ಇಸ್ರೇಲ್ ನಲ್ಲಿ ಕ್ಷಿಪಣಿ ದಾಳಿಗೆ ಬಲಿಯಾದ ಕೇರಳದ ವ್ಯಕ್ತಿ: ಇಬ್ಬರು ಕೇರಳ ಮೂಲದ ವ್ಯಕ್ತಿಗಳಿಗೆ ಗಾಯ - Mahanayaka

ಇಸ್ರೇಲ್ ನಲ್ಲಿ ಕ್ಷಿಪಣಿ ದಾಳಿಗೆ ಬಲಿಯಾದ ಕೇರಳದ ವ್ಯಕ್ತಿ: ಇಬ್ಬರು ಕೇರಳ ಮೂಲದ ವ್ಯಕ್ತಿಗಳಿಗೆ ಗಾಯ

maxwel
05/03/2024


Provided by

ಜೆರುಸೆಲಂ: ಲೆಬನಾನ್ ನಿಂದ ಉಡಾಯಿಸ್ಪಟ್ಟ ಕ್ಷಿಪಣಿ ಸೋಮವಾರ ಇಸ್ರೇಲ್ನ ಉತ್ತರದ ಗಡಿ ಮಾರ್ಗಲಿಯಟ್ ಬಳಿಯ ಹಣ್ಣಿನ ತೋಟಕ್ಕೆ ಅಪ್ಪಳಿಸಿದ ಪರಿಣಾಮ ಕೇರಳ ಮೂಲದ ವ್ಯಕ್ತಿಯೊಬ್ಬರು ಮೃತಪಟ್ಟು ಮತ್ತು ಇಬ್ಬರು ಕೇರಳೀಯರು ಸೇರಿ ಏಳು ಜನ ಗಾಯಗೊಂಡಿದ್ದಾರೆ.

ಮೃತನನ್ನು ಕೇರಳದ ಕೊಲ್ಲಂ ಮೂಲದ ಪಟ್ನಿಬಿನ್ ಮ್ಯಾಕ್ಸ್’ವೆಲ್ ಎಂದು ಗುರುತಿಸಲಾಗಿದೆ. ಮೃತದೇಹವನ್ನು ಜಿವ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸೋಮವಾರ ಬೆಳಗ್ಗೆ 11 ಗಂಟೆಯ ಸುಮಾರಿಗೆ ಇಸ್ರೇಲ್ ನ ಉತ್ತರದ ಗಲಿಲಿ ಪ್ರದೇಶದಲ್ಲಿ ಮೊಶಾವ್ ಎಂಬ ತೋಟಕ್ಕೆ ಕ್ಷಿಪಣಿ ಅಪ್ಪಳಿಸಿತು ಎಂದು ರಕ್ಷಣಾ ಸೇವೆಗಳ ವಕ್ತಾರ ಮ್ಯಾಗೆನ್ ಡೇವಿಡ್ ಆಡಮ್ (ಎಂಡಿಎ) ಝಕಿ ಹೆಲ್ಲರ್ ಪಿಟಿಐಗೆ ತಿಳಿಸಿದ್ದಾರೆ.

ಈ ಕ್ಷಿಪಣಿ ದಾಳಿಯಿಂದ ಇತರ ಇಬ್ಬರು ಕೇರಳಿಗರಾದ ಬುಷ್ ಜೋಸೆಫ್ ಜಾರ್ಜ್ ಮತ್ತು ಪಾಲ್ ಮೆಲ್ವಿನ್ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಗಂಭೀರ ಗಾಯಗೊಂಡಿದ್ದ ಜಾರ್ಜ್ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿದ್ದಾರೆ.

ಸಣ್ಣಪುಟ್ಟ ಗಾಯಗೊಂಡ ಮೆಲ್ವಿನ್ ಅವರನ್ನು ಉತ್ತರ ಇಸ್ರೇಲ್ ನ ಸಫೆಡ್ ನ ಜಿವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರು ಕೇರಳದ ಇಡುಕ್ಕಿ ಜಿಲ್ಲೆಯವರು ಎಂದು ಗುರುತಿಸಲಾಗಿದೆ.

ಮ್ಯಾಕ್ಸ್ವೆಲ್ ಅವರು ಎರಡು ತಿಂಗಳ ಹಿಂದೆಯಷ್ಟೇ ಉದ್ಯೋಗ ಅರಸಿ ಇಸ್ರೇಲ್ ಗೆ ಹೋಗಿದ್ದರು. ಆದರೆ ದುರಾದೃಷ್ಟವಶಾತ್ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ. ಇದೀಗ ಮ್ಯಾಕ್ಸ್ವೆಲ್ ಅವರು ಪತ್ನಿ ಹಾಗೂ 5 ವರ್ಷದ ಮಗಳನ್ನು ಅಗಲಿದ್ದಾರೆ. ಜೊತೆಗೆ ಇವರ ಪತ್ನಿ 7 ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ.

ಕ್ಷಿಪಣಿ ದಾಳಿಯಲ್ಲಿ ಕೇರಳದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿಇಸ್ರೇಲ್ ನ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಭಾರತೀಯರಿಗೆ ಕೇಂದ್ರ ಸರ್ಕಾರ ಸಲಹೆ ನೀಡಿದೆ. ಇಸ್ರೇಲಿ ಅಧಿಕಾರಿಗಳು ನಮ್ಮ ಎಲ್ಲಾ ಪ್ರಜೆಗಳ ಸುರಕ್ಷತೆಯನ್ನು ಖಾತ್ರಿಪಡಿಸಬೇಕು ಎಂದು ಇಸ್ರೇಲ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ