ಮೆಡಿಕಲ್ ಶಾಪ್ ಮಾಲೀಕನ ಭೀಕರ ಹತ್ಯೆ: ನಡು ರಸ್ತೆಯಲ್ಲೇ ಭೀಕರ ಕೃತ್ಯ
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೌಡಿಗಳ ಅಟ್ಟಹಾಸ ಮುಂದುವರಿದಿದ್ದು, ಮಡಿವಾಳದ ಅಂಡರ್ ಪಾಸ್ ಸಮೀಪ ನಡು ರಸ್ತೆಯಲ್ಲೇ ಮೆಡಿಕಲ್ ಶಾಪ್ ಮಾಲೀಕನೊಬ್ಬನನ್ನು ಜನರ ಎದುರಲ್ಲೇ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಮಂಗಮ್ಮನ ಪಾಳ್ಯ ನಿವಾಸಿ ಸುಹೇಲ್ ಕೊಲೆಯಾದ ದುರ್ದೈವಿ. ಈ ಕೃತ್ಯ ಹಳೆ ದ್ವೇಷ ಹಾಗೂ ಪ್ರತೀಕಾರದ (ರಿವೇಂಜ್) ಹಿನ್ನೆಲೆಯಲ್ಲಿ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ಮಡಿವಾಳ ಅಂಡರ್ ಪಾಸ್ ಸಮೀಪ (ಕೊರಮಂಗಲ ಕಡೆಗೆ ಹೋಗುವ ರಸ್ತೆ) ಬಳಿ ಈ ಕೃತ್ಯ ನಡೆದಿದೆ. ಮೃತ ವ್ಯಕ್ತಿಯನ್ನು ಸುಹೇಲ್ ಎಂದು ಗುರುತಿಸಲಾಗಿದ್ದು, ಇವರು ಬೊಮ್ಮನಹಳ್ಳಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದರು, ಇವರಿಗೆ ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲ ಎಂದು ತಿಳಿದು ಬಂದಿದೆ.
ಟ್ರಾಫಿಕ್ ಜಾಮ್ ನಲ್ಲಿ ಬೈಕ್ ನಿಂತಿದ್ದಾಗ ತಲ್ವಾರ್ ಗಳಿಂದ ಭೀಕರ ದಾಳಿ ನಡೆಸಲಾಗಿದೆ. ಯಾವುದೋ ಪ್ರತಿಕಾರದ ಹಿನ್ನೆಲೆ ಈ ಕೃತ್ಯ ನಡೆಸಲಾಗಿದೆ ಎಂದು ಶಂಕಿಸಲಾಗಿದೆ.
ಘಟನೆಯ ವಿವರ:
ಬೊಮ್ಮನಹಳ್ಳಿಯಲ್ಲಿ ಮೆಡಿಕಲ್ ಶಾಪ್ ನಡೆಸುತ್ತಿದ್ದ ಸುಹೇಲ್, ರಾತ್ರಿ ಸುಮಾರು 10 ಗಂಟೆಯ ವೇಳೆಗೆ ತಮ್ಮ ಹಾರ್ಲೆ ಡೇವಿಡ್ ಸನ್ ಬೈಕ್ ನಲ್ಲಿ ಮಡಿವಾಳದಿಂದ ಕೊರಮಂಗಲ ಕಡೆಗೆ ಹೊರಟಿದ್ದರು. ಮಡಿವಾಳ ಮುಖ್ಯ ರಸ್ತೆಯ ಅಂಡರ್ ಪಾಸ್ ಬಳಿ ಟ್ರಾಫಿಕ್ ಜಾಮ್ ನಲ್ಲಿ ಬೈಕ್ ನಿಲ್ಲಿಸಿಕೊಂಡಿದ್ದಾಗ, ಎರಡು ಬೈಕ್ ಗಳಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಜನರ ಎದುರಲ್ಲೇ ಎರಡೆರಡು ತಲ್ವಾರ್ ಗಳಿಂದ ಅವರ ಮೇಲೆ ಭೀಕರವಾಗಿ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ಸುಹೇಲ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದು, ಹಂತಕರು ಮಾರಕಾಸ್ತ್ರಗಳನ್ನು ಸ್ಥಳದಲ್ಲೇ ಬಿಸಾಕಿ ಪರಾರಿಯಾಗಿದ್ದಾರೆ.
ಹಳೆ ಕೊಲೆಗೆ ಪ್ರತೀಕಾರವೇ?
ಕಳೆದ ಜನವರಿ 13ರಂದು ಬಂಡೆಪಾಳ್ಯದಲ್ಲಿ ನಡೆದಿದ್ದ ಶಬ್ಬೀರ್ ಕೊಲೆ ಪ್ರಕರಣದಲ್ಲಿ ಮೃತ ಸುಹೇಲ್ ಅವರ ಸಹೋದರರಾದ ಖಲೀಂ ಮತ್ತು ನಜೀರ್ ಭಾಗಿಯಾಗಿದ್ದರು ಎನ್ನಲಾಗಿದೆ. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ಹಂತಕರು ಕಳೆದ ಕೆಲ ದಿನಗಳಿಂದ ಸುಹೇಲ್ ಅವರ ಚಲನವಲನಗಳ ಮೇಲೆ ಕಣ್ಣಿಟ್ಟು, ಪಕ್ಕಾ ಪ್ಲಾನ್ ಮಾಡಿ ಈ ಹತ್ಯೆ ಎಸಗಿದ್ದಾರೆ ಎನ್ನಲಾಗಿದೆ. ಮೃತ ಸುಹೇಲ್ ಗೆ ಶಬ್ಬೀರ್ ಕೊಲೆ ಪ್ರಕರಣದಲ್ಲಾಗಲಿ ಅಥವಾ ಯಾವುದೇ ಕ್ರಿಮಿನಲ್ ಚಟುವಟಿಕೆಗಳಲ್ಲಾಗಲಿ ಯಾವುದೇ ರೀತಿಯ ಸಂಬಂಧವಿರಲಿಲ್ಲ. ಸಹೋದರರ ಮೇಲಿನ ವೈಷಮ್ಯಕ್ಕೆ ಅಮಾಯಕ ಸುಹೇಲ್ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ.
ಘಟನಾ ಸ್ಥಳಕ್ಕೆ ಡಿಸಿಪಿ ಸುಜಿತಾ, ಸಿಸಿಬಿ ಡಿಸಿಪಿ ಹರಿಬಾಬು ಹಾಗೂ ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನತ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು 3 ವಿಶೇಷ ತಂಡಗಳನ್ನು ರಚಿಸಿದ್ದಾರೆ. ಸದ್ಯ ಘಟನಾ ಸ್ಥಳ ಹಾಗೂ ಸುತ್ತಮುತ್ತಲಿನ ಏರಿಯಾಗಳ ಸಿಸಿಟಿವಿ ಡಿವಿಆರ್ (DVR) ವಶಕ್ಕೆ ಪಡೆಯಲಾಗಿದ್ದು, ಹಂತಕರ ಸುಳಿವಿಗಾಗಿ ಪರಿಶೀಲಿಸಲಾಗುತ್ತಿದೆ.
ಸುಹೇಲ್ ಮೆಡಿಕಲ್ ಶಾಪ್ ಬೊಮ್ಮನಹಳ್ಳಿಯಲ್ಲಿದ್ದರೂ ಕೊನೆಯ ಕ್ಷಣದಲ್ಲಿ ಮಡಿವಾಳದ ಕಡೆಗೆ ಬಂದಿದ್ದೇಕೆ ಮತ್ತು ಕೊನೆಯದಾಗಿ ಅವರ ಮೊಬೈಲ್ ಗೆ ಯಾರಿಂದ ಕರೆ ಬಂದಿತ್ತೇ? ಎಂಬ ವಿವರಗಳನ್ನು ಪೊಲೀಸರು ಕಲೆಹಾಕುತ್ತಿದ್ದಾರೆ. ಪೊಲೀಸರ ತನಿಖೆಯಿಂದ ನಿಖರ ಮಾಹಿತಿಗಳು ಲಭ್ಯವಾಗಬೇಕಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























