ಮಗುಚಿ ಬಿದ್ದ ಗ್ಯಾಸ್ ಟ್ಯಾಂಕರ್ | ಮಸೀದಿಯ ಧ್ವನಿ ವರ್ಧಕದಲ್ಲಿ ಜನರಿಗೆ ಎಚ್ಚರಿಕೆಯ ಸಂದೇಶ
02/02/2021
ಬಂಟ್ವಾಳ: ಗ್ಯಾಸ್ ತುಂಬಿದ್ದ ಟ್ಯಾಂಕರ್ ರಸ್ತೆಗೆ ಅಡ್ಡವಾಗಿ ಮಗುಚಿ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಸೂರಿಕುಮೇರು ಎಂಬಲ್ಲಿ ನಡೆದಿದೆ. ಅದೃಷ್ಟವಶಾತ್ ಗ್ಯಾಸ್ ಸೋರಿಕೆ ಆಗಿಲ್ಲ.
ರಾಷ್ಟ್ರೀಯ ಹೆದ್ದಾರಿ 75 ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆಗೆ ಅಡ್ಡವಾಗಿ ಮಗುಚಿ ಬಿದ್ದಿದೆ. ಕೆಲವೇ ವರ್ಷಗಳ ಹಿಂದೆ ನಡೆದ ಗ್ಯಾಸ್ ದುರಂತದ ಹಿನ್ನೆಲೆಯಲ್ಲಿ ಜನರು ಭೀತಿಗೊಳಗಾಗಿದ್ದರು. ಆದರೆ ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ.
ಘಟನೆ ಸಂಭವಿಸಿದ ವೇಳೆ ಇಲ್ಲಿನ ಸ್ಥಳೀಯ ಮಸೀದಿಯ ಧ್ವನಿವರ್ಧಕದ ಮೂಲಕ ಜನರಿಗೆ ಮಾಹಿತಿ ಹಾಗೂ ಎಚ್ಚರಿಕೆ ನೀಡಲಾಯಿತು. ಅನಿಲ ಸೋರಿಕೆಯ ಸಾಧ್ಯತೆ ಇರುವುದರಿಂದ ಯಾವುದೇ ಮನೆಯಲ್ಲಿ ಬೆಂಕಿ ಉರಿಸದಂತೆ ಮಸೀದಿಯ ಧ್ವನಿ ವರ್ಧಕದ ಮೂಲಕ ಜನರನ್ನು ಎಚ್ಚರಿಸಲಾಯಿತು.
ಮಂಗಳೂರಿನಿಂದ ಬರುವ ಎಲ್ಲ ವಾಹನಗಳನ್ನು ಕಲ್ಲಡ್ಕ ವಿಟ್ಲ ರಸ್ತೆಯ ಮೂಲಕ ಉಪ್ಪಿನಂಗಡಿಯಿಂದ ಆಗಮಿಸುವವರನ್ನು ಮಾಣಿ, ಬುಡೋಳಿ, ಕಬಕ ರಸ್ತೆಯ ಮೂಲಕ ಕಳುಹಿಸಲಾಗುತ್ತಿದೆ.


























