ಈ ಸರ್ಕಾರ 10 ತಿಂಗಳು ಮುಂದುವರಿಯಲಿ ನೋಡೋಣ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ
ಬೆಂಗಳೂರು: 10 ವರ್ಷ ಸರ್ಕಾರದಲ್ಲಿರುತ್ತೇವೆ ಅಂತ ಡಿ.ಕೆ.ಶಿವಕುಮಾರ್ ಹೇಳ್ತಾರೆ, 10 ತಿಂಗಳು ಈ ಸರ್ಕಾರ ಮುಂದುವರಿಯಲಿ ನೋಡೋಣ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಕೆಂಗೇರಿ ಬಳಿ ಕೆಂಪಮ್ಮ ದೇವಸ್ಥಾನದಲ್ಲಿ ಬಿಜೆಪಿ- ಜೆಡಿಎಸ್ ಪಾದಯಾತ್ರೆಗೆ ಚಾಲನೆ ನೀಡಿ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಸಿದ್ದರಾಮಯ್ಯನವರೇ ಮುಡಾ ಸರ್ಕಾರದ ಆಸ್ತಿ. ಬಡಾವಣೆ ಆಗಿರುವ ಆಸ್ತಿಯನ್ನು ನಿಮ್ಮ ಬಾಮೈದನ ಹೆಸರಿಗೆ ಮಾಡಲು ಅವಕಾಶ ಇದೆಯಾ? ಇದನ್ನ ಅಂಬೇಡ್ಕರ್ ಸಂವಿಧಾನದಲ್ಲಿ ಬರೆಯಲಾಗಿದ್ಯಾ? ಸರ್ಕಾರದ ಜಮೀನನ್ನ ನಿಮ್ಮ ಬಾಮೈದನ ಹೆಸರಿಗೆ ಹೇಗೆ ದಾಖಲಾತಿ ಮಾಡಿಕೊಟ್ಟರು. ಸಿದ್ದರಾಮಯ್ಯ ನನಗೆ ಇದ್ಯಾವುದು ಗೊತ್ತಿಲ್ಲ ಎನ್ನುತ್ತಾರೆ. 64 ಕೋಟಿ ಕೊಡಿ ಎನ್ನುತ್ತಿರಾ. ಅಲ್ಲಿ ನಡೆದ ಘಟನೆ ನಿಮ್ಮ ಗಮನಕ್ಕೆ ಬಾರದೇ ಆಗಿದೆಯಾ? ನಿಮ್ಮ ಪ್ರಭಾವ ಬೀರದೇ ಇಲ್ಲ ಎನ್ನುವುದಕ್ಕೆ ಸಾಧ್ಯವಿದೆಯಾ ಸಿಎಂ ಸಿದ್ದರಾಮಯ್ಯ ಅವರನ್ನು ಹೆಚ್ ಡಿಕೆ ತರಾಟೆಗೆತ್ತಿಕೊಂಡರು.
ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಡಿ.ಕೆ.ಶಿವಕುಮಾರ್ ಅವರೇ ಸಿದ್ದರಾಮಯ್ಯ ವಿರುದ್ದ ದಾಖಲಾತಿ ಕೊಟ್ಟಿದ್ದಾರೆ. ಅವರು ಯಾರ್ ಯಾರ ಕೈಯಲ್ಲಿ ದಾಖಲಾತಿ ಕೊಟ್ಟಿದ್ದಾರೆ ಎಂದು ನಮಗೆ ಗೊತ್ತಿದೆ. ಈಗ ನಾನು ಸಿದ್ದರಾಮಯ್ಯ ಪರ ಎಂದು ನಾಟಕ ಮಾಡುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ವಿರುದ್ಧವೂ ಕುಮಾರಸ್ವಾಮಿ ಹರಿಹಾಯ್ದರು.
ಪಾದಯಾತ್ರೆಯ ಬಗ್ಗೆ ಯಾರ ಒತ್ತಡವೂ ಇಲ್ಲ. ನಾನು ಯಾವ ಸಮಯದಲ್ಲಿ ಯಾವ ನಿರ್ಧಾರ ಕೈಗೊಳ್ಳಬೇಕು ಅದನ್ನ ಕೈಗೊಂಡಿದ್ದೇನೆ. ಮುಕ್ತವಾಗಿ ಚರ್ಚೆ ಮಾಡಿಯೇ ಪಾದಯಾತ್ರೆ ಮಾಡುತ್ತಿದ್ದೇವೆ. ಪಾದಯಾತ್ರೆ ಮುಂದೆ ಹಾಕಿದರೆ ಕಾಂಗ್ರೆಸ್ ನವರು ಎಲ್ಲಿ ದಾಖಲೆ ತಿರುಚುತ್ತಾರೆ ಎಂದು ಪಾದಯಾತ್ರೆ ಮುಂದುವರೆಸಿದ್ದೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ಈ ಸರ್ಕಾರ ಸಂಪೂರ್ಣ ಭ್ರಷ್ಟಾಚಾರದಿಂದ ಕೂಡಿದೆ. ಮುಡಾ ಹಗರಣ, ವಾಲ್ಮೀಕಿ ಹಗರಣ, ವರ್ಗಾವಣೆ ದಂಧೆಯನ್ನ ಮಾಡುತ್ತಿದೆ. ಈ ಸರ್ಕಾರದ ವಿರುದ್ಧ ಎರಡು ಪಕ್ಷದ ಕಾರ್ಯಕರ್ತರು ಭಾಗಿಯಾಗಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth