ಮಂತ್ರ ಮಾಂಗಲ್ಯ ವಿವಾಹವನ್ನು ಪ್ರೋತ್ಸಾಹಿಸೋಣ: ನಟಿ ಪೂಜಾ ಗಾಂಧಿ - Mahanayaka
9:13 AM Wednesday 12 - February 2025

ಮಂತ್ರ ಮಾಂಗಲ್ಯ ವಿವಾಹವನ್ನು ಪ್ರೋತ್ಸಾಹಿಸೋಣ: ನಟಿ ಪೂಜಾ ಗಾಂಧಿ

pooja gandhi
05/02/2025

ಕೊಟ್ಟಿಗೆಹಾರ: ಸರಳ ಮತ್ತು ಅರ್ಥಪೂರ್ಣವಾದ ಮಂತ್ರ ಮಾಂಗಲ್ಯ ವಿವಾಹವನ್ನು ಪ್ರೋತ್ಸಾಹಿಸಬೇಕಿದೆ ಎಂದು ಖ್ಯಾತ ನಟಿ ಪೂಜಾ ಗಾಂಧಿ ಹೇಳಿದರು.

ಹಿರೇಬೈಲ್ ನಲ್ಲಿ ನಡೆದ ನಂದೀಶ್ ಬಂಕೇನಹಳ್ಳಿ ಮತ್ತು ದೀಕ್ಷಾ ಅವರ ಮಂತ್ರ ಮಾಂಗಲ್ಯ ವಿವಾಹದಲ್ಲಿ ವಿವಾಹ ಸಂಹಿತೆ ಭೋದನೆ ಮಾಡಿ ಮಾತನಾಡಿದರು.

ಮಂತ್ರ ಮಾಂಗಲ್ಯವೂ ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ದತಿಯಾಗಿದೆ. ದುಂದುವೆಚ್ಚ ಮಾಡದೇ ವರದಕ್ಷಿಣೆ ವರದಕ್ಷಿಣೆ ತೆಗೆದುಕೊಳ್ಳದೇ ವಿವಾಹವಾಗಲು ಮಂತ್ರ ಮಾಂಗಲ್ಯ ಸೂಕ್ತ ವಿವಾಹ ಪದ್ದತಿಯಾಗಿದೆ ಎಂದರು.

ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರು ಮತ್ತು ಲೇಖಕರಾದ ಪ್ರದೀಪ್ ಕೆಂಜಿಗೆ ಮಾತನಾಡಿ, ಮಂತ್ರ ಮಾಂಗಲ್ಯ ವಿವಾಹವನ್ನು ಮಾಡಿಕೊಳ್ಳುವವರು ಕುಟುಂಬಸ್ಥರೊಂದಿಗೆ ಅನೇಕ ಸವಾಲುಗಳನ್ನು ಎದುರಿಸಬೇಕಾಗಿದೆ. ವಧು ವರರು ಮನೆ ಮಂದಿಯನ್ನು ಒಪ್ಪಿಸಿ ಮಂತ್ರ ಮಾಂಗಲ್ಯ ಪದ್ದತಿಯಲ್ಲಿ ವಿವಾಹವಾಗುವುದಕ್ಕೆ ಹೆತ್ತವರ ಸಹಕಾರವೂ ಮುಖ್ಯವಾಗುತ್ತದೆ ಎಂದರು.

ಉದ್ಯಮಿ ವಿಜಯ್ ಘೋರ್ಪಡೆ ಮಾತನಾಡಿ, ವಿವಾಹ ಸಂಹಿತೆಯನ್ನು ಓದುವ‌ ಮೂಲಕ ವಧು ವರರಿಬ್ಬರು ಜೀವನ ಮೌಲ್ಯಗಳ ಮಹತ್ವವನ್ನು ಅರಿತು ಮಾಂಗಲ್ಯ ಧಾರಣೆ ಮಾಡುವುದು ಅರ್ಥಪೂರ್ಣವಾದದ್ದು ಎಂದರು.

ಈ ಸಂದರ್ಭದಲ್ಲಿ  ವಧು ವರರ ಸಂಬಂಧಿಕರಾದ ಪಾರ್ವತಿ, ವೇಲಾಯುಧನ್, ಸುಮಿತ್ರ, ಅನ್ನಪೂರ್ಣ, ಕೃಷ್ಣ, ದೀಕ್ಷಿತ್, ನಂದೀನಿ, ಅಶ್ವಿನಿ, ಕೀಟ ತಜ್ಞ ಅವಿನಾಶ್, ಶಿಕ್ಷಕ ಪೂರ್ಣೇಶ್ ಮತ್ತಾವರ ಮುಂತಾದವರು ಇದ್ದರು.

ಮಂತ್ರ ಮಾಂಗಲ್ಯ ಎಂಬುದು ಕುವೆಂಪು ಅವರ ಪರಿಕಲ್ಪನೆಯ ಒಂದು ಸರಳ ವಿವಾಹ ಪದ್ಧತಿಯಾಗಿದೆ. ಜಾತಿ, ಧರ್ಮ, ಭಾಷೆ ಎಲ್ಲವನ್ನೂ ಮೀರಿದ ವಿಶ್ವಮಾನವ ವಿವಾಹ ಪದ್ಧತಿ ಎಂದರು ತಪ್ಪಾಗಲಾರದು. ವರದಕ್ಷಿಣೆ, ಗೊಡ್ಡು ಸಂಪ್ರದಾಯಗಳು, ಅರ್ಥವಿಲ್ಲದ ಆಚರಣೆಗಳು, ಮತ್ತು ಆಡಂಬರವನ್ನು ಒಳಗೊಂಡ ಮದುವೆಗಳಿಂದ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂಬುದನ್ನು ಮನಗಂಡ ಕುವೆಂಪುರವರು 1960ರ ದಶಕದಲ್ಲಿ ಮಾಡಿದ ಸಾಮಾಜಿಕ ಕ್ರಾಂತಿಯೇ ಮಂತ್ರ ಮಾಂಗಲ್ಯ ಮದುವೆ.

ಮಂತ್ರಮಾಂಗಲ್ಯ ನಿಯಮಗಳು ಮತ್ತು ಮದುವೆಯ ಏರ್ಪಾಡುಗಳು:

ಮಂತ್ರ ಮಾಂಗಲ್ಯ ಎನ್ನುವುದು ಒಂದು ಪುಸ್ತಕದ ಒಂದು ಸಂಕಲನದ ಹೆಸರು ಮಾತ್ರವಲ್ಲ ಅದು ಒಂದು ವಿವಾಹ ವಿಧಾನ. ಈ ವಿಧಾನದಲ್ಲಿ ಮದುವೆಯಾಗುವ ವಧು-ವರರು, ಅವರ ತಂದೆ-ತಾಯಂದಿರು, ಬಂಧು-ಮಿತ್ರರು ಕೆಲವು ಕನಿಷ್ಠ ಶಿಸ್ತನ್ನು ಕಡ್ಡಾಯವಾಗಿ ಪಾಲಿಸಬೇಕು (ಇಲ್ಲಿ ನೀಡಿರುವ ನಿಯಮಗಳು ಸಂಕ್ಷಿಪ್ತವಾಗಿದ್ದು ಇವುಗಳನ್ನು ಮಂತ್ರ ಮಾಂಗಲ್ಯ ಪುಸ್ತಕದಲ್ಲಿ ವಿವರವಾಗಿ ನೀಡಲಾಗಿದೆ).

ವಿವಾಹದ ಯಾವೊಂದು ಕಾರ್ಯಕ್ರಮವನ್ನು ಅದ್ದೂರಿಯಾಗಿ ನೆರವೇರಿಸಕೂಡದು.

ಯಾವ ರೂಪದಿಂದಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವರದಕ್ಷಿಣೆಯನ್ನಾಗಲಿ ವಧುದಕ್ಷಿಣೆಯನ್ನಾಗಲಿ ಯಾರು ಸ್ವೀಕರಿಸಬಾರದು.

ವರದಕ್ಷಿಣೆ ಸ್ವೀಕರಿಸುವ ದುಡ್ಡಿನ ದಲ್ಲಾಳಿ ವ್ಯವಹಾರದಲ್ಲಿ ಭಾಗಿಗಳಾಗುವ ಹಿರಿಯರು ಮಂತ್ರೋಪದೇಶಕ್ಕೂ, ಪ್ರತಿಜ್ಞಾವಿಧಿ ಉಪದೇಶಕ್ಕೂ, ವಧು-ವರರು ಮಂತ್ರೋಚ್ಚಾರಕ್ಕೂ, ಪ್ರತಿಜ್ಞೆ ತೆಗೆದುಕೊಳ್ಳಲೂ ಅನರ್ಹರಾಗಿರುತ್ತಾರೆ.

ಗಂಡಿನ ಕುಟುಂಬದವರು ಹಾಗೂ ಹೆಣ್ಣಿನ ಕುಟುಂಬದವರು ಎರಡೂ ಕಡೆಯಿಂದಲೂ ಒಟ್ಟು 200 ಜನರನ್ನು ಮೀರದಂತೆ ಆಹ್ವಾನಿಸಬೇಕು (ಕೊರೋನಾ ಸಂಧರ್ಭದಲ್ಲಿ ಸರ್ಕಾರ ಕೇವಲ 50 ಜನರಿಗೆ ಮಾತ್ರ ಅವಕಾಶ ನೀಡಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು).

ವಿವಾಹ ವೇದಿಕೆಯ ಮೇಲೆ ಎಲ್ಲರೆದುರು ವಧು-ವರರಿಗೆ ಉಡುಗೊರೆಗಳನ್ನು ಕೊಡುವುದು ನಿಷಿದ್ಧ. ವಿವಾಹವಾದ ನಂತರ ಯಾವಾಗ ಬೇಕಾದರೂ ಉಡುಗೊರೆಗಳನ್ನು ಕೊಡಬಹುದು.

ಯಾವುದೇ ವಾದ್ಯ ಓಲಗ ತಮಟೆ ಧ್ವನಿವರ್ಧಕ ಮುಂತಾದ ಪ್ರಚಾರ ಸಾಮಗ್ರಿಗಳನ್ನು ಬಳಸಬಾರದು.

ಮಂತ್ರಮಾಂಗಲ್ಯ ವಿವಾಹಕ್ಕೆ ರಾಹುಕಾಲ ಗುಳಿಕಕಾಲ ಯಮಗಂಡಕಾಲ ಯಾವುದೂ ಇಲ್ಲ. ಹಾಗಾಗಿ ಗುರು ಹಿರಿಯರು ಸೇರಿ ತಮ್ಮೆಲ್ಲರಿಗೂ ಅನುಕೂಲವಾದ ದಿನಾಂಕ ಮತ್ತು ಸಮಯವನ್ನು ನಿಗದಿ ಪಡಿಸಿಕೊಳ್ಳಬೇಕು.

ಜೋಯಿಸರಿಂದ ಜಾತಕ ನೋಡಿಸುವುದು ನಿಷಿದ್ಧ. ಯಾವ ವೃತ್ತಿ ಪುರೋಹಿತರಿಗೂ ಪ್ರವೇಶವಿಲ್ಲ. ಓದು ಬರಹ ಕಲಿತ ಮಂತ್ರಗಳನ್ನು ಓದಿ ಅರ್ಥಮಾಡಿಕೊಳ್ಳಬಲ್ಲ ವಧು ವರರ ತಂದೆತಾಯಿಗಳಾದ ಗುರುಹಿರಿಯರಲ್ಲಿ ಯಾರಾದರೊಬ್ಬರು ಮಂತ್ರಮಾಂಗಲ್ಯದ ಮಂತ್ರಗಳನ್ನು ಮತ್ತು ವಿವಾಹ ಸಂಹಿತೆಯನ್ನು ವಧುವರರಿಗೆ ಬೋಧಿಸಬಹುದು.

ವಧು-ವರರು ವೇದಿಕೆ ಮೇಲೆ ಇಟ್ಟಿರುವ ಮಹಾಪುರುಷರ ಫೋಟೋಗಳಿಗೂ, ತಂದೆ-ತಾಯಿಗಳಿಗೂ, ಅಲ್ಲಿ ನೆರೆದಿರುವ ಗುರುಹಿರಿಯರಿಗೂ, ಕೊನೆಯದಾಗಿ ವೇದಿಕೆ ಮೇಲೆ ಇಟ್ಟಿರುವ ಮಾಂಗಲ್ಯಕ್ಕೂ ನಮಸ್ಕರಿಸಿ ಮಾಂಗಲ್ಯ ಕಟ್ಟಬೇಕು.

ಇದು ಅತ್ಯಂತ ಸರಳವಾದ ವಿವಾಹ ಪದ್ಧತಿಯಾಗಿರುವುದರಿಂದ ಆಡಂಬರದ ಏರ್ಪಾಡು ಇರಕೂಡದು. ಸುಮಾರು 200 ಜನರು ಸೇರುವಂತ ಒಂದು ಸಣ್ಣ ಜಾಗವನ್ನು ಆರಿಸಿಕೊಂಡು ವೇದಿಕೆಯನ್ನು ಸರಳವಾಗಿ ಅಲಂಕರಿಸಬೇಕು.

ಪವಿತ್ರ ಸಮಾರಂಭಕ್ಕೆ ಆಧ್ಯಾತ್ಮಿಕ ಸಾಕ್ಷಿಗಳಾಗಿ ನಾಲ್ವರು ಮಹಾಪುರುಷರ ಫೋಟೋಗಳನ್ನು ಇಡಬೇಕು (ಸಾಮಾನ್ಯವಾಗಿ ಕುವೆಂಪು, ಪೂರ್ಣಚಂದ್ರ ತೇಜಸ್ವಿ, ಬಸವಣ್ಣ, ಅಂಬೇಡ್ಕರ್, ಬುದ್ಧ, ರಾಮಕೃಷ್ಣ ಪರಮಹಂಸರು, ವಿವೇಕಾನಂದ ಹೀಗೆ ಹಲವಾರು ಮಹಾಪುರುಷರ ಫೋಟೋಗಳನ್ನು ಇಡುವುದು ರೂಢಿಯಲ್ಲಿದೆ).

ವೇದಿಕೆಯ ಮೇಲೆ ವಧು-ವರರು, ಅವರ ತಂದೆ ತಾಯಿಗಳು ಮತ್ತು ಮಂತ್ರ ಬೋಧಿಸುವ ಹಿರಿಯರನ್ನು ಬಿಟ್ಟು ಬೇರಾರು ಇರಕೂಡದು.

ಹಿರಿಯರು ಬೋಧಿಸಿದ ಮಂತ್ರಮಾಂಗಲ್ಯದ ಪ್ರತಿಜ್ಞಾ ವಿಧಿಯನ್ನು ವಧು-ವರರು ಓದಿದ ನಂತರ ತಾಳಿ ಕಟ್ಟಬೇಕು. ತಪ್ಪದೇ ಪುಸ್ತಕದ ಕೊನೆಯಲ್ಲಿ ವಧು-ವರರು ಮತ್ತು ಸಾಕ್ಷಿಗಳು ಸಹಿ ಮಾಡಬೇಕು.

ಭಾರತದ ಸಂವಿಧಾನದಲ್ಲಿ ಖಚಿತಪಡಿಸಿರುವಂತೆ ಮದುವೆ ಆಗುತ್ತಿರುವ ವಧು-ವರರ ವಯಸ್ಸು ಇರಬೇಕು.

ವಧು-ವರರು ತಮ್ಮ ವಿವಾಹವನ್ನು ತಪ್ಪದೇ ಸಬ್ ರಿಜಿಸ್ಟ್ರಾರ್ ಆಫೀಸಿನಲ್ಲಿ ನೊಂದಾಯಿಸುವುದು ಕಡ್ಡಾಯ.ಮಂತ್ರ ಮಾಂಗಲ್ಯ ಸರಳ ವಿವಾಹ ಪದ್ಧತಿಯ ಮೂಲ ಆಶಯಕ್ಕೆ ಯಾವುದೇ ರೀತಿಯಿಂದಲೂ ಧಕ್ಕೆಯಾಗದಂತೆ ಮೇಲೆ ತಿಳಿಸಿರುವ ಏರ್ಪಾಡುಗಳಲ್ಲಿ ಅವಶ್ಯಕತೆ ಇದ್ದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಿಕೊಳ್ಳಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ