ಮೂಡುಬಿದಿರೆ: ಕೌಟುಂಬಿಕ ಕಲಹ ಹಿನ್ನೆಲೆ ಯುವಕ ಆತ್ಮಹತ್ಯೆಗೆ ಶರಣು
ಮೂಡುಬಿದಿರೆ: ತಾಲೂಕಿನ ಬೆಳುವಾಯಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಣಿಲ್ ಎಂಬಲ್ಲಿ ಯುವಕನೋರ್ವ ತನ್ನ ಸಹೋದರಿಗೆ ವೀಡಿಯೊ ಕರೆ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಬೆಳ್ತಂಗಡಿ ತಾಲೂಕಿನ ಕಾಜೂರು ಮೂಲದ ಅಬುಸಾಲಿ ಇಸ್ಮಾಯಿಲ್ ಎಂಬವರ ಪುತ್ರ ಸಯ್ಯದ್ ಅನ್ವರ್ (25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದಾರೆ.
ಬೆಳುವಾಯಿಯ ಬಾಡಿಗೆ ಮನೆಯೊಂದರಲ್ಲಿ ಪತ್ನಿ ಹಾಗೂ ಎರಡು ವರ್ಷದ ಮಗುವಿನೊಂದಿಗೆ ವಾಸವಾಗಿದ್ದ ಅನ್ವರ್ ಮತ್ತು ಅವರ ಪತ್ನಿ ನಡುವೆ ಆಗಾಗ ಜಗಳವಾಗುತ್ತಿತ್ತು. ಈ ಸಂಬಂಧ ಹಿಂದೆ ಪೊಲೀಸ್ ಠಾಣೆಗೂ ದೂರು ನೀಡಲಾಗಿತ್ತು. ವೃತ್ತಿಯಲ್ಲಿ ಮೀನಿನ ಟೆಂಪೋ ಚಾಲಕನಾಗಿದ್ದ ಅನ್ವರ್ ಕಳೆದ ಕೆಲವು ಸಮಯದಿಂದ ಕೆಲಸವಿಲ್ಲದೆ ಮನೆಯಲ್ಲಿದ್ದು, ಒಂದೆರಡು ದಿನಗಳ ಹಿಂದಷ್ಟೇ ಬೆಂಗಳೂರಿಗೆ ಹೋಗಿ ಬಂದಿದ್ದರು.
ಗುರುವಾರ ಪತಿ–ಪತ್ನಿ ನಡುವೆ ಮತ್ತೆ ಮನಸ್ತಾಪ ಉಂಟಾಗಿ, ಪತ್ನಿ ಮಗುವಿನೊಂದಿಗೆ ತವರು ಮನೆಗೆ ತೆರಳಿದ್ದರು. ಇದರಿಂದ ತೀವ್ರ ಮನನೊಂದ ಅನ್ವರ್, ಪತ್ನಿ ಮನೆಯವರ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತನ್ನ ಅಕ್ಕನಿಗೆ ವೀಡಿಯೊ ಕರೆ ಮಾಡಿ ಹೇಳಿದ್ದಾರೆ. ಆತಂಕಗೊಂಡ ಕುಟುಂಬಸ್ಥರು ತಕ್ಷಣವೇ ಬೆಳುವಾಯಿಯ ಬಾಡಿಗೆ ಮನೆಗೆ ಓಡಿಬಂದಾಗ, ಅನ್ವರ್ ಈಗಾಗಲೇ ಜೀವತ್ಯಾಗ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD


























