"ಕುಡ್ಲ ಪೆಲಕಾಯಿ ಪರ್ಬ-2026"ಕ್ಕೆ ಚಾಲನೆ: ಹಲಸಿನ ಖಾದ್ಯಗಳ ಜಗತ್ತಿಗೆ ಸಿಟಿ ಮಂದಿ ಫಿದಾ! - Mahanayaka

“ಕುಡ್ಲ ಪೆಲಕಾಯಿ ಪರ್ಬ–2026″ಕ್ಕೆ ಚಾಲನೆ: ಹಲಸಿನ ಖಾದ್ಯಗಳ ಜಗತ್ತಿಗೆ ಸಿಟಿ ಮಂದಿ ಫಿದಾ!

pelakai parba
13/06/2026

ಮಂಗಳೂರು: ಹನಿ ಜೀನಿಕ್ಸ್ ವತಿಯಿಂದ ನಗರದ ಬೆಂದೂರ್ ವೆಲ್‌ ನ ಸೈಂಟ್ ಸೆಬಾಸ್ಟಿಯನ್ ಪ್ಲಾಟಿನಂ ಜುಬಿಲಿ ಆಡಿಟೋರಿಯಂನಲ್ಲಿ ಆಯೋಜಿಸಲಾದ ಮೂರು ದಿನಗಳ “ಕುಡ್ಲ ಪೆಲಕಾಯಿ ಪರ್ಬ–2026″ಕ್ಕೆ ಜೂನ್ 12ರ ಶುಕ್ರವಾರದಂದು ಅದ್ಧೂರಿ ಚಾಲನೆ ದೊರೆಯಿತು.

ಮೇಳದ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರಾದ ಪುಷ್ಪರಾಜ್ ಬಿ.ಎನ್. ಅವರು, “ನಗರದ ಜನತೆಗೆ ವಿವಿಧ ಬಗೆಯ ಹಲಸಿನ ಖಾದ್ಯಗಳನ್ನು ಒಂದೇ ಸೂರಿನಡಿ ಸವಿಯಲು ಈ ಮೇಳ ಉತ್ತಮ ಅವಕಾಶ ಕಲ್ಪಿಸಿದೆ. ರೈತರೇ ನೇರವಾಗಿ ತಾವೇ ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ಇಂತಹ ಪ್ರದರ್ಶನಗಳು ಅತ್ಯಂತ ಸಹಕಾರಿಯಾಗಿದೆ” ಎಂದು ಆಶಯ ವ್ಯಕ್ತಪಡಿಸಿದರು.

ಕುಡ್ಲ ಪೇಲಕಾಯಿ ಪರ್ಬದ ಸಂಯೋಜಕರಾದ ಅಶ್ವಿನ್ ಸಿಕ್ವೇರ ಬರಿಮಾರು ಮಾತನಾಡಿ, “ಹಲಸು ಬೆಳೆಗಾರ ರೈತರಿಗೆ ಮಧ್ಯವರ್ತಿಗಳ ಕಾಟವಿಲ್ಲದೆ ನೇರ ಮಾರುಕಟ್ಟೆ ಹಾಗೂ ಉತ್ತಮ ಮಾರಾಟದ ಅವಕಾಶವನ್ನು ಒದಗಿಸುವುದು ಈ ಹಬ್ಬದ ಪ್ರಮುಖ ಉದ್ದೇಶವಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ವಿಶಿಷ್ಟ ಹಾಗೂ ವಿವಿಧ ತಳಿಯ ಹಲಸಿನ ಹಣ್ಣುಗಳು ಇಲ್ಲಿ ಮಾರಾಟಕ್ಕೆ ಲಭ್ಯವಿವೆ” ಎಂದು ಮಾಹಿತಿ ನೀಡಿದರು.

80ಕ್ಕೂ ಹೆಚ್ಚು ಮಳಿಗೆಗಳು: ಹಲಸಿನ ಹಣ್ಣುಗಳ ಜತೆಗೆ ಹಲಸಿನಿಂದ ತಯಾರಿಸಿದ ವೈವಿಧ್ಯಮಯ ಆಹಾರ ಪದಾರ್ಥಗಳು, ಮೌಲ್ಯವರ್ಧಿತ ಉತ್ಪನ್ನಗಳು ಹಾಗೂ ವಿವಿಧ ತಳಿಯ ಹಲಸಿನ ಗಿಡಗಳ ಪ್ರದರ್ಶನ ಮತ್ತು ಮಾರಾಟವಿದೆ.  ದಕ್ಷಿಣ ಕನ್ನಡ, ತುಮಕೂರು, ಚಿಕ್ಕಬಳ್ಳಾಪುರ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳ ರೈತರು ತಮ್ಮ ಉತ್ಪನ್ನಗಳೊಂದಿಗೆ ಮೇಳದಲ್ಲಿ ಭಾಗವಹಿಸಿದ್ದಾರೆ. ಕೊಡಗಿನ ಪ್ರಸಿದ್ಧ ಬೆಣ್ಣೆ ಹಣ್ಣು (ಅವಕಾಡೊ) ಹಾಗೂ ರಾಮನಗರ ಜಿಲ್ಲೆಯ ರಾಸಾಯನಿಕ ಮುಕ್ತ ಮಾವಿನ ಹಣ್ಣುಗಳು ಗ್ರಾಹಕರ ಆಕರ್ಷಣೆಯಾಗಿವೆ.

ಕರಾವಳಿ ಭಾಗದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಬೆಳೆಯಲಾಗುವ ರಂಬುಟಾನ್, ಡ್ರ್ಯಾಗನ್ ಫ್ರೂಟ್, ಪುಲಾಸಾನ್, ಮ್ಯಾಂಗೋಸ್ಟಿನ್ ಸೇರಿದಂತೆ ಹಲವು ವಿಲಕ್ಷಣ ಹಣ್ಣುಗಳ ಪ್ರದರ್ಶನ ಮತ್ತು ಮಾರಾಟವೂ ಇಲ್ಲಿದೆ.  ಜೂನ್ 12ರಿಂದ ಆರಂಭವಾಗಿರುವ ಈ ಹಲಸು ಹಬ್ಬವು ಮೂರು ದಿನಗಳ ಕಾಲ ಬೆಳಗ್ಗೆ 9.30ರಿಂದ ರಾತ್ರಿ 8.30ರವರೆಗೆ ಸಾರ್ವಜನಿಕರಿಗೆ ಮುಕ್ತವಾಗಿರುತ್ತದೆ.

ಈ ಉದ್ಘಾಟನಾ ಸಮಾರಂಭದಲ್ಲಿ ಪತ್ರಕರ್ತರ ಸಂಘದ ಭಾಸ್ಕರ್ ರೈ ಕಟ್ಟ, ಅನಿವಾಸಿ ಉದ್ಯಮಿ ಜೇಮ್ಸ್ ಮೆಂಡೋನ್ಸಾ, ಉದ್ಯಮಿ ರೋಹನ್ ವಾಮಂಜೂರು, ಬೆಂದೂರು ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ದೀಪಕ್, ಕಾರ್ಯದರ್ಶಿ ರಾಯ್ಸ್ ಟನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಶೆಲ್ಡನ್ ಕ್ರಾಸ್ತಾ ಕಾರ್ಯಕ್ರಮವನ್ನು ಸ್ವಾಗತಿಸಿ, ನಿರೂಪಿಸಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ