ದಿನಕ್ಕೆ 100 ಕಿ.ಮೀ ಸೈಕಲ್ ತುಳಿಯುತ್ತಿದ್ದ ಡೆಲಿವರಿ ಬಾಯ್ ಇಂದು ಕೋಟ್ಯಧಿಪತಿ ಬರಹಗಾರ: ಅಪಘಾತದ ನಂತರ ಬದಲಾಯಿತು ಅಜಿತ್ ಕುಮಾರ್ ಜೀವನ! - Mahanayaka

ದಿನಕ್ಕೆ 100 ಕಿ.ಮೀ ಸೈಕಲ್ ತುಳಿಯುತ್ತಿದ್ದ ಡೆಲಿವರಿ ಬಾಯ್ ಇಂದು ಕೋಟ್ಯಧಿಪತಿ ಬರಹಗಾರ: ಅಪಘಾತದ ನಂತರ ಬದಲಾಯಿತು ಅಜಿತ್ ಕುಮಾರ್ ಜೀವನ!

ajit kumar
30/07/2026

ಫರೀದಾಬಾದ್ / ರಾಂಪುರ:  ಜೀವನದಲ್ಲಿ ಎದುರಾಗುವ ಸಂಕಷ್ಟಗಳು ಮತ್ತು ಹಿನ್ನಡೆಗಳು ಕೆಲವೊಮ್ಮೆ ಹೊಸ ಬಾಗಿಲುಗಳನ್ನು ತೆರೆಯುತ್ತವೆ ಎಂಬುದಕ್ಕೆ ಉತ್ತರ ಪ್ರದೇಶದ ರಾಂಪುರ ಮೂಲದ ಅಜಿತ್ ಕುಮಾರ್ ಅವರ ಜೀವನವೇ ಸಾಕ್ಷಿ. ಒಂದು ಕಾಲದಲ್ಲಿ ಕುಟುಂಬದ ಸಾಲ ತೀರಿಸಲು ದಿನಕ್ಕೆ 100 ಕಿಲೋಮೀಟರ್‌ ಗಿಂತಲೂ ಹೆಚ್ಚು ಸೈಕಲ್ ತುಳಿಯುತ್ತಾ ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ, ಇಂದು ಶ್ರೇಷ್ಠ ಆಡಿಯೋ ಸರಣಿಗಳನ್ನು ರಚಿಸಿ ₹1 ಕೋಟಿಗೂ ಹೆಚ್ಚು ಆದಾಯ ಗಳಿಸಿದ ಯಶಸ್ವಿ ಬರಹಗಾರನಾಗಿ ಹೊರಹೊಮ್ಮಿದ್ದಾರೆ.

ಅಜಿತ್ ಕುಮಾರ್ ಅವರಿಗೆ ವೈದ್ಯಕೀಯ (ಮೆಡಿಕಲ್) ಶಿಕ್ಷಣ ಪೂರ್ಣಗೊಳಿಸುವ ಕನಸಿತ್ತು. ಆದರೆ, ಕೋವಿಡ್–19 ಸಾಂಕ್ರಾಮಿಕ ರೋಗದ ಅವಧಿಯಲ್ಲಿ ಕುಟುಂಬದ ಆರ್ಥಿಕ ಪರಿಸ್ಥಿತಿ ತೀವ್ರವಾಗಿ ಹದಗೆಟ್ಟಿತು. ಸುಮಾರು ₹7 ಲಕ್ಷ ಸಾಲದ ಹೊರೆ ಹೊತ್ತಿದ್ದ ಕುಟುಂಬವನ್ನು ಆಸರೆಯಾಗಿ ನೂಕಲು ಅಜಿತ್ ತಮ್ಮ ಓದನ್ನು ಮಧ್ಯದಲ್ಲೇ ನಿಲ್ಲಿಸಬೇಕಾಯಿತು.

ಕುಟುಂಬಕ್ಕೆ ನೆರವಾಗಲು ಫರೀದಾಬಾದ್‌ನಲ್ಲಿ ಸ್ವಿಗ್ಗಿ (Swiggy) ಡೆಲಿವರಿ ಪಾರ್ಟ್ನರ್ ಆಗಿ ಕೆಲಸಕ್ಕೆ ಸೇರಿಕೊಂಡರು. ಪ್ರತಿದಿನ ಸುಮಾರು 16 ಗಂಟೆಗಳ ಕಾಲ ಶ್ರಮಿಸುತ್ತಾ, ದಿನಕ್ಕೆ 100 ಕಿ.ಮೀ ನಷ್ಟು ಸೈಕಲ್ ಚಲಾಯಿಸಿ ಕುಟುಂಬದ ಸಾಲವನ್ನು ತೀರಿಸಲು ಶ್ರಮಿಸುತ್ತಿದ್ದರು.

ಜೀವನದ ಗತಿಯನ್ನೇ ಬದಲಿಸಿದ ರಸ್ತೆ ಅಪಘಾತ:

ಪರಿಸ್ಥಿತಿ ಹೀಗಿರುವಾಗಲೇ ಅಜಿತ್ ಅವರಿಗೆ ಭೀಕರ ರಸ್ತೆ ಅಪಘಾತವಾಯಿತು. ಹಲವು ಮೂಳೆ ಮುರಿತಕ್ಕೊಳಗಾದ ಅವರು ತಿಂಗಳುಗಟ್ಟಲೆ ಹಾಸಿಗೆ ಹಿಡಿಯಬೇಕಾಯಿತು. ಡೆಲಿವರಿ ಕೆಲಸವೂ ನಿಂತುಹೋಗಿ, ಆದಾಯವಿಲ್ಲದೆ ಸಾಲದ ಹೊರೆ ಮತ್ತಷ್ಟು ಹೆಚ್ಚಾಯಿತು.

ಆದರೆ, ಈ ಕಷ್ಟದ ಸಮಯದಲ್ಲಿ ಧೈರ್ಯಗೆಡದ ಅಜಿತ್, ಮನೆಯಲ್ಲೇ ಕುಳಿತು ಮಾಡಬಹುದಾದ (Work from Home) ಕೆಲಸಗಳಿಗಾಗಿ ಹುಡುಕಾಟ ನಡೆಸಿದರು. ಈ ವೇಳೆ ಅವರಿಗೆ ಪಾಕೆಟ್ ಎಫ್‌ ಎಮ್ (Pocket FM) ನ ಬರವಣಿಗೆಯ ಅವಕಾಶ ಕಂಡುಬಂತು. ಬರವಣಿಗೆಯನ್ನು ಎಂದಿಗೂ ವೃತ್ತಿಯಾಗಿ ಸ್ವೀಕರಿಸದಿದ್ದರೂ, ಒಮ್ಮೆ ಪ್ರಯತ್ನಿಸಲು ನಿರ್ಧರಿಸಿದರು.

ಆಸ್ಪತ್ರೆಯ ಹಾಸಿಗೆಯಲ್ಲೇ ಕುಳಿತು ಕಥೆಗಳನ್ನು ಬರೆಯಲು ಪ್ರಾರಂಭಿಸಿದ ಅಜಿತ್, ದಿನಕ್ಕೆ ಹಲವು ಸಂಚಿಕೆಗಳನ್ನು (Episodes) ಪೂರ್ಣಗೊಳಿಸುತ್ತಿದ್ದರು. ಮೂರೇ ತಿಂಗಳಲ್ಲಿ ಅವರು ಬರೆದ ಕಥೆಯೊಂದು ಪಾಕೆಟ್ ಎಫ್‌ ಎಮ್ ಬರವಣಿಗೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಬಿತ್ತಿಕೊಂಡಿತು.

ಮೊದಲ ಆದಾಯ:

ಅವರಿಗೆ ಬಂದ ಮೊದಲ ₹20,000 ಸಂಭಾವನೆಯನ್ನು ನೇರವಾಗಿ ತಮ್ಮ ತಾಯಿಗೆ ನೀಡಿದರು.  ಮುಂದಿನ ತಿಂಗಳು ₹52,000 ಗಳಿಸಿದ ಅವರು, ಕಥೆಗಳ ಜನಪ್ರಿಯತೆ ಹೆಚ್ಚಿದಂತೆ ತಿಂಗಳಿಗೆ ₹6.29 ಲಕ್ಷದವರೆಗೂ ಆದಾಯ ಗಳಿಸಲು ತೊಡಗಿದರು. ಪ್ರಸ್ತುತ ಅಜಿತ್ ಕುಮಾರ್, ಪಾಕೆಟ್ ಎಫ್‌ ಎಮ್‌ ನ ಬ್ಲಾಕ್‌ ಬಸ್ಟರ್ ಆಡಿಯೋ ಸರಣಿಯಾದ ‘ಬ್ರಹ್ಮಯೋಧ: ದಿ ಡಿಸ್ಟ್ರಾಯರ್’ (Brahmyodha: The Destroyer) ನ ಮುಖ್ಯ ಬರಹಗಾರರಾಗಿದ್ದಾರೆ. ಈ ಸರಣಿಯ 1,000 ಕ್ಕೂ ಹೆಚ್ಚು ಸಂಚಿಕೆಗಳನ್ನು ಅವರು ಬರೆದಿದ್ದಾರೆ.  ಈ ಸರಣಿಯು 16.8 ಕೋಟಿಗೂ ಹೆಚ್ಚು ಬಾರಿಗೆ (Plays) ಶ್ರೋತೃಗಳಿಂದ ಕೇಳಲ್ಪಟ್ಟಿದೆ. ಅವರ ಈ ಸಾಧನೆಯನ್ನು ಗುರುತಿಸಿ ಪ್ರಸಿದ್ಧ ಜೈಪುರ ಸಾಹಿತ್ಯ ಉತ್ಸವ (Jaipur Literature Festival) ದಲ್ಲಿ ಮಾತನಾಡಲು ಆಹ್ವಾನಿಸಲಾಗಿತ್ತು.

ಅಜಿತ್ ಕುಮಾರ್ ಅವರ ಈ ಪಯಣವು ಯುವಜನತೆ ಮತ್ತು ವಿದ್ಯಾರ್ಥಿಗಳಿಗೆ ದೊಡ್ಡ ಪಾಠವಾಗಿದೆ. ಜೀವನದ ಹಾದಿ ಯಾವಾಗಲೂ ಅಂದುಕೊಂಡಂತೆ ಸರಳವಾಗಿರುವುದಿಲ್ಲ. ಆದರೆ, ಎದುರಾಗುವ ಸಂಕಷ್ಟಗಳಿಗೆ ಹೆದರದೆ ಹೊಸ ಕೌಶಲ್ಯಗಳನ್ನು ಕಲಿಯುವ ಮನೋಭಾವವಿದ್ದರೆ, ಕತ್ತಲೆಯ ಹಾದಿಯಲ್ಲೂ ಯಶಸ್ಸಿನ ಬೆಳಕನ್ನು ಕಾಣಬಹುದು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ