100ಕ್ಕೂ ಅಧಿಕ ಮಹಿಳೆಯರ ಮೇಲೆ ವೈದ್ಯನಿಂದ ಅತ್ಯಾಚಾರ: ಬ್ಲ್ಯಾಕ್ ಮೇಲ್ ಆರೋಪದಲ್ಲಿ ನರ್ಸ್ ಬಂಧನ!
ಜೈಪುರ/ಬಾರ್ಮೇರ್: ಖ್ಯಾತ ವೈದ್ಯರೊಬ್ಬರಿಂದ ಸುಮಾರು 2 ಕೋಟಿ ರೂಪಾಯಿ ಬ್ಲ್ಯಾಕ್ ಮೇಲ್ ಮಾಡಿ ಸುಲಿಗೆ ಮಾಡಿದ ಆರೋಪದ ಮೇಲೆ ನರ್ಸ್ ಒಬ್ಬರನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಆದರೆ, ಬಂಧನದ ಬೆನ್ನಲ್ಲೇ ಈ ನರ್ಸ್ ವೈದ್ಯನ ವಿರುದ್ಧ ಆಘಾತಕಾರಿ ಆರೋಪಗಳನ್ನು ಮಾಡಿದ್ದು, ಪ್ರಕರಣವು ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದೆ.
ಬಂಧಿತ ನರ್ಸ್ ಕಮಲಾ, ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಮೊದಲು ವೀಡಿಯೊ ಸಂದೇಶವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ, ತಮ್ಮ ಮೇಲಿನ ಸುಲಿಗೆ ಪ್ರಕರಣ ಸಂಪೂರ್ಣ ಸುಳ್ಳು ಹಾಗೂ ವೈದ್ಯರ ಅಕ್ರಮಗಳನ್ನು ಮುಚ್ಚಿಹಾಕಲು ತಮ್ಮನ್ನು ಸಿಲುಕಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ.
“ಈ ವೈದ್ಯ ಕಳೆದ ಹಲವು ವರ್ಷಗಳಿಂದ 100ಕ್ಕೂ ಹೆಚ್ಚು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ/ಅತ್ಯಾಚಾರ ನಡೆಸಿದ್ದಾರೆ. ಈ ಹಿಂದೆ ಹಲವು ಮಹಿಳೆಯರು ದೂರು ನೀಡಲು ಮುಂದಾಗಿದ್ದರೂ, ಹಣ ನೀಡಿ ಪ್ರಕರಣಗಳನ್ನು ಮುಚ್ಚಿಹಾಕಲಾಗಿತ್ತು. ಆಸ್ಪತ್ರೆಯ ಇಬ್ಬರು ಉದ್ಯೋಗಿಗಳು ವೈದ್ಯನಿಗೆ ಸಾಥ್ ನೀಡುತ್ತಿದ್ದಾರೆ. ನನ್ನ ಬಳಿ ಇರುವ ಸಾಕ್ಷ್ಯಗಳು ಹೊರಬರದಂತೆ ತಡೆಯಲು ನನ್ನ ಮೇಲೆ ಸುಳ್ಳು ದೂರು ನೀಡಲಾಗಿದೆ” ಎಂದು ನರ್ಸ್ ವೀಡಿಯೊದಲ್ಲಿ ಆರೋಪಿಸಿದ್ದಾರೆ.
65 ವರ್ಷದ ಹಿರಿಯ ವೈದ್ಯ ನೀಡಿದ ದೂರಿನ ಪ್ರಕಾರ, 2016 ರಿಂದ ಆಸ್ಪತ್ರೆಯಲ್ಲಿ ನೈಟ್ ಶಿಫ್ಟ್ ನಲ್ಲಿ ಕೆಲಸ ಮಾಡುತ್ತಿದ್ದ ನರ್ಸ್, ವೈದ್ಯರ ಕೋಣೆಗೆ ತೆರಳಿ ಅವರ ಮೊಬೈಲ್ ನಿಂದ ಖಾಸಗಿ ಚಿತ್ರಗಳನ್ನು ತನ್ನ ಫೋನ್ ಗೆ ವರ್ಗಾಯಿಸಿಕೊಂಡಿದ್ದಳು. ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದಾಗಿ ಹಾಗೂ ಸುಳ್ಳು ಅತ್ಯಾಚಾರ ಪ್ರಕರಣ ದಾಖಲಿಸುವುದಾಗಿ ಬೆದರಿಸಿ ಸುಮಾರು ₹2 ಕೋಟಿಗೂ ಹೆಚ್ಚು ಹಣವನ್ನು ಸುಲಿಗೆ ಮಾಡಿದ್ದಾಳೆ. ₹35 ಲಕ್ಷ ಬ್ಯಾಂಕ್ ಖಾತೆಗಳ ಮೂಲಕ ಜಮಾ ಆಗಿದ್ದು, ನರ್ಸ್ನ ಬ್ಯಾಂಕ್ ಲಾಕರ್ ನಲ್ಲಿ ಸಹಿ ಮಾಡಿದ ಖಾಲಿ ಚೆಕ್ ಗಳು ಮತ್ತು ಸ್ಟಾಂಪ್ ಪೇಪರ್ ಗಳನ್ನು ಇರಿಸಿಕೊಳ್ಳಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಡಿಜಿಟಲ್ ಸಾಕ್ಷ್ಯಾಧಾರಗಳು ಹಾಗೂ ಬ್ಯಾಂಕ್ ವಹಿವಾಟುಗಳ ಆಧಾರದ ಮೇಲೆ ಪೊಲೀಸರು ನರ್ಸ್ ಕಮಲಾ ಅವರನ್ನು ಬಂಧಿಸಿದ್ದು, ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆರೋಪಿ ನರ್ಸ್ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎಂದು ತಿಳಿಸಿರುವ ಪೊಲೀಸರು, ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























