ಮಹಿಷಾ ದಸರಾ: ಮೈಸೂರಿನಲ್ಲಿ ಭೀಮ ಘರ್ಜನೆ | ಸಂಸದ ಪ್ರತಾಪ್ ಸಿಂಹ ಅವಾಜ್ ಗೆ ಬೆವರಿದ ಕಾಂಗ್ರೆಸ್ ಸರ್ಕಾರ!

ಮೈಸೂರು: ಮಹಿಷಾಮಂಡಲದ ರಾಜ, ಮೂಲನಿವಾಸಿ ಮಹಿಷಾಸುರ ರಾಕ್ಷಸನಲ್ಲ, ನಮ್ಮ ದೊರೆ ಎಂಬ ಕೂಗು ಮೈಸೂರಿನಾದ್ಯಂತ ಇಂದು ಪ್ರತಿಧ್ವನಿಸಿದೆ. ಇಲ್ಲಿನ ಪುರಭವನದ ಆವರಣದಲ್ಲಿ ಮಹಿಷ ದಸರಾ ಕಾರ್ಯಕ್ರಮ ಇಂದು ಪೊಲೀಸ್ ಭದ್ರತೆಯಲ್ಲಿ ನಡೆಯುತ್ತಿದೆ. ಮೈಸೂರಿನಲ್ಲಿ ಜೈ ಭೀಮ್ “ಭೀಮಘರ್ಜನೆ” ಮೊಳಗಿದೆ.
ಮಹಿಷ ದಸರ ಆಚರಣೆಗೆ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ವಿರೋಧದಿಂದಾಗಿ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪ್ರತಾಪ್ ಸಿಂಹ ಅವರ ಎಚ್ಚರಿಕೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸರ್ಕಾರ ಚಾಮುಂಡಿ ಬೆಟ್ಟದಲ್ಲಿರುವ ಮಹಿಷ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹಾಗೂ ಮೆರವಣಿಗೆ ನಡೆಸಲು ಅವಕಾಶ ನೀಡಿಲ್ಲ ಎಂಬ ಆಕ್ರೋಶ ಕೂಡ ಕೇಳಿ ಬಂದಿದೆ. ಚಾಮುಂಡಿಬೆಟ್ಟ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಪುರಭವನದಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಜನರು ತಂಡೋಪತಂಡವಾಗಿ ಬರುತ್ತಿದ್ದಾರೆ. ನೀಲಿಪಟ್ಟಿ ಧರಿಸಿಕೊಂಡು ಬರುತ್ತಿರುವ ಮೂಲನಿವಾಸಿಗಳು ಜೈಭೀಮ್ ಘೋಷಣೆ ಮೊಳಗಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಇದ್ದರೂ ದಲಿತರ ಆಚರಣೆಗೆ ಅಡ್ಡಿ:
ರಾಜ್ಯ ವಿಧಾನ ಸಭಾ ಚುನಾವಣೆಗೂ ಮೊದಲು ದಲಿತರ ಹಕ್ಕುಗಳನ್ನ ರಕ್ಷಣೆ ಮಾಡುತ್ತೇವೆ ಎಂದು ದಲಿತರ ಮತ ಪಡೆದಿದ್ದ ಕಾಂಗ್ರೆಸ್ ಸರ್ಕಾರ, ಸಂಸದ ಪ್ರತಾಪ್ ಸಿಂಹ ಅವರ ವೈಯಕ್ತಿಕ ವಿರೋಧಕ್ಕೆ ಹೆದರಿ ಹೋರಾಟಗಾರರಿಗೆ ಮೂಲನಿವಾಸಿ ಮಹಿಷನ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಅವಕಾಶ ನೀಡಿಲ್ಲ. ದಲಿತ ಗೃಹ ಸಚಿವರೇ ಇದ್ದರೂ, ದಲಿತರ ಆಚರಣೆಗೆ ಅಡ್ಡಿ ಉಂಟಾಗಿದೆ ಎನ್ನುವ ಆಕ್ರೋಶಗಳೂ ಕೇಳಿ ಬಂದಿವೆ.