ಕೇರಳದಲ್ಲಿ ಸಿಎಂ ರಾಜ್ಯಪಾಲರ ಮಧ್ಯೆ ಸಮರ: ಪಿಣರಾಯಿ ವಿರುದ್ಧ ಗವರ್ನರ್ ಆರೀಫ್ ಕೆಂಗಣ್ಣು

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ತಮ್ಮ ಮೇಲೆ ದಾಳಿ ನಡೆಸಿದ್ದಾರೆ ಎಂದು ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಸೋಮವಾರ ಆರೋಪಿಸಿದ್ದಾರೆ. ಆಡಳಿತಾರೂಢ ಸಿಪಿಐ (ಎಂ) ನ ವಿದ್ಯಾರ್ಥಿ ವಿಭಾಗವಾದ ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ (ಎಸ್ಎಫ್ಐ) ಕಾರ್ಯಕರ್ತರು ರಾಜ್ಯಪಾಲರ ವಾಹನದ ಮೇಲೆ ದಾಳಿ ನಡೆಸಿದ ನಂತರ ಈ ಆರೋಪ ಕೇಳಿಬಂದಿದೆ.
ತನ್ನನ್ನು ದೈಹಿಕವಾಗಿ ಹಲ್ಲೆ ಮಾಡಲು ಜನರನ್ನು ಕಳುಹಿಸಲು ಸಿಎಂ ವಿಜಯನ್ ಪಿತೂರಿ ನಡೆಸಿದ್ದಾರೆ ಎಂದು ಖಾನ್ ಆರೋಪಿಸಿದ್ದಾರೆ.
ರಾಜ್ಯಪಾಲರ ಪ್ರಕಾರ, ಅವರ ವಾಹನವನ್ನು ಕಾರ್ಯಕರ್ತರು ಸುತ್ತುವರೆಯಲು ಸಿಎಂ ನಿರ್ದೇಶಿಸಿದ್ದಾರೆ. ಅಲ್ಲದೇ ಪ್ರತಿಭಟನಾಕಾರರು ಕಪ್ಪು ಬಾವುಟಗಳನ್ನು ನನ್ನ ಕಡೆ ತೋರಿಸಿ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜಭವನದ ಮೂಲಗಳ ಪ್ರಕಾರ, ಖಾನ್ ಅವರ ಮೇಲೆ ಮೂರು ಸ್ಥಳಗಳಲ್ಲಿ ಕಪ್ಪು ಬಾವುಟಗಳನ್ನು ಬೀಸಲಾಯಿತು. ಎರಡು ಸಂದರ್ಭಗಳಲ್ಲಿ ಅವರ ಕಾರಿಗೆ ಪ್ರತಿಭಟನಾಕಾರರು ಡಿಕ್ಕಿ ಹೊಡೆದರು. ಮತ್ತೊಂದೆಡೆ, ರಾಜ್ಯಪಾಲರ ವಾಹನವನ್ನು ಎಸ್ಎಫ್ಐ ಕಾರ್ಯಕರ್ತರು ಒಂದು ಸ್ಥಳದಲ್ಲಿ ಮಾತ್ರ ತಡೆದಿದ್ದಾರೆ ಮತ್ತು ವಿದ್ಯಾರ್ಥಿ ಸಂಘಟನೆಯ ಏಳು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.