ಸುಪ್ರೀಂ ಕೋರ್ಟ್ ವಿಚಾರಣೆ ಮುನ್ನವೇ ಮೂವರು ಎಎಪಿ ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆ - Mahanayaka

ಸುಪ್ರೀಂ ಕೋರ್ಟ್ ವಿಚಾರಣೆ ಮುನ್ನವೇ ಮೂವರು ಎಎಪಿ ಕೌನ್ಸಿಲರ್ ಗಳು ಬಿಜೆಪಿಗೆ ಸೇರ್ಪಡೆ

19/02/2024


Provided by

ಚಂಡೀಗಢ ಮಹಾನಗರ ಪಾಲಿಕೆಯಲ್ಲಿ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ ಹಿನ್ನಡೆಯಾಗಿದೆ. ಯಾಕೆಂದರೆ ಮೂವರು ಎಎಪಿ ಕೌನ್ಸಿಲರ್ ಗಳು ಇಂದು ಸುಪ್ರೀಂ ಕೋರ್ಟ್ ನಲ್ಲಿ ನಿರ್ಣಾಯಕ ವಿಚಾರಣೆಗೆ ಮುಂಚಿತವಾಗಿ ಬಿಜೆಪಿ ಸೇರಿದ್ದಾರೆ. ಅಷ್ಟೇ ಅಲ್ಲ, ಚಂಡೀಗಢದ ಮೇಯರ್ ಮನೋಜ್ ಸೋಂಕರ್ ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಮೇಯರ್ ಚುನಾವಣೆಗೆ ದಾರಿ ಮಾಡಿಕೊಟ್ಟಿದೆ.

8 ವಿರೋಧ ಪಕ್ಷಗಳ ಮತಗಳು ತಿರಸ್ಕೃತಗೊಂಡ ನಂತರ ಸೋಂಕರ್ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಿಸಿದ ಪ್ರಿಸೈಡಿಂಗ್ ಅಧಿಕಾರಿಯ ನಿರ್ಧಾರವನ್ನು ಪ್ರಶ್ನಿಸಿ ಎಎಪಿ ಮತ್ತು ಕಾಂಗ್ರೆಸ್ ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿದ್ದವು. ಗುರುಚರಣ್ ಜಿತ್ ಸಿಂಗ್ ಕಲಾ, ನೇಹಾ ಮತ್ತು ಪೂನಂ ದೇವಿ ಮೂವರು ಕೌನ್ಸಿಲರ್ ಗಳು. ಎಎಪಿ ಸುಳ್ಳು ಭರವಸೆಗಳನ್ನು ನೀಡುತ್ತಿದೆ ಎಂದು ಆರೋಪಿಸಿದ ಈ ಮೂವರು ನಾಯಕರು, ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಗಳಿಂದ ಪ್ರೇರಿತರಾಗಿ ಬಿಜೆಪಿ ಪಕ್ಷಕ್ಕೆ ಸೇರಿದ್ದೇವೆ ಎಂದು ಹೇಳಿದ್ದಾರೆ.

35 ಸದಸ್ಯರ ಸದನದಲ್ಲಿ, 14 ಕೌನ್ಸಿಲರ್ ಗಳು ಮತ್ತು ಪದನಿಮಿತ್ತ ಸದಸ್ಯರು ಅಂದರೆ ಸಂಸದ ಕಿರಣ್ ಖೇರ್ ಸೇರಿದಂತೆ ಮುನ್ಸಿಪಲ್ ಕಾರ್ಪೊರೇಷನ್ ಹೌಸ್ ನಲ್ಲಿ ಬಿಜೆಪಿ ಒಟ್ಟು 15 ಮತಗಳನ್ನು ಹೊಂದಿದೆ. ಎಎಪಿ 13 ಕೌನ್ಸಿಲರ್ ಗಳನ್ನು ಹೊಂದಿದ್ದರೆ, ಕಾಂಗ್ರೆಸ್ 7 ಸದಸ್ಯರನ್ನು ಹೊಂದಿದೆ. ಶಿರೋಮಣಿ ಅಕಾಲಿ ದಳವು ಸದನದಲ್ಲಿ ಒಬ್ಬ ಕೌನ್ಸಿಲರ್ ಅನ್ನು ಹೊಂದಿದೆ. ಎಎಪಿ ಮತ್ತು ಕಾಂಗ್ರೆಸ್ ಒಟ್ಟಾಗಿ 20 ಮತಗಳನ್ನು ಹೊಂದಿದ್ದವು ಆದರೆ ಜನವರಿ 30 ರ ಚುನಾವಣೆಯಲ್ಲಿ 8 ಮತಗಳನ್ನು ಅಮಾನ್ಯವೆಂದು ಘೋಷಿಸಿದ್ದರಿಂದ, ಬಿಜೆಪಿಯ ಮೇಯರ್ ಅಭ್ಯರ್ಥಿ ಸೋಂಕರ್ ವಿಜೇತರಾಗಿ ಹೊರಹೊಮ್ಮಿದರು. ಪಂಜಾಬ್ ಮತ್ತು ಹರಿಯಾಣ ಹೈಕೋರ್ತ್ ನಿಂದ ಯಾವುದೇ ಪರಿಹಾರ ಸಿಗದ ಕಾರಣ ಎಎಪಿ-ಕಾಂಗ್ರೆಸ್ ಪ್ರಿಸೈಡಿಂಗ್ ಅಧಿಕಾರಿಯ ವಿರುದ್ಧ ಆರೋಪ ಹೊರಿಸಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿತ್ತು.

ಈಗ, ಮೂವರು ಎಎಪಿ ಕೌನ್ಸಿಲರ್ ಗಳೊಂದಿಗೆ, ಬಿಜೆಪಿ 18 ಮತಗಳನ್ನು ಹೊಂದಿದ್ದರೆ, ಎಎಪಿ-ಕಾಂಗ್ರೆಸ್ ಮೈತ್ರಿಕೂಟವು ಶಿರೋಮಣಿ ಅಕಾಲಿ ದಳದ ಸಹಾಯದಿಂದ 18 ಮತಗಳನ್ನು ಹೊಂದಿರುತ್ತದೆ.

ಇತ್ತೀಚಿನ ಸುದ್ದಿ