ಮಳಲಿ ಕುರಿತ ತೀರ್ಪು: ಹಿಂದೂಗಳ ಭಾವನೆಗೆ ಸಂದಿರುವ ಜಯ: ಶರಣ್ ಪಂಪ್ ವೆಲ್
ಮಳಲಿ ಮಸೀದಿ ಕುರಿತು ಮಂಗಳೂರು ಜಿಲ್ಲಾ ಮೂರನೇ ಹೆಚ್ಚುವರಿ ನ್ಯಾಯಾಲಯ ನೀಡಿರುವ ತೀರ್ಪನ್ನು ವಿಎಚ್ ಪಿ ಸ್ವಾಗತಿಸುತ್ತದೆ. ಇದು ಹಿಂದೂಗಳ ಭಾವನೆಗೆ ಸಂದಿರುವ ಮೊದಲನೇ ಹಂತದ ಜಯ. ಈ ಮೂಲಕ ನಾವು ಮಂದಿರವಿರುವ ಸ್ಥಳದಲ್ಲಿಯೇ ಭವ್ಯವಾದ ಮಂದಿರ ನಿರ್ಮಾಣವನ್ನು ಮಾಡಲಿದ್ದೇವೆ ಎಂದು ವಿಎಚ್ ಪಿ ಪ್ರಾಂತೀಯ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಹೇಳಿದರು.
ಮಂಗಳೂರು ನಗರದ ಕದ್ರಿಯ ವಿಶ್ವಶ್ರೀ ಸಭಾಂಗಣದಲ್ಲಿ ಮಾತನಾಡಿದ ಅವರು, ಇಂದು ನ್ಯಾಯಾಲಯ ಮಸೀದಿ ಆಡಳಿತ ಕಮಿಟಿಯ ಅರ್ಜಿಯನ್ನು ವಜಾ ಮಾಡಿ ವಿಎಚ್ ಪಿ ಅರ್ಜಿಯನ್ನು ಎತ್ತಿ ಹಿಡಿದಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ಸಂಪೂರ್ಣವಾಗಿ ಹಿಂದೂಗಳ ಪರ ತೀರ್ಪು ನೀಡಲಿದೆ. ಮಸೀದಿಯ ಕಮಿಟಿಯನ್ನು ಆಗ್ರಹಿಸಿಯೋ, ವಿನಂತಿಸಿಯೋ ಹೋರಾಟದಲ್ಲಿ ಸಂಘರ್ಷವಿಲ್ಲದಂತೆ ಅವರೊಡನೆ ಚರ್ಚಿಸಿ ಇತ್ಯರ್ಥ ಮಾಡಲು ಚಿಂತಿಸಿದ್ದೇವೆ ಎಂದರು.
ಮಸೀದಿ ಇರುವ ಸ್ಥಳದಲ್ಲಿ ದೇವಸ್ಥಾನದ ಕುರುಹು ಇದ್ದ ಕಾರಣಕ್ಕೆ ಮಸೀದಿಯ ನವೀಕರಣಕ್ಕೆ ತಡೆ ತಂದಿದ್ದೆವು. ಅಲ್ಲಿ 800 ವರ್ಷಗಳ ಹಿಂದೆ ಅಲ್ಲಿ ದೇವಾಲಯ ಇತ್ತು ಎಂಬ ನಂಬಿಕೆ ಇದೆ. ತಾಂಬೂಲ ಪ್ರಶ್ನೆಯಲ್ಲೂ ಅದು ಗೋಚರಿಸಿತ್ತು. ಮುಂದಿನ ದಿನಗಳಲ್ಲಿ ಅಷ್ಟಮಂಗಲ ಪ್ರಶ್ನೆ ಇಟ್ಟು ಮುಂದಿನ ನಿರ್ಧಾರ ಮಾಡುತ್ತೇವೆ ಎಂದರು.
ವಿವಾದಿತ ಸ್ಥಳವನ್ನು ಪುರಾತತ್ವ ಇಲಾಖೆಯಿಂದ ಸರ್ವೆ ನಡೆಸಲು ಸಾಕಷ್ಟು ಬಾರಿ ಜಿಲ್ಲಾಡಳಿತವನ್ನು ಕೋರಿದ್ದೆವು. ಆದರೆ ಈವರೆಗೆ ನಮಗೆ ಯಾವ ಸ್ಪಂದನೆಯೂ ದೊರಕಿಲ್ಲ. ಆದ್ದರಿಂದ ನೂತನ ಜಿಲ್ಲಾಧಿಕಾರಿಯವರು ಈ ಬಗ್ಗೆ ತಕ್ಷಣ ಪುರಾತತ್ವ ಇಲಾಖೆಯಿಂದ ಸರ್ವೆ ಮಾಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಶರಣ್ ಪಂಪ್ ವೆಲ್ ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GoQnwP3qNkmAbAPcjb8n8F
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka