ಮೇಕೆದಾಟು ಯೋಜನೆ: ಆಗದ ಮರ ಎಣಿಕೆ- ಸಭೆಗೇ ಕರೀತಿಲ್ಲ ಎಂದು ಹನೂರು ಶಾಸಕ ಆಕ್ರೋಶ
ಚಾಮರಾಜನಗರ: ನಿತ್ಯ ಕಾವೇರಿ ಸಂಕಷ್ಟ ಎದುರಿಸುತ್ತಿರುವ ಈ ಹೊತ್ತಿನಲ್ಲಿ ಮೇಕೆದಾಟು ಯೋಜನೆ ರೂಪುರೇಷೆ ಸಿದ್ಧಪಡಿಲು ಸರ್ಕಾರ ನೀಡಿದ್ದ ಆದೇಶಕ್ಕೆ ಅರಣ್ಯ ಇಲಾಖೆ ಕವಡೆ ಕಾಸಿನ ಕಿಮ್ಮತ್ತು ಕೊಡದೇ ದಿವ್ಯ ನಿರ್ಲಕ್ಷ್ಯ ವಹಿಸಿರುವ ಆರೋಪ ಕೇಳಿಬಂದಿದೆ.
ಹೌದು…, ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಮೇಕೆದಾಟು ಪ್ರದೇಶ ಬರಲಿದ್ದು ಹನೂರು ತಾಲೂಕಿನ ಶಾಗ್ಯ ಗ್ರಾಮದಿಂದ 19 ಕಿಮೀ ದೂರದಲ್ಲಿ ಕಾವೇರಿ ವಿಶಾಲವಾಗಿ ಹರಿಯುತ್ತಿದ್ದಾಳೆ. ಮೇಕೆದಾಟು ಯೋಜನೆಯಾದರೆ ಕುಡಿಯುವ ನೀರಿಗೆ ಮುಂದಿನ ದಿನಗಳಲ್ಲಿ ತೊಂದರೆಯಾಗುವುದಿಲ್ಲವೆಂದು ರೂಪುರೇಷೆ ಸಿದ್ಧಪಡಿಸಲು ಕಳೆದ ಕಳೆದ ಸೆ.7 ರಂದು 29 ಮಂದಿ ಉಪ ವಲಯ ಅರಣ್ಯಾಧಿಕಾರಿಗಳನ್ನು ಸರ್ಕಾರ ಮರಗಳ ಎಣಿಕೆ ಮಾಡಲು ನೇಮಕ ಮಾಡಿ ಆದೇಶ ನೀಡಿತ್ತು.
ಆದರೆ, ಆದೇಶಿಸಿ 3 ತಿಂಗಳಾದರೂ ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಯಾವುದೇ ಮರಗಳ ಎಣಿಕೆ ನಡೆಯದಿಲ್ಲ. ಯೋಜನೆ ಅನುಷ್ಠಾನವಾದರೆ ಎಷ್ಟು ಪ್ರದೇಶ ಮುಳುಗಡೆಯಾಗಲಿದೆ, ಎಷ್ಟು ಮರಗಳು ನೀರಿನಲ್ಲಿ ಅಪೋಷನ ಆಗಲಿದೆ ಎಂಬ ಅಂದಾಜಿಗೆ ಮತ್ತು ಹಸಿರು ನ್ಯಾಯಾಧೀಕರಣಕ್ಕೆ ಮಾಹಿತಿ ನೀಡಲು ಈ ಮರಗಳ ಎಣಿಕೆ ಅಗತ್ಯವಾಗಿದೆ.ಆದರೆ, ಅರಣ್ಯ ಇಲಾಖೆ ಮರಗಳ ಎಣಿಕೆ ನಡೆಸದೇ ದಿವ್ಯ ನಿರ್ಲಕ್ಷ್ಯ ತೋರಿದೆ ಎಂಬ ಆರೋಪ ಕೇಳಿಬಂದಿದೆ.
ನೇಮಕ ಮಾಡಿದ್ದ ಅಧಿಕಾರಿಗಳು ಕೆಲವರು ವರ್ಗಾವಣೆಯೂ ಆಗಿದ್ದು ಸರ್ಕಾರದ ಆದೇಶಕ್ಕೆ ಅರಣ್ಯ ಇಲಾಖೆ ಬೆಲೆ ಕೊಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಸಂಪರ್ಕಕ್ಕೆ ಸಿಗದ ಅಧಿಕಾರಿಗಳು:
ಇನ್ನು, ಮರಗಳ ಎಣಿಕೆ ಸಂಬಂಧ ಕಾವೇರಿ ವನ್ಯಜೀವಿಧಾಮದ ಡಿಸಿಎಫ್ ಹಾಗೂ ಚಾಮರಾಜನಗರ ಸಿಸಿಎಫ್ ಅವರನ್ನು ಸಾಕಷ್ಟು ಬಾರಿ ಸಂಪರ್ಕಿಸಿತರಾದರೂ ಸಂಪರ್ಕಕ್ಕೆ ಸಿಗಲಿಲ್ಲ. ಒಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದರೂ ಅರಣ್ಯ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರಿರುವುದು ವಿಪರ್ಯಾಸವೇ ಆಗಿದೆ.
ಸಭೆಗೆ ಕರಿತಿಲ್ಲ ಎಂದ್ರು ಶಾಸಕರು:
ಬಹುನಿರೀಕ್ಷಿತ ಮೇಕೆದಾಟು ಯೋಜನೆ ಸಂಬಂಧ ಹನೂರು ಜೆಡಿಎಸ್ ಶಾಸಕ ಎಂ.ಆರ್.ಮಂಜುನಾಥ್, ಡಿಸಿಎಂ ಡಿಕೆಶಿ ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಮೇಕೆದಾಟು ಯೋಜನೆಗಾಗಿ ಡಿ.ಕೆ.ಶಿವಕುಮಾರ್ ಅವರು ಪಾದಯಾತ್ರೆ ಮಾಡಿದ್ದರು, ತಮ್ಮದೇ ಸರ್ಕಾರ ಅಸ್ತಿತ್ವದಲ್ಲಿದ್ದರೂ ಕಾಮಗಾರಿ ಚುರುಕು ಪಡೆಯುತ್ತಿಲ್ಲ,
ಕಾಮಗಾರಿ ವ್ಯಾಪ್ತಿಯ ಮರ ಎಣಿಕೆ ನಡೆಸಿ ವರದಿ ಸಲ್ಲಿಸುವಂತೆ 29 ಉಪ ವಲಯ ಅರಣ್ಯಾಧಿಕಾರಿಗಳನ್ನು ಸರ್ಕಾರ ನೇಮಕ ಮಾಡಿತ್ತು ಮರ ಎಣಿಕೆ ಯಾಕೆ ಆಗ್ತಿಲ್ಲ ಅಂತ ಡಿಸಿಎಂ ಡಿಕೆಶಿ ಅವರನ್ನೇ ಕೇಳಬೇಕು, ಮೇಕೆದಾಟು ಯೋಜನೆ ವ್ಯಾಪ್ತಿಗೆ ಹನೂರು ತಾಲ್ಲೂಕಿನ ಪ್ರದೇಶ ಬಳಕೆಯಾಗುತ್ತೆ, ಆ ಭೂಮಿಯಲ್ಲಿ ಯಾವುದೇ ಬೆಳೆ ಬೆಳೆಯುವುದಿಲ್ಲ, ಹೀಗಾಗಿ ಅದನ್ನ ಯೋಜನೆಗೆ ಬಳಸಿಕೊಳ್ಳಬಹುದು, ಈ ಸಂಬಂಧ ಯಾವ ಸಭೆಗೂ ನಮ್ಮನ್ನು ಕರೆದಿಲ್ಲ, ನಮ್ಮ ಸಲಹೆ ಕೇಳಿಲ್ಲ, ಮಾಹಿತಿ ಇಲ್ಲದೆ ಹೇಗೆ ಮಾತಾಡಲಿ? ಅವರನ್ನೇ ಕೇಳಿ ಎಂದು ಡಿಕೆಶಿ ವಿರುದ್ಧ ಬೇಸರ ಹೊರಹಾಕಿದರು.




























