ನರ್ಸ್ ರಂಜಿತಾ ಸಾವನ್ನು ವ್ಯಂಗ್ಯವಾಡಿದ ಕೇರಳ ತಹಶೀಲ್ದಾರ್ ಅಮಾನತು

ತಿರುವನಂತಪುರಂ: ಏರ್ ಇಂಡಿಯಾ ವಿಮಾನ ದುರಂತದಲ್ಲಿ ಸಾವನ್ನಪ್ಪಿದ ನರ್ಸ್ ರಂಜಿತಾ ಅವರ ಸಾವನ್ನು ವ್ಯಂಗ್ಯ ಮಾಡಿದ ತಹಶೀಲ್ದಾರ್ ವೊಬ್ಬನನ್ನು ಕೇರಳ ಸರ್ಕಾರ ಅಮಾನತು ಮಾಡಿ ಆದೇಶಿಸಿದೆ.
ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ತಾಲೂಕಿನ ಡೆಪ್ಯೂಟಿ ತಹಶೀಲ್ದಾರ್ ಪವಿತ್ರನ್ ಅಮಾನತು ಆಗಿರುವ ತಹಶೀಲ್ದಾರ್ ಆಗಿದ್ದಾನೆ.
ಯುಕೆಯಲ್ಲಿ ನರ್ಸ್ ಆಗಿದ್ದ ರಂಜಿತಾ ರಜೆಯ ಮೇಲೆ ಕೇರಳಕ್ಕೆ ಬಂದಿದ್ದರು. ರಂಜಿತಾ ಅವರಿಗೆ ಕೇರಳ ಆರೋಗ್ಯ ಇಲಾಖೆಯಲ್ಲಿ ಕೆಲಸ ಸಿಕ್ಕಿತ್ತು. ಹೀಗಾಗಿ ಸಹಿ ಹಾಕಲು ಕೇರಳಕ್ಕೆ ಆಗಮಿಸಿದ್ದರು. ಬಳಿಕ ಯುಕೆಯಲ್ಲಿ ಮಾಡಿಕೊಂಡಿದ್ದ ಒಪ್ಪಂದ ಪೂರ್ಣಗೊಳಿಸಲು ಯುಕೆಗೆ ಪ್ರಯಾಣಿಸುತ್ತಿದ್ದ ವೇಳೆ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದರು.
ಇತ್ತ ನರ್ಸ್ ರಂಜಿತಾ ಅವರ ಸಾವನ್ನು ವ್ಯಂಗ್ಯವಾಡಿದ್ದ ಪವಿತ್ರನ್, ಕೇರಳ ಸರ್ಕಾರಕ್ಕೆ ರಜೆ ಸಲ್ಲಿಸಿ ಹೋಗಿದ್ದಕ್ಕೆ ರಂಜಿತಾಗೆ ಸಾವು ಎಂದು ಬರೆದುಕೊಂಡಿದ್ದ. ಇನ್ನೊಂದು ಪೋಸ್ಟ್ ನಲ್ಲಿ ಆಕೆ ಇನ್ನಷ್ಟು ಎತ್ತರಕ್ಕೆ ಏರಲಿ ಎಂದು ವ್ಯಂಗ್ಯವಾಡಿ ವಿಕೃತಿ ಮೆರೆದಿದ್ದ.
ಪವಿತ್ರನ್ ಪೋಸ್ಟ್‌ಗೆ ಕೇರಳದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಸಿಎಂ ಪಿಣರಾಯಿ ವಿಜಯನ್ ಅವರಿಗೆ ಆನ್ ಲೈನ್ ನಲ್ಲಿ ಹಲವು ಮಂದಿ ದೂರು ಸಲ್ಲಿಸಿದ್ದರು. ಈ ದೂರಿನ ಬೆನ್ನಲ್ಲೇ ಕಾಸರಗೋಡು ಜಿಲ್ಲಾಧಿಕಾರಿ ಕೆ. ಇಂಬಶೇಖರನ್ ಅವರು, ಪವಿತ್ರನ್ ನನ್ನು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: