E20 ಟ್ರೋಲ್ ಕಾಟ: ಮೆಟಾ, X ಮತ್ತು ಗೂಗಲ್ ವಿರುದ್ಧ ಹೈಕೋರ್ಟ್ ಮೊರೆ ಹೋದ ನಿತಿನ್ ಗಡ್ಕರಿ!
ಮುಂಬೈ: E20 ಎಥನಾಲ್ ಮಿಶ್ರಿತ ಪೆಟ್ರೋಲ್ ಯೋಜನೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ಸುಳ್ಳು ಹಾಗೂ ನಿಂದನಾತ್ಮಕ ಎಐ (AI) ಆಧಾರಿತ ‘ಡೀಪ್ ಫೇಕ್’ (Deepfake) ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ ಎಂದು ಆರೋಪಿಸಿ, ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಮೆಟಾ (Meta Platforms), ‘X’ (ಟ್ವಿಟರ್) ಹಾಗೂ ಗೂಗಲ್ (Google) ಸಂಸ್ಥೆಗಳ ವಿರುದ್ಧ ಸಿವಿಲ್ ದಾವೆ (Lawsuit) ಹೂಡಲು ಮುಂಬೈ ಹೈಕೋರ್ಟ್ ಸೋಮವಾರ ಅನುಮತಿ ನೀಡಿದೆ.
ಸಚಿವ ನಿತಿನ್ ಗಡ್ಕರಿ ಮತ್ತು ಅವರ ಕುಟುಂಬವು ಎಥನಾಲ್ ಮಿಶ್ರಿತ ಇಂಧನ ಯೋಜನೆಯಿಂದ ವೈಯಕ್ತಿಕವಾಗಿ ಆರ್ಥಿಕ ಲಾಭ ಗಳಿಸುತ್ತಿದೆ ಎಂದು ಬಿಂಬಿಸುವ ಸುಳ್ಳು ಹಾಗೂ ತಿದ್ದಲಾದ (manipulated) ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿತ್ತು.
ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಸ್ಪಷ್ಟಪಡಿಸಿರುವ ಗಡ್ಕರಿ, ಎಥನಾಲ್ ಮಿಶ್ರಿತ ಪೆಟ್ರೋಲ್ (EBP) ಮತ್ತು E20 ಕಾರ್ಯಕ್ರಮವು ಸಂಪೂರ್ಣವಾಗಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (Ministry of Petroleum and Natural Gas) ವ್ಯಾಪ್ತಿಗೆ ಒಳಪಟ್ಟಿರುತ್ತದೆ. ಈ ಯೋಜನೆಯಲ್ಲಿ ತಮ್ಮ ಯಾವುದೇ ರೀತಿಯ ಪಾತ್ರವಿಲ್ಲ ಎಂದು ತಿಳಿಸಿದ್ದಾರೆ.
ತಮ್ಮ ಅನುಮತಿಯಿಲ್ಲದೆ ಎಐ ತಂತ್ರಜ್ಞಾನ ಬಳಸಿ ಡೀಪ್ ಫೇಕ್ ವಿಡಿಯೋಗಳನ್ನು ತಯಾರಿಸಿ ಪ್ರಸಾರ ಮಾಡಲಾಗುತ್ತಿದ್ದು, ಇದು ತಮ್ಮ ಗೌರವಕ್ಕೆ ಧಕ್ಕೆ ತಂದಿದೆ ಹಾಗೂ ಹಕ್ಕುಗಳ ನೇರ ಉಲ್ಲಂಘನೆಯಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವಂತಹ ಮತ್ತು ತೇಜೋವಧೆ ಮಾಡುವಂತಹ ಇಂತಹ ಎಲ್ಲಾ ಡೀಪ್ಫೇಕ್ ವಿಷಯಗಳನ್ನು ಡಿಜಿಟಲ್ ಪ್ಲಾಟ್ ಫಾರ್ಮ್ ಗಳಿಂದ ತಕ್ಷಣವೇ ತೆರವುಗೊಳಿಸಲು (remove) ಹಾಗೂ ಮುಂದಿನ ಹಂಚಿಕೆಯನ್ನು ತಡೆಯಲು ಗಡ್ಕರಿ ಕೋರಿದ್ದಾರೆ.
“ಈ ದಾವೆಯ ಮುಖ್ಯ ಉದ್ದೇಶ ಸರ್ಕಾರದ ನೀತಿಗಳು ಅಥವಾ ನನ್ನ ನಿರ್ಧಾರಗಳ ಮೇಲಿನ ಸಾರ್ವಜನಿಕ ಚರ್ಚೆ, ವಿಮರ್ಶೆ ಅಥವಾ ಸಂವಾದವನ್ನು ತಡೆಯುವುದಲ್ಲ. ಆದರೆ ದುರುದ್ದೇಶಪೂರ್ವಕವಾಗಿ ಎಐ ತಂತ್ರಜ್ಞಾನ ಬಳಸಿ ಸುಳ್ಳು ಮಾಹಿತಿ ಮತ್ತು ನಿಂದನಾತ್ಮಕ ವಿಡಿಯೋಗಳನ್ನು ಹರಡುವುದನ್ನು ತಡೆಯುವುದಾಗಿದೆ,” ಎಂದು ಗಡ್ಕರಿ ತಮ್ಮ ಅರ್ಜಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ತಡೆಯಾಜ್ಞೆ ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಶೀಘ್ರದಲ್ಲೇ ಕೈಗೆತ್ತಿಕೊಳ್ಳಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























