ಉದ್ಘಾಟನೆಯಾದ 12 ದಿನದಲ್ಲೇ 4,200 ಕೋಟಿ ರೂ. ವೆಚ್ಚದ ಎಕ್ಸ್‌ ಪ್ರೆಸ್‌ ವೇ ಬಿರುಕು! - Mahanayaka

ಉದ್ಘಾಟನೆಯಾದ 12 ದಿನದಲ್ಲೇ 4,200 ಕೋಟಿ ರೂ. ವೆಚ್ಚದ ಎಕ್ಸ್‌ ಪ್ರೆಸ್‌ ವೇ ಬಿರುಕು!

4,200 crore expressway unnao up
27/07/2026

ಉನ್ನಾವ್ (ಉತ್ತರ ಪ್ರದೇಶ):  ಉತ್ತರ ಪ್ರದೇಶದಲ್ಲಿ ಇತ್ತೀಚಿಗಷ್ಟೇ ವಿಜೃಂಭಣೆಯಿಂದ ಉದ್ಘಾಟನೆಗೊಂಡಿದ್ದ ಲಖನೌ-ಕಾನ್‌ಪುರ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ (Lucknow-Kanpur Expressway) ಮಳೆಗೆ ಬಿರುಕು ಬಿಟ್ಟಿದ್ದು, ಕಳಪೆ ಕಾಮಗಾರಿಯ ಕುರಿತು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜುಲೈ 13 ರಂದುಷ್ಟೇ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಿದ್ದ ಈ ಹೆದ್ದಾರಿ, ಉದ್ಘಾಟನೆಗೊಂಡ ಕೇವಲ 12 ದಿನಗಳಲ್ಲಿ ಕುಸಿದುಬಿದ್ದಿದೆ.

₹4,200 ಕೋಟಿ ವೆಚ್ಚದಲ್ಲಿ ‘ಲಖನೌ-ಕಾನ್‌ಪುರ ಗ್ರೀನ್‌ಫೀಲ್ಡ್ ರಾಷ್ಟ್ರೀಯ ಎಲಿವೇಟೆಡ್ ಎಕ್ಸ್‌ಪ್ರೆಸ್‌ವೇ’ ನಿರ್ಮಿಸಲಾಗಿತ್ತು.  ಜುಲೈ 13 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಜಂಟಿಯಾಗಿ ಈ ಯೋಜನೆಯನ್ನು ಉದ್ಘಾಟಿಸಿದ್ದರು.

ಜುಲೈ 25 ರಂದು ಸುರಿದ ಭಾರಿ ಮಳೆಯಿಂದಾಗಿ ಉನ್ನಾವ್ ಜಿಲ್ಲೆಯ ಕೊರಾರಿ (Korari) ಗ್ರಾಮದ ಬಳಿ ಎಕ್ಸ್‌ಪ್ರೆಸ್‌ವೇಯ ಸುಮಾರು 5 ರಿಂದ 7 ಮೀಟರ್‌ ಗಳಷ್ಟು ಉದ್ದದ ರಸ್ತೆ ಭಾಗ ಕುಸಿದು ದೊಡ್ಡ ಬಿರುಕುಗಳು ಕಾಣಿಸಿಕೊಂಡಿವೆ.

ಸಮಾಜವಾದಿ ಪಕ್ಷದ ಮುಖಂಡ ಮಧುಸೂದನ್ ಯಾದವ್ ಅವರು ಈ ರಸ್ತೆಯಲ್ಲಿ ಪ್ರಯಾಣಿಸುವಾಗ ಬಿರುಕು ಬಿಟ್ಟ ಸ್ಥಳದ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  “ಇಷ್ಟೊಂದು ಭಾರಿ ವೆಚ್ಚದ ಯೋಜನೆಯಲ್ಲಿ ಕೇವಲ ಒಂದು ಮಳೆಗೆ ರಸ್ತೆ ಈ ರೀತಿ ಕುಸಿಯುತ್ತಿರುವುದು ಕಾಮಗಾರಿಯ ಕಳಪೆ ಗುಣಮಟ್ಟ ಮತ್ತು ಭ್ರಷ್ಟಾಚಾರವನ್ನು ಎತ್ತಿ ತೋರಿಸುತ್ತದೆ” ಎಂದು ಅವರು ಆರೋಪಿಸಿದ್ದಾರೆ.

ವಿಡಿಯೋ ವೈರಲ್ ಆಗಿ ಸಾರ್ವಜನಿಕರು ಹಾಗೂ ವಿಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಹಾಗೂ ಸ್ಥಳೀಯ ಅಧಿಕಾರಿಗಳು ತಕ್ಷಣವೇ ರಸ್ತೆ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ