ರೈಲಿನಲ್ಲಿ ಮಹಿಳಾ ಕೋಚ್ ಗೆ ನುಗ್ಗುವ ಪುರುಷರೇ ಎಚ್ಚರ! : ಜೂನ್ 20 ರಿಂದ ಹೊಸ ನಿಯಮ ಜಾರಿ!
ನವದೆಹಲಿ: ಭಾರತೀಯ ರೈಲ್ವೆಯಲ್ಲಿ (Indian Railways) ಪ್ರಯಾಣಿಸುವ ಪುರುಷ ಪ್ರಯಾಣಿಕರೇ ಇನ್ಮುಂದೆ ಎಚ್ಚರ ತಪ್ಪಿ ಮಹಿಳಾ ಕೋಚ್ ಗಳಿಗೆ ಪ್ರವೇಶಿಸಿದರೆ ನಿಮ್ಮ ಜೇಬಿಗೆ ಭಾರಿ ಕತ್ತರಿ ಬೀಳಲಿದೆ. ಹೌದು, ರೈಲುಗಳಲ್ಲಿ ಮಹಿಳಾ ಪ್ರಯಾಣಿಕರ ಸುರಕ್ಷತೆ ಮತ್ತು ನೆಮ್ಮದಿಯ ಪ್ರಯಾಣವನ್ನು ಖಚಿತಪಡಿಸಲು ರೈಲ್ವೆ ಇಲಾಖೆಯು ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಿದ್ದು, ಭಾರಿ ಮೊತ್ತದ ದಂಡವನ್ನು ವಿಧಿಸಲು ನಿರ್ಧರಿಸಿದೆ.
ಹೊಸ ನಿಯಮಗಳ ಪ್ರಕಾರ, ಮಹಿಳೆಯರಿಗಾಗಿ ಕಾಯ್ದಿರಿಸಿದ ಬೋಗಿಗಳಲ್ಲಿ (Ladies Compartment/Coach) ಅಕ್ರಮವಾಗಿ ಪ್ರಯಾಣಿಸುವ ಪುರುಷ ಪ್ರಯಾಣಿಕರಿಗೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನು ಬರೋಬ್ಬರಿ ಐದು ಪಟ್ಟು ಹೆಚ್ಚಿಸಲಾಗಿದೆ.
‘ಜನ್ ವಿಶ್ವಾಸ್ ಕಾಯ್ದೆ 2026’ರ ಅಡಿಯಲ್ಲಿ ರೈಲ್ವೆ ಕಾಯ್ದೆಯ ಸೆಕ್ಷನ್ 162 ಕ್ಕೆ ತಿದ್ದುಪಡಿ ತರಲಾಗಿದ್ದು, ಈ ಹಿಂದೆ ಇದ್ದ 500 ರೂಪಾಯಿ ದಂಡವನ್ನು ಈಗ 2,500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೊಸ ನಿಯಮವು 2026ರ ಜೂನ್ 20 ರಿಂದಲೇ ದೇಶಾದ್ಯಂತ ಜಾರಿಗೆ ಬಂದಿದೆ.
ಮಹಿಳಾ ಬೋಗಿ, ಸೀಟು ಅಥವಾ ಬರ್ತ್ ಗಳನ್ನು ಅಕ್ರಮವಾಗಿ ಆಕ್ರಮಿಸಿಕೊಂಡರೆ 2,500 ರೂ. ದಂಡದ ಜೊತೆಗೆ, ಅವರ ಪ್ರಯಾಣದ ಟಿಕೆಟ್ ಅಥವಾ ಪಾಸ್ ಅನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತದೆ. ಅಷ್ಟೇ ಅಲ್ಲದೆ, ರೈಲ್ವೆ ಸಿಬ್ಬಂದಿ ಅಂತಹ ಪ್ರಯಾಣಿಕರನ್ನು ರೈಲಿನಿಂದ ಕೆಳಗೆ ಇಳಿಸುವ ಅಧಿಕಾರವನ್ನೂ ಹೊಂದಿದ್ದಾರೆ.
ಒಂದು ವೇಳೆ ತಪ್ಪು ಮಾಡಿದ ಪುರುಷ ಪ್ರಯಾಣಿಕ ಸ್ಥಳದಲ್ಲೇ ದಂಡ ಪಾವತಿಸಲು ನಿರಾಕರಿಸಿದರೆ, ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುತ್ತದೆ. ಕೋರ್ಟ್ನಲ್ಲಿ ತಪ್ಪು ಸಾಬೀತಾದರೆ ದಂಡದ ಮೊತ್ತ 5,000 ರೂಪಾಯಿಗಳವರೆಗೆ ಹೆಚ್ಚಾಗಬಹುದು (ಯಾವುದೇ ವಿಶೇಷ ಕಾರಣಗಳಿಲ್ಲದಿದ್ದರೆ ಕನಿಷ್ಠ 2,500 ರೂ. ದಂಡ ಕಡ್ಡಾಯ).
ರೈಲ್ವೆ ಇಲಾಖೆಯ ಅಧಿಕೃತ ಪ್ರಕಟಣೆಯ ಪ್ರಕಾರ, ತೃತೀಯ ಲಿಂಗಿಗಳ ಹಕ್ಕುಗಳ ರಕ್ಷಣೆ ಕಾಯ್ದೆ 2019ರ ಅಡಿಯಲ್ಲಿ ಬರುವ ಯಾವುದೇ ತೃತೀಯ ಲಿಂಗಿ (Transgender) ವ್ಯಕ್ತಿಗಳ ವಿರುದ್ಧ ಈ ಸೆಕ್ಷನ್ ಅಡಿಯಲ್ಲಿ ಯಾವುದೇ ಕಾನೂನು ಕ್ರಮ ಜರುಗಿಸುವಂತಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಮಹಿಳಾ ಪ್ರಯಾಣಿಕರ ಸುರಕ್ಷತೆಗಾಗಿ ರೈಲ್ವೆ ರಕ್ಷಣಾ ಪಡೆ (RPF) ನಿರಂತರವಾಗಿ ವಿಶೇಷ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದು, ಪುರುಷ ಪ್ರಯಾಣಿಕರು ಅನಗತ್ಯ ದಂಡ ಮತ್ತು ಕಾನೂನು ಕ್ರಮಗಳಿಂದ ಬಚಾವಾಗಲು ಮಹಿಳಾ ಬೋಗಿಗಳಿಂದ ದೂರವಿರಲು ರೈಲ್ವೆ ಇಲಾಖೆ ಮನವಿ ಮಾಡಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD



























