರಾಟ ಮಾಡುತ್ತಲೇ ಬದುಕು ಸವೆಸುತ್ತಿದ್ದಾನೆ. ಈ ಶ್ರಮಶಕ್ತಿಯ ಸರಕನ್ನು ಬಳಸಿಕೊಂಡು ಬಂಡವಾಳಿಗನು ಸಾಮ್ರಾಜ್ಯವನ್ನು ವಿಸ್ತರಿಸುತ್ತಿದ್ದಾನೆ. ಬಂಡವಾಳಿಗನ ರೂಪ ಬದಲಾಗಿದೆ, ಸ್ವರೂಪ ಹಾಗೆಯೇ ಇದೆ. ಶೋಷಣೆಯೂ ಅಷ್ಟೇ.  ಭಾರತ ವಿಶ್ವಗುರು ಆದರೂ ಶ್ರಮಿಕನ ಬೆವರಿಗೆ ಮಾರುಕಟ್ಟೆಯ ಬೆಲೆ ದೊರೆಯುವುದಿಲ್ಲ.

ಈ ಬೆವರಿನ ಗುಳ್ಳೆಗಳಲ್ಲಿ ಒಂದು ವಿಭಿನ್ನ ಪ್ರಪಂಚ ಅಡಗಿದೆ ಎನ್ನುವುದನ್ನು ಬೆವರಿನ ಸೋಂಕಿಲ್ಲದೆ ದುಡಿಯುವ ಹಿತವಲಯದ ಕಾರ್ಮಿಕರು ಅರ್ಥಮಾಡಿಕೊಳ್ಳಬೇಕಿದೆ. ಈ ಶ್ರಮಜೀವಿಗಳನ್ನು ಪ್ರಜಾಸತ್ತಾತ್ಮಕ ಕ್ರಾಂತಿಯ ಕಾಲಾಳುಗಳಂತೆ ಬಳಸುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳು ಸಜ್ಜಾಗಬೇಕಿದೆ. ಸಂಯಮ, ಸಂವೇದನೆ, ಪರಾನುಭೂತಿ ಮತ್ತು ಸಮಾಜೋ ಸಾಂಸ್ಕೃತಿಕ ಸಮನ್ವಯದ ಮೂಲಕವೇ ಭಾರತದ ಕಾರ್ಮಿಕ ಚಳುವಳಿ ತನ್ನ ಭವಿಷ್ಯದ ಹಾದಿಯನ್ನು ರೂಪಿಸಿಕೊಳ್ಳಬೇಕಿದೆ.  ಇಂದು ನಮ್ಮನ್ನು ಕಾಡುತ್ತಿರುವ ಜಾತೀಯತೆ, ಅಸ್ಪೃಶ್ಯತೆ, ಮತಾಂಧತೆ, ಮತೀಯವಾದ, ಬಲಪಂಥೀಯ ರಾಜಕಾರಣ ಮತ್ತು ಸಾಂಸ್ಕೃತಿಕ ದಾಳಿಯಿಂದ ಶ್ರಮಜೀವಿಗಳನ್ನು ರಕ್ಷಿಸಿ ಒಂದು ಸಮ ಸಮಾಜವನ್ನು ಕಟ್ಟುವ ದೃಢ ನಿಶ್ಚಯದೊಂದಿಗೇ ಕೆಂಬಾವುಟವನ್ನು ಎತ್ತಿಹಿಡಿಯಬೇಕಿದೆ. ಮೇ ದಿನದ ಸಾರ್ಥಕತೆಯೂ ಇದರಲ್ಲೇ ಅಡಗಿದೆ.

ಇತ್ತೀಚಿನ ಸುದ್ದಿ