ಮೈತ್ರಿ ಬಗ್ಗೆ ವದಂತಿ ಹಬ್ಬಿಸಿದವರಿಗೆ ಮಾಯಾವತಿ ಖಡಕ್ ಸಂದೇಶ!

ಉತ್ತರಪ್ರದೇಶ: 2024ರ ಲೋಕಸಭಾ ಚುನಾವಣೆಯಲ್ಲಿ ಬಹುಜನ ಸಮಾಜ ಪಾರ್ಟಿ ಯಾವುದೇ ಪಕ್ಷಗಳ ಜೊತೆಗೆ ಮೈತ್ರಿ ಮಾಡಿಕೊಳ್ಳದೇ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಬಿಎಸ್ ಪಿ ವರಿಷ್ಠೆ ಮಾಯಾವತಿ ಪುನರುಚ್ಚರಿಸಿದ್ದಾರೆ.
ಬಿಎಸ್ ಪಿಯನ್ನು ಇಂಡಿಯಾ ಒಕ್ಕೂಟದೊಳಗೆ ಸೇರಿಸಿಕೊಳ್ಳಲು ಹಲವು ನಾಯಕರು ಪ್ರಯತ್ನಿಸುತ್ತಿರುವ ನಡುವೆ, ಎಲ್ಲ ರಾಜಕೀಯ ಪಕ್ಷಗಳಿಗೆ ಸ್ಪಷ್ಟ ಸಂದೇಶ ನೀಡಿರುವ ಮಾಯಾವತಿ, ಯಾವುದೇ ಪಕ್ಷಗಳೊಂದಿಗೆ ಬಿಎಸ್ ಪಿ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಬಿಎಸ್ ಪಿ ಪದೇ ಪದೇ ಸ್ಪಷ್ಟಪಡಿಸುತ್ತಿದ್ದರೂ, ಪ್ರತಿದಿನ ಮೈತ್ರಿ ಬಗ್ಗೆ ವದಂತಿ ಹಬ್ಬಿಸುತ್ತಿರುವುದು ಬಿಎಸ್ ಪಿ ಇಲ್ಲದೆ ಕೆಲವು ಪಕ್ಷಗಳು ಇಲ್ಲಿ ನಡೆಯುತ್ತಿಲ್ಲ ಎಂಬುದನ್ನು ಸಾಬೀತುಪಡಿಸುತ್ತದೆ. ಆದರೆ ಬಿಎಸ್ ಪಿಗೆ ಜನರ ಅಗತ್ಯವಿದೆ ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.
ಬಡವರು, ಶೋಷಿತರು ಮತ್ತು ನಿರ್ಲಕ್ಷಿತರ ಹಿತಾಸಕ್ತಿ ಮತ್ತು ಕಲ್ಯಾಣವನ್ನು ಗಮನದಲ್ಲಿಟ್ಟುಕೊಂಡು, ದೇಶಾದ್ಯಂತ ತನ್ನ ಜನರ ಹಿತದೃಷ್ಟಿಯಿಂದ ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಬಿಎಸ್ ಪಿ ಸ್ಪಷ್ಟಪಡಿಸಿದ್ದು, ಜನರು ವದಂತಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.