ಚುನಾವಣಾ ಮತಚೀಟಿಯಲ್ಲಿ ಮತದಾರರ ಮಾನಹರಾಜು: ವೆಂಕಪ್ಪ, ಪಂಕಪ್ಪ ಆಯಿತು, ಲಿಲ್ಲಿ, ಅಲ್ಲಿ ಅಪಾಯ ಎಂದಾಯ್ತು! - Mahanayaka

ಚುನಾವಣಾ ಮತಚೀಟಿಯಲ್ಲಿ ಮತದಾರರ ಮಾನಹರಾಜು: ವೆಂಕಪ್ಪ, ಪಂಕಪ್ಪ ಆಯಿತು, ಲಿಲ್ಲಿ, ಅಲ್ಲಿ ಅಪಾಯ ಎಂದಾಯ್ತು!

venkappa
28/04/2024


Provided by

ಮಂಗಳೂರು: ಲೋಕಸಭಾ ಚುನಾವಣಾ ಮತ ಚೀಟಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವರ ಹೆಸರನ್ನು ತಪ್ಪು ತಪ್ಪಾಗಿ ಬರೆದಿದ್ದಲ್ಲದೇ, ಮಾನ ಹಾನಿ ಮಾಡುವ ಮಟ್ಟಕ್ಕೆ ಅಕ್ಷರ ತಪ್ಪುಗಳನ್ನು ಮಾಡಲಾಗಿದೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ಫೋಟೋಗಳು ವೈರಲ್ ಆಗುತ್ತಿವೆ.

ವೆಂಕಪ್ಪ ಎಂಬ ಹೆಸರಿನ ವ್ಯಕ್ತಿಯ ಹೆಸರನ್ನು ‘ಪಂಕಪ್ಪ’ ಎಂದು ಬರೆಯಲಾಗಿದ್ದು, ಇದು ತುಳು ಭಾಷೆಯಲ್ಲಿ ಅಶ್ಲೀಲ ಅರ್ಥವನ್ನು ನೀಡುತ್ತದೆ. ಇದು ವ್ಯಕ್ತಿಗಳ ಮಾನ ಹರಾಜು ಮಾಡುವಂತಹ ಕೃತ್ಯವಾಗಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.

ಇನ್ನೂ ಅಬ್ದುಲ್ ಹಾಜಿ ಎನ್ನುವವರ ಹೆಸರನ್ನು ‘ಅಬ್ದುಲ್ ನಾಯಿ’ ಎಂದು ಮತ ಚೀಟಿಯಲ್ಲಿ ಬರೆಯಲಾಗಿದ್ದು, ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅವಮಾನಿಸಲೆಂದೇ ಹೀಗೆ ಬರೆದಿದ್ದಾರೆಯೇ? ಎಂದು ಪ್ರಶ್ನಿಸುವಂತಾಗಿದೆ.

ಇನ್ನೂ ಲಿಲ್ಲಿ ಎಂಬವರ ಹೆಸರನ್ನು ‘ಅಲ್ಲಿ ಅಪಾಯ’ ಎಂದು ಬರೆದಿರುವ ಬಗ್ಗೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೆಸರುಗಳನ್ನು ಬರೆಯುವ ವೇಳೆ ಇಷ್ಟೊಂದು ತಪ್ಪುಗಳು ಆಗಲು ಹೇಗೆ ಸಾಧ್ಯ. ‘ಅಬ್ದುಲ್ ನಾಯಿ’ ಎಂದು ಬರೆಯಲಾಗಿರುವ ಹೆಸರಿನಲ್ಲಿ, ಜನರಿಗೆ ‘ನಾಯಿ’ ಎಂಬ ಹೆಸರು ಇರಲು ಸಾಧ್ಯವೇ ಎನ್ನುವ ಕನಿಷ್ಠ ಜ್ಞಾನವಿಲ್ಲದ ಸಿಬ್ಬಂದಿ ಚುನಾವಣಾ ಕೆಲಸ ಕಾರ್ಯಗಳಿಗೆ ಹೇಗೆ ನೇಮಕಗೊಂಡರು ಎನ್ನುವುದೇ ಅಚ್ಚರಿಯ ಸಂಗತಿಯಾಗಿದೆ.

ಈ ಬಗ್ಗೆ ತಕ್ಷಣವೇ ಸಂಬಂಧ ಪಟ್ಟ ಇಲಾಖೆ ಸತ್ಯಾಸತ್ಯತೆಯನ್ನು ಪರಿಶೀಲನೆ ನಡೆಸಿ, ತನಿಖೆ ನಡೆಸಬೇಕಿದೆ ಎನ್ನುವ ಒತ್ತಾಯಗಳು ಕೂಡ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ