ಪ್ರವೇಶಾವಕಾಶ ಸಿಗದಿದ್ದಕ್ಕೆ IIT ಕಾನಪುರ, ಮದ್ರಾಸ್ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದ ವಿದ್ಯಾರ್ಥಿ!
ಐಐಟಿ ಕಾನಪುರ (IIT-Kanpur) ನೂತನವಾಗಿ ಆರಂಭಿಸಿರುವ ‘ಬ್ಯಾಚುಲರ್ ಆಫ್ ಸೈಬರ್ ಸೆಕ್ಯೂರಿಟಿ’ ಕೋರ್ಸ್ಗೆ ಪ್ರವೇಶಾವಕಾಶ ಸಿಗಲಿಲ್ಲವೆಂಬ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ಐಐಟಿ ಕಾನಪುರ ಹಾಗೂ ಐಐಟಿ ಮದ್ರಾಸ್ ನ ಅಧಿಕೃತ ವೆಬ್ಸೈಟ್ಗಳನ್ನು ಹ್ಯಾಕ್ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ವೇದಿಕೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡ ವಿದ್ಯಾರ್ಥಿಯು, ವೆಬ್ ಸೈಟ್ ನಲ್ಲಿ “ಸೈಟ್ ಹ್ಯಾಕ್ ಆಗಿದೆ. ನನಗೆ ಬೇಕಿರುವುದು ಕೇವಲ ಒಂದು ನ್ಯಾಯಯುತ ಅವಕಾಶ ಮಾತ್ರ” ಎಂಬ ಸಂದೇಶವನ್ನು ಬರೆದಿದ್ದನು.
ಸೈಬರ್ ಸೆಕ್ಯೂರಿಟಿ ಕೋರ್ಸ್ಗೆ ಅರ್ಜಿ ಸಲ್ಲಿಸಿ, ಶುಲ್ಕ ಪಾವತಿಸಿ, ದಾಖಲೆಗಳು ಹಾಗೂ ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ತನ್ನ ಕೆಲಸದ ಪುರಾವೆಗಳನ್ನು ಸಲ್ಲಿಸಿದ್ದರೂ, ಪ್ರವೇಶ ಪ್ರಕ್ರಿಯೆಯ ಭಾಗವಾಗಿದ್ದ ಹ್ಯಾಕಥಾನ್ ಗೆ ತನ್ನನ್ನು ಶಾರ್ಟ್ಲಿಸ್ಟ್ ಮಾಡಿರಲಿಲ್ಲ ಎಂದು ವಿದ್ಯಾರ್ಥಿ ಆರೋಪಿಸಿದ್ದಾನೆ.
ತಾನು ವೆಬ್ ಸೈಟ್ ಹ್ಯಾಕ್ ಮಾಡಿರುವುದಾಗಿ X (ಟ್ವಿಟರ್) ಹಾಗೂ Reddit ನಲ್ಲಿ ಸ್ಕ್ರೀನ್ ಶಾಟ್ ಗಳನ್ನು ಹಂಚಿಕೊಂಡಿದ್ದ ಈತ, ಸಂಸ್ಥೆಗೆ ಹಾನಿ ಮಾಡುವುದು ತನ್ನ ಉದ್ದೇಶವಾಗಿರಲಿಲ್ಲ, ಬದಲಿಗೆ ತನ್ನ ತಾಂತ್ರಿಕ ಸಾಮರ್ಥ್ಯವನ್ನು ಸಾಬೀತುಪಡಿಸಲು ಹೀಗೆ ಮಾಡಿದ್ದಾಗಿ ಹೇಳಿಕೊಂಡಿದ್ದಾನೆ.
ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಪೂರ್ವಾಪರ ಅನುಭವದ ಕೊರತೆ ಇದ್ದಿದ್ದರಿಂದ ವಿದ್ಯಾರ್ಥಿಯನ್ನು ಶಾರ್ಟ್ಲಿಸ್ಟ್ ಮಾಡಲಾಗಿರಲಿಲ್ಲ ಎಂದು ಐಐಟಿ–ಕಾನಪುರದ ನಿರ್ದೇಶಕ ಮಣೀಂದ್ರ ಅಗರ್ವಾಲ್ ತಿಳಿಸಿದ್ದಾರೆ.
ಆರಂಭದಲ್ಲಿ ಪೊಲೀಸ್ ದೂರು (FIR) ದಾಖಲಿಸಲು ಐಐಟಿ ಆಡಳಿತ ಮಂಡಳಿ ಚಿಂತಿಸಿತ್ತಾದರೂ, ನಂತರ ವಿದ್ಯಾರ್ಥಿಯ ಮೇಲೆ ಕಾನೂನು ಕ್ರಮ ಕೈಗೊಳ್ಳುವ ಬದಲಿಗೆ ಆತನ ತಾಂತ್ರಿಕ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡಲು ನಿರ್ಧರಿಸಿದೆ.
“ಈ ವರ್ಷದ ಪ್ರವೇಶ ಪ್ರಕ್ರಿಯೆ ಈಗಾಗಲೇ ಮುಗಿದಿದೆ, ಆದ್ದರಿಂದ ಈಗ ತಕ್ಷಣ ಪ್ರವೇಶ ನೀಡಲು ಸಾಧ್ಯವಿಲ್ಲ. ಆದರೆ ವಿದ್ಯಾರ್ಥಿಯನ್ನು ಸಂಸ್ಥೆಗೆ ಆಹ್ವಾನಿಸಿ, ಸರಿಯಾದ ಪರೀಕ್ಷೆಯ ಮೂಲಕ ಆತನ ತಾಂತ್ರಿಕ ಕೌಶಲ್ಯಗಳನ್ನು ಮೌಲ್ಯಮಾಪನ ಮಾಡುತ್ತೇವೆ. ಆತ ಸಮರ್ಥನೆಂದು ಸಾಬೀತಾದರೆ, ಮುಂದಿನ ಬಾರಿ ಅವಕಾಶ ನೀಡಲಾಗುವುದು.”
— ಮಣೀಂದ್ರ ಅಗರ್ವಾಲ್, ನಿರ್ದೇಶಕರು, ಐಐಟಿ ಕಾನಪುರ
ಅಲ್ಲದೆ, ಯಾವುದೇ ಗಣಕಯಂತ್ರ ವ್ಯವಸ್ಥೆಗೆ ಅನಧಿಕೃತವಾಗಿ ಪ್ರವೇಶಿಸುವುದು ಕಾನೂನುಬಾಹಿರ ಹಾಗೂ ಅಪರಾಧ ಎಂಬುದನ್ನು ಹಿರಿಯ ಪ್ರಾಧ್ಯಾಪಕರು ಮತ್ತು ಎಂಜಿನಿಯರ್ ಗಳ ತಂಡವು ವಿದ್ಯಾರ್ಥಿಗೆ ತಿಳಿಸಿ ಕೌನ್ಸೆಲಿಂಗ್ ನಡೆಸಲಿದೆ.
ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿನ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುವ ಪರಂಪರೆಯನ್ನು ಐಐಟಿ ಕಾನಪುರ ಹೊಂದಿದೆ. ಈ ಹಿಂದೆ ಸಿಬಿಎಸ್ ಇ (CBSE) ಆನ್ಲೈನ್ ಪೋರ್ಟಲ್ ನಲ್ಲಿ ನ್ಯೂನತೆಗಳನ್ನು ಪತ್ತೆಹಚ್ಚಿದ್ದ ಯುವಕನೊಬ್ಬನಿಗೆ ತನ್ನ C3iHub ನಲ್ಲಿ ಉದ್ಯೋಗಾವಕಾಶ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD


























