ಅನಾಥ ಶವಕ್ಕೆ ಹೆಗಲು ನೀಡಿ ಅಂತ್ಯಸಂಸ್ಕಾರ ನೆರವೇರಿಸಿ ಮಾದರಿಯಾದ ಮಹಿಳೆ ಎಸ್ ಐ
ಅಮರಾವತಿ: ಜನರು ಬದಲಾಗ ಬೇಕಾದರೆ, ಉನ್ನತ ಸ್ಥಾನದಲ್ಲಿರುವವರು ಬದಲಾಗಬೇಕು. ಜನರಿಗೆ ಅರಿವು ಮೂಡಿಸಲು ಕೇವಲ ಭಾಷಣ ಮಾಡುವವರನ್ನು ನೋಡಿದ್ದೇವೆ. ಆದರೆ, ಇಲ್ಲೊಬ್ಬರು ಎಸ್ ಐ ಅನಾಥ ಶವವೊಂದನ್ನು ಸುಮಾರು 2 ಕಿ.ಮೀ.ವರೆಗೆ ತಮ್ಮ ಹೆಗಲಲ್ಲಿ ಹೊತ್ತು, ಅಂತ್ಯ ಸಂಸ್ಕಾರ ನಡೆಸುವ ಮೂಲಕ ಮಾದರಿಯಾಗಿದ್ದಾರೆ.
ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಗ್ರಾಮವೊಂದಲ್ಲಿ ಈ ಘಟನೆ ನಡೆದಿದೆ. ಕಾನಿಗುಬ್ಬ ಠಾಣೆಯ ಮಹಿಳಾ ಎಸ್ ಐ ಶಿರೀಶಾ ಈ ಮಾದರಿ ಅಧಿಕಾರಿಯಾಗಿದ್ದಾರೆ. ಶವವನ್ನು ತಮ್ಮ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಅವರು ಅಂತ್ಯ ಸಂಸ್ಕಾರ ಮಾಡಿರುವ ವಿಡಿಯೋವನ್ನು ಸ್ಥಳೀಯರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಇಲ್ಲಿನ ಅವಿತ್ತೂರು ಎಂಬ ಗ್ರಾಮದ ಜಮೀನಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿತ್ತು. ಆದರೆ, ಈ ಶವಕ್ಕೆ ಹೆಗಲು ಕೊಡಲು ಸ್ಥಳೀಯರು ಯಾರೂ ಮುಂದಾಗದೇ ಇದ್ದಾಗ, ಶಿರೀಶಾ ಅವರು, ಮೃತದೇಹಕ್ಕೆ ಹೆಗಲು ಕೊಡಲು ಮುಂದಾಗಿದ್ದಾರೆ. ಇವರ ಕಾರ್ಯವನ್ನು ನೋಡಿ ಸ್ಥಳೀಯರು ನೆರವು ಮಾಡಿದ್ದು, ಇನ್ನೊಂದು ಬದಿಯಿಂದ ಸ್ಥಳೀಯ ವ್ಯಕ್ತಿಗಳು ಹೆಗಲು ನೀಡಿದ್ದಾರೆ.
ಶವವನ್ನು ಹೊತ್ತು ಸುಮಾರು 2 ಕಿ.ಮೀ.ವರೆ ದೂರ ಇರುವ ಸ್ಮಶಾನಕ್ಕೆ ಶಿರೀಶಾ ನಡೆದಿದ್ದಾರೆ.ಇವರ ಕಾರ್ಯಕ್ಕೆ ಸಾರ್ವಜನಿಕರಿಂದ ಭಾರೀ ಪ್ರಸಂಶೆ ವ್ಯಕ್ತವಾಗಿದೆ. ಅಧಿಕಾರಿಗಳು ಬದಲಾದರೆ ಜನರೂ ಬದಲಾಗುತ್ತಾರೆ ಎನ್ನುವುದಕ್ಕೆ ಇದೊಂದು ಉತ್ತಮ ನಿದರ್ಶನವಾಗಿದೆ.