ಕೆರೆಗಳು ಕಾಣೆಯಾಗಿವೆ, ಜೀವಗಳು ಬಳಲಿವೆ - Mahanayaka

ಕೆರೆಗಳು ಕಾಣೆಯಾಗಿವೆ, ಜೀವಗಳು ಬಳಲಿವೆ

udantha shivakumar
30/04/2024

  • ಉದಂತ ಶಿವಕುಮಾರ್

ಬಾಲ್ಯವನ್ನು ನೆನಪಿಸಿಕೊಂಡಾಗಲೆಲ್ಲ ನನಗೆ ಪ್ರಕೃತಿಯ ಜೊತೆಗೆ ಕೆರೆಗಳ ನೆನಪು ಆಗುತ್ತದೆ. ನಮ್ಮೂರಿನ ಹೊರಭಾಗದಲ್ಲಿ ಹಿಂದೆ ಇದ್ದ ಕೆರೆ ಇಂದು ಕಾಣುತ್ತಿಲ್ಲ. ಆ ಕೆರೆಯ ಆಚೆಗೆ ದಟ್ಟವಾದ ಅರಣ್ಯವಿತ್ತು.  ಆ ಕೆರೆಯಲ್ಲಿ ಬಾಲ್ಯದಲ್ಲಿ ನಾವು ಎಮ್ಮೆ ಕರುಗಳನ್ನು ತೊಳೆಯುವುದು. ಆ ನೀರಿನಲ್ಲಿ ಈಜಾಡುವುದು ಮಾಡುತ್ತಿದ್ದೆವು. ಅಲ್ಲಿ ಆ ಕೆರೆಯ ನೀರನ್ನು ಕಾಡಿನ ಅಂಚಿನಲ್ಲಿರುವ ಪ್ರಾಣಿಗಳು ಪಕ್ಷಿಗಳು ಕುಡಿದು ಮಿಂದು ಸಂಭ್ರಮಿಸುತ್ತಿದ್ದವು.

ವಿಷಾದ ಸಂಗತಿ ಎಂದರೆ ಈಗ ಅಲ್ಲಿ ಸುತ್ತ ಮುತ್ತಾ ಒಂದು ಕೆರೆಯೂ ಉಳಿದಿಲ್ಲ. ಆ ಕೆರೆಗಳು ಈಗ ನೆಲಸಮವಾಗಿವೆ, ತೋಟಗಳಾಗಿವೆ. ಈ ಒಂದು ದುರದೃಷ್ಟ ಒದಗಿರುವುದು ನಮ್ಮ ಊರಿನ ಕೆರೆಗಳಿಗೆ ಮಾತ್ರವಲ್ಲ, ಅನೇಕ ಕಡೆ ಕೆರೆಗಳ ಪಾಡು ಅದೇ ಆಗಿದೆ. ಒಂದು ಕಾಲದಲ್ಲಿ ಸಮುದ್ರದಂತೆ ಕಾಣುತ್ತಿದ್ದ ಕೆರೆಗಳು ಈಗ ಮುಚ್ಚಿ ಹೋಗಿವೆ. ನಗರ ಪ್ರದೇಶಗಳಲ್ಲಿ ಕ್ರೀಡಾ ಮೈದಾನಗಳಾಗಿವೆ ಅಥವಾ ಸೈಟುಗಳಾಗಿ ಉಳಿದಿವೆ.

ಎಷ್ಟೋ ಕೆರೆಗಳು ಈಗ ಮುಚ್ಚಿಕೊಳ್ಳುತ್ತಿವೆ. ಅಲ್ಪ ಸ್ವಲ್ಪ ಹೂಳೆತ್ತಿದರೂ ಮತ್ತೆ ತುಂಬಿಕೊಳ್ಳುವ ಈ ಕೆರೆಗಳನ್ನು ಕಣ್ಣೆತ್ತಿ ನೋಡುವವರು ಯಾರು ಇಲ್ಲ! ಕೆಲವು ಕಡೆ ಪ್ರವಾಸ ಹೋದಾಗ ನಾನು ರಸ್ತೆಯ ಅಕ್ಕಪಕ್ಕದಲ್ಲಿ ಇಂಥ ಹತ್ತಾರು ಕೆರೆಗಳನ್ನು ನೋಡಿದ್ದೇನೆ. ನಂತರದ ದಿನಗಳಲ್ಲಿ ಅನೇಕ ಕಡೆ ಕೆರೆಗಳ ಯಾವ ಲಕ್ಷಣವೂ ಉಳಿದಿಲ್ಲ. ಅವುಗಳೆಲ್ಲ ಹೊಲಗಳಾಗಿ ಕಾಣುತ್ತವೆ. ಇಂತಹ  ಸಂದರ್ಭಗಳಲ್ಲಿ ನನಗೆ ವ್ಯಥೆಯಾಗುತ್ತದೆ. ಕೇವಲ ಭಾವನಾತ್ಮಕ  ಭಾವನಾತ್ಮಕತೆಯಿಂದ ಹೀಗಾಗುವುದಿಲ್ಲ. ನಿಜವಾದ ಉಪಯುಕ್ತತೆ, ಸಾಮಾಜಿಕ ಆರ್ಥಿಕ ದೃಷ್ಟಿಯ ಮಹತ್ವ, ನೀರಾವರಿಯ ಸಮಸ್ಯೆ ಈ ಎಲ್ಲಾ ದೃಷ್ಟಿಗಳಿಂದಲೂ ಈ ಕೆರೆಗಳು ನಮ್ಮ ಸಹಾನುಭೂತಿಯನ್ನು ಬೇಡುತ್ತವೆ.


Provided by

ನಮ್ಮ ಹಿರಿಯರು ಕೆರೆಗಳನ್ನು ಕಷ್ಟಪಟ್ಟು ಕಟ್ಟಿಸಿದರು. ಅವುಗಳಲ್ಲಿ ನೀರು ಬಾರದಾಗ ತಮ್ಮ ಮಗಳನ್ನೋ ಸೊಸೆಯನ್ನೋ ಬಲಿ ಕೊಟ್ಟು ನೀರು ತರಿಸುತ್ತಿದ್ದರು. ಆ ನೀರು ತುಂಬಿದ ಕೆರೆಗಳಲ್ಲಿ ಪಶು ಪಕ್ಷಿಗಳು ಮಿಂದು ನೀರು ಕುಡಿದು ಸಂತೋಷಪಡುತ್ತಿದ್ದವು. ಇದನ್ನು ಕಂಡು ಧನ್ಯರಾಗುತ್ತಿದ್ದರು. ಇದರಿಂದ ಊರಿಗೊಂದು ನೀರಿನ ಆಸರೆ ಆದುದಕ್ಕೆ ಸಂಭ್ರಮಿಸುತಿದ್ದರು. ವ್ಯವಸಾಯಕ್ಕೆ ಆದರ ನೆರವು ಪಡೆಯುತ್ತಿದ್ದರು. ಕೆರೆಯ ಆಸರೆಯಿಲ್ಲದೆ ಅವರು ಊರು ಕಟ್ಟಲಿಲ್ಲ; ತೋಟ ಮಾಡಲಿಲ್ಲ; ಹೊಲವನ್ನು ಹೊಂದಲಿಲ್ಲ. ಒಂದೂರಿನಿಂದ ಇನ್ನೊಂದು ಊರಿಗೆ ಹೆಣ್ಣು ಕೊಡಬೇಕಾದಾಗ ಮೊದಲು ಪರಿಗಣಿಸುತ್ತಿದ್ದದ್ದು ಆ ಊರಿನ ಕೆರೆ. ಈಗ ಅದೆಲ್ಲ ಕನಸಿನ ಮಾತಾಗಿದೆ.

ನಮ್ಮ ಜನ ಜೀವನದಲ್ಲಿ ಕೆರೆಕಟ್ಟೆಗಳು ಬಹು ಮಹತ್ವದ ಸ್ಥಾನವನ್ನು ಪಡೆದುಕೊಂಡಿವೆ. ಆಗ ಅಣೆಕಟ್ಟೆಗಳಿರಲಿಲ್ಲ; ಕೊಳವೆ ಬಾವಿಗಳಿರಲಿಲ್ಲ. ಕೃಷಿಗಾಗಲಿ, ಕುಡಿಯುವುದಕ್ಕಾಗಲಿ ಕೆರೆಯನ್ನೇ ಅವಲಂಬಿಸಬೇಕಾಗಿತ್ತು. ಕೆರೆಗಳಿಂದ ವ್ಯವಸಾಯಕ್ಕೆ ನೀರು ಒದಗುತ್ತಿದ್ದದ್ದು ಇಂದು ನೆನ್ನೆಯದಲ್ಲ, ಸಾವಿರಾರು ವರ್ಷಗಳಷ್ಟು ಹಳೆಯದು. ಬನವಾಸಿ ಪ್ರದೇಶಕ್ಕೆ ಸೇರಿದ ದಾಖಲೆ ಒಂದರಲ್ಲಿ ಉಲ್ಲೇಖಗೊಂಡದ್ದೆ ಕೆರೆಯ ಮೊದಲ ಸಾಕ್ಷಿಯಾಗಿದೆ. ಶಾತವಾಹನ ಮನೆತನಕ್ಕೆ ಸೇರಿದ ನಾಗಶ್ರೀ ಹೆಸರಿನ ರಾಜಕುಮಾರಿ ಒಬ್ಬಳು ವಿಹಾರವೊಂದಕ್ಕೆ ತಟಾಕವೊಂದನ್ನು ದಾನಮಾಡಿದ ಉಲ್ಲೇಖ ಇದು. ಕ್ರಿಸ್ತಶಕ 4ನೇ ಶತಮಾನದ ನಂತರ ಅನೇಕ ಕೆರೆಗಳ ಪ್ರಸ್ತಾಪ ಶಾಸನಗಳಲ್ಲಿ ದೊರೆಯುತ್ತದೆ.

ದೇವಸ್ಥಾನಗಳನ್ನು ಕಟ್ಟಿಸುವುದು, ಕೆರೆಗಳನ್ನು ತೋಡಿಸುವುದು ಪುಣ್ಯದ ಕೆಲಸಗಳಾಗಿದ್ದವು. ಲಕ್ಷ್ಮೀಧರ ಅಮಾತ್ಯನಿಗೆ, ಅವನು ಮಗುವಾಗಿದ್ದಾಗ ಅವನ ತಾಯಿ ಎಡೆಬಿಡದೆ ಮಾಡುತ್ತಿದ್ದ ಉಪದೇಶದಲ್ಲಿ ಕೆರೆಯನ್ನು ಕಟ್ಟಿಸು, ಬಾವಿಯನ್ನು ತೋಡಿಸು ಎಂಬುದು ಸೇರಿದೆ. 12ನೆಯ ಶತಮಾನದ ತಾಯಿ ಒಬ್ಬಳು ತನಗೆ ಪುಣ್ಯ ದೊರಕಿಸುವ ಸಲುವಾಗಿ ಏನಾದರೂ ಮಾಡಬೇಕೆಂದು ಮಕ್ಕಳನ್ನು ಕೇಳಿಕೊಂಡಾಗ ಅವರು ಕೆರೆಯೊಂದನ್ನು ಕಟ್ಟಿಸಿದ ಸಂಗತಿ ಬೆಳಗಾವಿ ಜಿಲ್ಲೆಯಲ್ಲಿ ದಾಖಲಾಗಿದೆ. ಹೀಗೆ ಸಾವಿರಾರು ಕೆರೆಗಳು ನಿರ್ಮಾಣಗೊಂಡವು.

1959ರ ಒಂದು ಲೆಕ್ಕಾಚಾರದಂತೆ ಕರ್ನಾಟಕದಲ್ಲಿ ಸುಮಾರು 46,000 ಕೆರೆಗಳಿದ್ದವು ಅಷ್ಟು ಹೊತ್ತಿಗೆ ಆಗಲೇ ಅನೇಕ ಕೆರೆಗಳು ಮುಚ್ಚಿಕೊಂಡಿದ್ದವು. ಆಮೇಲೆ ಅನೇಕ ಕೆರೆಗಳು ಇಲ್ಲವಾದವು. ಒಂದು ಕಾಲದಲ್ಲಿ ನಮ್ಮ ಆರ್ಥಿಕ ಅಭಿವೃದ್ಧಿಗೆ, ಸಾಮಾಜಿಕ ನೆಮ್ಮದಿಗೆ, ನೀರಾವರಿಗೆ ಕಾರಣವಾಗಿದ್ದ ಕೆರೆಗಳು ಇಂದಿಗೂ ಆ ಕೆಲಸಗಳನ್ನು ಯಶಸ್ವಿಯಾಗಿ ನಿರ್ವಹಿಸಬಲ್ಲವು. ಆದರೆ ಆ ಕೆರೆಗಳು ಈಗ ಬದುಕಿ ಉಳಿಸಲು ಯಾವ ಬೇಕಾದ ಯೋಜನೆಗಳನ್ನು ನಾವು ಎಂದಿಗೂ ಮಾಡಲೇ ಇಲ್ಲ. ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಕೆರೆಗಳನ್ನು ಸೈಟುಗಳಾಗಿ ಮಾಡದೆ ಯಥಾಪ್ರಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಕಾಡಿಲ್ಲದೆ ನಾಡಿಲ್ಲ ಎಂದು ಕೇಳಿ ಹೇಳುತ್ತಿದ್ದೇವೆ. ಕೆರೆ ಇಲ್ಲದೆ ಕಾಡಿಲ್ಲ ಎಂಬುದನ್ನು ನಾವು ಅರಿತುಕೊಳ್ಳಬೇಕಾಗಿದೆ. ಇದು ನನ್ನ ವೈಯಕ್ತಿಕ ಪುಣ್ಯಕ್ಕಾಗಿಯಲ್ಲ; ಸಮಷ್ಟಿ ಸುಖಕಾಗಿ ಎಂದು ಹೇಳಲು ಬಯಸುತ್ತೇನೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ