ನೀವೇ ಗ್ರೇಟ್ ಅಮ್ಮ: ಆಸ್ಪತ್ರೆ ಐಸಿಯುನಲ್ಲಿದ್ದ ಮಹಿಳೆಯ 4 ತಿಂಗಳ ಮಗುವಿಗೆ ಹಾಲುಣಿಸಿ ಮಾದರಿಯಾದ ಕೇರಳದ ಮಹಿಳಾ ಪೊಲೀಸ್ ಅಧಿಕಾರಿ; ವ್ಯಾಪಕ ಪ್ರಶಂಸೆ

ಕೇರಳ ರಾಜ್ಯದ ಎರ್ನಾಕುಲಂನ ಜನರಲ್ ಆಸ್ಪತ್ರೆಯ ಐಸಿಯುನಲ್ಲಿ ಉಸಿರಾಟದ ಸಮಸ್ಯೆಯಿಂದ ಚಿಕಿತ್ಸೆ ಪಡೆಯುತ್ತಿರುವ ಪಾಟ್ನಾ ಮಹಿಳೆಯ ನಾಲ್ಕು ತಿಂಗಳ ಮಗುವಿಗೆ ಹಾಲುಣಿಸಿ ಕೊಚ್ಚಿ ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ಮಾದರಿಯಾಗಿದ್ದಾರೆ. ಒಂಬತ್ತು ತಿಂಗಳ ಮಗುವಿನ ತಾಯಿಯಾಗಿರುವ ಸಿವಿಲ್ ಪೊಲೀಸ್ ಅಧಿಕಾರಿ ಎಂ.ಎ.ಆರ್ಯ ಎಂಬುವ್ವರು ಪಾಟ್ನಾ ಮಹಿಳೆಯ ಚಿಕ್ಕ ಮಗುವಿಗೆ ಎದೆಹಾಲನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಆರೈಕೆಯಿಲ್ಲದೆ ಉಳಿದಿದ್ದ ಅಸ್ವಸ್ಥ ಮಹಿಳೆಯ ನಾಲ್ವರು ಮಕ್ಕಳನ್ನು ಕೊಚ್ಚಿ ನಗರ ಮಹಿಳಾ ಠಾಣೆಗೆ ಕರೆತರಲಾಯಿತು.
ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹಿಳೆಯ ಪತಿ ಪ್ರಸ್ತುತ ಜೈಲಿನಲ್ಲಿದ್ದಾರೆ. ಕುಟುಂಬವು ಸಾಕಷ್ಟು ಸಮಯದಿಂದ ಕೇರಳದಲ್ಲಿ ವಾಸಿಸುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಸ್ಪತ್ರೆಯಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ಮೂರು ಹಿರಿಯ ಮಕ್ಕಳಿಗೆ ಆಹಾರವನ್ನು ಒದಗಿಸಲಾಯಿತು. ನಂತರ ಮಕ್ಕಳನ್ನು ಶಿಶುಪಾಲನಾ ಮನೆಗೆ ಸ್ಥಳಾಂತರಿಸಲಾಯಿತು. ಅವರ ಯೋಗಕ್ಷೇಮಕ್ಕೆ ಹೆಚ್ಚು ಸೂಕ್ತವಾದ ವಾತಾವರಣವನ್ನು ಕಲ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹಂಚಿಕೊಂಡ ಫೋಟೋ & ವೀಡಿಯೋದಲ್ಲಿ ಆರ್ಯ ಅವರು ಮಗುವನ್ನು ಸಂತೈಸುವ ಹೃದಯಸ್ಪರ್ಶಿ ಕ್ಷಣವನ್ನು ಸೆರೆಹಿಡಿಯಲಾಗಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.