ತುಕ್ಕು ಹಿಡಿದ ಸರ್ಕಾರದ ಉಕ್ಕು ಖಾತೆಯ ಸಚಿವ ಕುಮಾರಸ್ವಾಮಿಯವರೇ: ವ್ಯಂಗ್ಯದೊಂದಿಗೆ 5 ಪ್ರಶ್ನೆ ಕೇಳಿದ ಕಾಂಗ್ರೆಸ್ - Mahanayaka
10:07 PM Saturday 23 - August 2025

ತುಕ್ಕು ಹಿಡಿದ ಸರ್ಕಾರದ ಉಕ್ಕು ಖಾತೆಯ ಸಚಿವ ಕುಮಾರಸ್ವಾಮಿಯವರೇ: ವ್ಯಂಗ್ಯದೊಂದಿಗೆ 5 ಪ್ರಶ್ನೆ ಕೇಳಿದ ಕಾಂಗ್ರೆಸ್

kumaraswamy
12/06/2024


Provided by

ನವದೆಹಲಿ: ನರೇಂದ್ರ ಮೋದಿ ಸರ್ಕಾರವನ್ನು ತುಕ್ಕು ಹಿಡಿದಿರುವ ಸರ್ಕಾರ ಎಂದು ಕಾಂಗ್ರೆಸ್ ಹೇಳಿದ್ದು, ನೂತನವಾಗಿ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ಹೆಚ್.ಡಿ.ಕುಮಾರಸ್ವಾಮಿ ಅವರಿಗೆ  ಐದು ಪ್ರಶ್ನೆಗಳನ್ನು  ಕೇಳಿದ್ದಾರೆ.

ಉಕ್ಕು ಘಟಕಗಳನ್ನು ಪ್ರಧಾನಿ ಮೋದಿಯವರು ತಮ್ಮ ಸ್ನೇಹಿತರಿಗೆ ಮಾರುವುದಿಲ್ಲ ಎನ್ನುವ ಲಿಖಿತ ಭರವಸೆಯನ್ನು ನೀಡುತ್ತೀರಾ ಎಂಬ ವ್ಯಂಗ್ಯದೊಂದಿಗೆ ಕುಮಾರಸ್ವಾಮಿ ಅವರಿಗೆ 5 ಪ್ರಶ್ನೆಗಳನ್ನು ಕಾಂಗ್ರೆಸ್ ಕೇಳಿದೆ.

* ಪ್ರಧಾನಿ ಮೋದಿಯವರ ಕಳೆದ ಸರ್ಕಾರ ವೈಜಾಗ್ ಸ್ಟೀಲ್ ಪ್ಲ್ಯಾಂಟ್ ಎಂದೇ ಹೆಸರಾಗಿರುವ ರಾಷ್ಟ್ರೀಯ ಇಸ್ವತ್ ನಿಗಮ ಲಿಮಿಟೆಡ್ ಅನ್ನು ಪ್ರಧಾನಿಗಳ ಸ್ನೇಹಿತರಿಗೆ ಮಾರಾಟ ಮಾಡಲು ಪ್ರಸ್ತಾವನೆ ಸಲ್ಲಿಸಿದ್ದರು. ಸುಮಾರು ಒಂದು ಲಕ್ಷ ಜನ ಜೀವನೋಪಾಯಕ್ಕೆ ಈ ಸಂಸ್ಥೆಯನ್ನು ನಂಬಿದ್ದಾರೆ.

2021ರ ಜನವರಿಯಲ್ಲಿ ಆರ್ಥಿಕ ವ್ಯವಹಾರಗಳ ಮೇಲೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಶೇ. 100ರಷ್ಟು ಖಾಸಗೀಕರಣದ ಪ್ರಸ್ತಾವನೆಗೆ ಅಂಕಿತ ಹಾಕಲಾಗಿದೆ. ಕಳೆದ ಮೂರು ವರ್ಷಗಳಿಂದ ಕಾರ್ಮಿಕರು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ. ಹಾಗಾಗಿ, ನೂತನ ಉಕ್ಕು ಖಾತೆಯ ಸಚಿವರು, ಪ್ರಧಾನಿಗಳು ತಮ್ಮ ಸ್ನೇಹಿತರಿಗೆ ಈ ಪ್ಲ್ಯಾಂಟ್ ಅನ್ನು ಮಾರುವುದಿಲ್ಲ ಎನ್ನುವ ಲಿಖಿತ ಭರವಸೆಯನ್ನು ನೀಡಬಲ್ಲರೇ?

*  2019ರಲ್ಲಿ ಸೇಲಂ ಉಕ್ಕಿನ ಕಾರ್ಖಾನೆಯಲ್ಲಿ ಬಂಡವಾಳ ಹೂಡಿಕೆ ಸ್ಥಗಿತಗೊಳಿಸಲು ನಿರ್ಧರಿಸಿದರು. ಸುಮಾರು ಎರಡು ಸಾವಿರಕ್ಕೂ ಹೆಚ್ಚು ಕಾರ್ಮಿಕರು, ಜಾಗ ನೀಡಿದ್ದ ರೈತರು ಖಾಸಗೀಕರಣದ ವಿರುದ್ದ ರಸ್ತೆಗಿಳಿದಿದ್ದರು. ಕೇಂದ್ರ ಸರ್ಕಾರಕ್ಕೆ ಈವರೆಗೂ ಈ ಕಾರ್ಖಾನೆ ಮಾರಲು ಸಾಧ್ಯವಾಗಿಲ್ಲ. ಕುಮಾರಸ್ವಾಮಿಯವರು ಈ ಕಾರ್ಖಾನೆಯ ಖಾಸಗೀಕರಣ ಪ್ರಕ್ರಿಯೆ ಮುಂದುವರಿಸುವರೇ?

*  ಡಾ.ಮನಮೋಹನ್ ಸಿಂಗ್ ಅವರ ಪರಿಕಲ್ಪನೆಯಲ್ಲಿ ನಗರ್ನಾರ್ ಉಕ್ಕು ಕಾರ್ಖಾನೆಯ ಬಸ್ತರ್ ಪ್ರದೇಶದ ಜನರಲ್ಲಿ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ, ಪ್ರಧಾನಿ ಮೋದಿಯವರು 2020ರಿಂದ ಇದನ್ನು ಖಾಸಗೀಕರಣಗೊಳಿಸಲು ಪ್ರಯತ್ನಿಸಿದ್ದರು. ಈ ಉದ್ಯಮ ಅವರ ಸ್ನೇಹಿತರ ಪಾಲಾಗಲು ಸಿದ್ದತೆಯಾಗಿತ್ತು.

ಕಳೆದ ವಿಧಾನಸಭಾ ಚುನಾವಣೆಯ ವೇಳೆ ಅಮಿತ್ ಶಾ ಅವರು ಇಲ್ಲಿಗೆ ಬಂದು ಖಾಸಗೀಕರಣ ಮಾಡುವುದಿಲ್ಲ ಎನ್ನುವ ಭರವಸೆಯನ್ನು ನೀಡಿದ್ದಾರೆ. ಅಮಿತ್ ಶಾ ಅವರು ತಮ್ಮ ಮಾತಿಗೆ ಬದ್ದರಾಗಿರುತ್ತಾರಾ? ಅಥವಾ ಪ್ರಧಾನಿ ಸ್ನೇಹಿತರಿಗೆ ಕಾರ್ಖಾನೆ ಮಾರಾಟ ಮಾಡುವರೇ?

*  2022ರ ಅಕ್ಟೋಬರ್ ತಿಂಗಳಿಂದ ಭದ್ರಾವತಿಯ ವಿಶ್ವೇಶ್ವರಯ್ಯ ಉಕ್ಕು ಹಾಗೂ ಕಬ್ಬಿಣ ಕಾರ್ಖಾನೆ ಮುಚ್ಚಿದೆ. ಕರ್ನಾಟಕಕ್ಕೆ ಅದಿರು ಪೂರೈಸಲು ಯಾವುದೇ ನಿಕ್ಷೇಪವಿಲ್ಲ ಎಂಬ ಸಮಜಾಯಿಷಿ ನೀಡಿತ್ತು. ಹೀಗಾಗಿ, ಕುಮಾರಸ್ವಾಮಿಯವರು ವಿಐಎಸ್ ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೈಬಿಟ್ಟು ಕಾರ್ಖಾನೆ ಉಳಿವಿಗೆ ಅಗತ್ಯ ಕ್ರಮ ತೆಗೆದುಕೊಳ್ಳುವರೇ?

*  ಪ್ರಧಾನಿ ಮೋದಿಯವರು ಕಳೆದ ಬಾರಿ ದುರ್ಗಾಪುರ ಅಲೊಯ್ ಉಕ್ಕಿನ ಕಾರ್ಖಾನೆ ಮಾರಾಟ ಮಾಡಲು ಪ್ರಯತ್ನಿಸಿದ್ದರು. ಕುಮಾರಸ್ವಾಮಿಯವರು ಈ ಕಾರ್ಖಾನೆಯ ಖಾಸಗೀಕರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಪಶ್ಚಿಮ ಬಂಗಾಳ ಮತ್ತು ದುರ್ಗಾಪುರದ ಜನರಿಗೆ ಭರವಸೆ ನೀಡಬಲ್ಲರೇ? ಎಂದು  ಕಾಂಗ್ರೆಸ್ ಪ್ರಶ್ನಿಸಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ