ರಾಜ್ಯದ ಜನತೆಗೆ ಸಿಹಿ ಸುದ್ದಿ: ಈ ಬಾರಿ ಅಧಿಕ ಮಳೆ ಸುರಿಯಲಿದೆ

ಬೆಂಗಳೂರು: ರಾಜ್ಯದಲ್ಲಿ ಬರಪರಿಸ್ಥಿತಿ ತಲೆದೋರಿದೆ. ಆದ್ರೆ ಇದೀಗ ರಾಜ್ಯದ ಜನತೆಗೆ ಸಂತಸದ ಸುದ್ದಿಯೊಂದನ್ನು ಹವಾಮಾನ ಇಲಾಖೆ ನೀಡಿದೆ. ಮುಂಗಾರು ಮಳೆಯ ಮುನ್ಸೂಚನೆ ಪ್ರಕಾರ, ಈ ಬಾರಿ ಸಾಮಾನ್ಯಕ್ಕಿಂತ ಅಧಿಕ ಮಳೆಯಾಗಲಿದೆ. ಈ ವಿವರವನ್ನು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹಂಚಿಕೊಂಡಿದೆ.
ಕರ್ನಾಟಕದಲ್ಲಿ ಮುಂಗಾರು 2024 ಆರಂಭ ವಾಡಿಕೆಯಂತೆ ಜೂನ್ ತಿಂಗಳಲ್ಲೇ ಆಗಲಿದ್ದು, ಸೆಪ್ಟೆಂಬರ್ ತನಕವೂ ಇರಲಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಈ ಬಗ್ಗೆ ಮಾಹಿತಿ ಹಂಚಿಕೊಂಡಿದೆ.
ರಾಜ್ಯದಲ್ಲಿ ಮುಂಗಾರು ಮಳೆ:
ರಾಜ್ಯಕ್ಕೆ ಮುಂಗಾರು (ಜೂನ್–ಸೆಪ್ಟೆಂಬರ್) ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 85.2 ಸೆ.ಮೀ ರಷ್ಟಿದೆ. ದೀರ್ಘಾಕಾಲಿನ ಮುಂಗಾರು ಮಳೆ ಮುನ್ಸೂಚನೆ — 2024 ಅನ್ವಯ, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತಾ ಹೆಚ್ಚು ಮಳೆಯಾಗುವ ಸಾಧ್ಯತೆಗಳಿದೆ.
ರಾಜ್ಯದ ದೀರ್ಘಾವಧಿ ಸರಾಸರಿ ವಾಡಿಕೆ ಮಳೆ ಜೂನ್ ನಲ್ಲಿ 19.9 ಸೆಂ.ಮೀ, ಜುಲೈನಲ್ಲಿ 27.1 ಸೆಂ.ಮೀ, ಆಗಸ್ಟ್‌ನಲ್ಲಿ 22 ಸೆಂ.ಮೀ ಹಾಗೂ ಸೆಪ್ಟೆಂಬರ್‌ನಲ್ಲಿ 16.1 ಸೆಂ.ಮೀ ನಷ್ಟಿದ್ದು ಒಟ್ಟಾರೆ ರಾಜ್ಯಕ್ಕೆ ಮುಂಗಾರು ಹಂಗಾಮಿನಲ್ಲಿ 85.2 ಸೆಂ.ಮೀ ನಷ್ಟಿದೆ. ರಾಜ್ಯದ ವಾರ್ಷಿಕ ಮಳೆಯ ಶೇಕಡ 74 ಕೊಡುಗೆ ಮುಂಗಾರು ಅವಧಿಯಲ್ಲಿ ಸಿಗುತ್ತದೆ. ಇದು 115.3 ಸೆಂ.ಮೀ. ಈ ಬಾರಿ ಹೆಚ್ಚಿನ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ.
ಭಾರತದಲ್ಲಿ ಮುಂಗಾರು ಮಳೆ :
ಭಾರತದಲ್ಲಿ ಈ ಬಾರಿ ಮುಂಗಾರು ಮಳೆ ಸಾಮಾನ್ಯಕ್ಕಿಂತ ಹೆಚ್ಚು ಇರಲಿದೆ. ಭಾರತೀಯ ಹವಾಮಾನ ಇಲಾಖೆ ಸೋಮವಾರ (ಏಪ್ರಿಲ್ 15) ಬಿಡುಗಡೆ ಮಾಡಿದ ಮುಂಗಾರು ಮಳೆ ಮುನ್ಸೂಚನೆ ವರದಿ ಪ್ರಕಾರ, ದೇಶದ ದೀರ್ಘಾವಧಿ (1971-2020) ಸರಾಸರಿ ವಾಡಿಕೆ ಮಳೆ ಪ್ರಮಾಣ 87 ಸೆಂಟಿ ಮೀಟರ್ ನಷ್ಟಿದೆ. ಈ ಬಾರಿ ಇದು ಹೆಚ್ಚಾಗುವ ನಿರೀಕ್ಷೆ ಇದೆ. ಅಂದರೆ, 2024ರ ಮುಂಗಾರು (ಜೂನ್ ಸೆಪ್ಟೆಂಬರ್) ಅವಧಿಯಲ್ಲಿ ದೇಶದಾದ್ಯಂತ ದೀರ್ಘಾವಧಿ ಸರಾಸರಿ ಮಳೆ ಪ್ರಮಾಣದಲ್ಲಿ ಶೇಕಡ 5 ಹೆಚ್ಚು ಅಥವಾ ಕಡಿಮೆಯ ಲೆಕ್ಕಾಚಾರದಲ್ಲಿ ವಾಡಿಕೆಗಿಂತ ಹೆಚ್ಚು ಅಂದರೆ ಶೇಕಡಾ 106 ರಷ್ಟು ಮಳೆಯಾಗುವ ಸಾಧ್ಯತೆಗಳಿದೆ.
ನಮ್ಮತುಮಕೂರಿನ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8123382149 ಸಂಖ್ಯೆಯನ್ನು ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/G7IPvItJj7JHrybOIW3296