ಅತ್ಯಾಚಾರವಾಗುವುದನ್ನು ಆನಂದಿಸುವ ಹೆಣ್ಣುಮಕ್ಕಳು, ಗುಂಡು ಹಾರಿಸಲು ಆದೇಶ ನೀಡುತ್ತಿದ್ದೆ: ಬಲಪಂಥೀಯ ವಿಶ್ಲೇಷಕನಿಂದ ಅಸಹ್ಯ ಹೇಳಿಕೆ - Mahanayaka

ಅತ್ಯಾಚಾರವಾಗುವುದನ್ನು ಆನಂದಿಸುವ ಹೆಣ್ಣುಮಕ್ಕಳು, ಗುಂಡು ಹಾರಿಸಲು ಆದೇಶ ನೀಡುತ್ತಿದ್ದೆ: ಬಲಪಂಥೀಯ ವಿಶ್ಲೇಷಕನಿಂದ ಅಸಹ್ಯ ಹೇಳಿಕೆ

TG Mohandas.jpg
29/07/2026

ತಿರುವನಂತಪುರಂ: ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಅತ್ಯಂತ ಆಕ್ಷೇಪಾರ್ಹ ಹಾಗೂ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಬಲಪಂಥೀಯ ರಾಜಕೀಯ ವಿಶ್ಲೇಷಕ ಟಿ.ಜಿ. ಮೋಹನ್ದಾಸ್ ವಿರುದ್ಧ ಕೇರಳ ಪೊಲೀಸರ ಸೈಬರ್ ಕ್ರೈಮ್ ವಿಭಾಗ ಪ್ರಕರಣ ದಾಖಲಿಸಿದೆ.

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆಯನ್ನು ಉದ್ದೇಶಿಸಿ ತಮ್ಮ ‘ಪಾತ್ರಿಕಾ’ ಯೂಟ್ಯೂಬ್ ಚಾನೆಲ್ನಲ್ಲಿ ಹಂಚಿಕೊಂಡಿದ್ದ ವೀಡಿಯೊದಲ್ಲಿ ಅವರು ಈ ಹೇಳಿಕೆ ನೀಡಿದ್ದರು.

ಯೂಟ್ಯೂಬ್ ವೀಡಿಯೊದಲ್ಲಿ ಮಾತನಾಡಿದ್ದ ಮೋಹನ್ ದಾಸ್, ದೆಹಲಿಯ ವಿದ್ಯಾರ್ಥಿಗಳ ಪ್ರತಿಭಟನೆಯು ಸಾಮೂಹಿಕ ಅತ್ಯಾಚಾರದಂತಹ ಘಟನೆಗಳಿಗೆ ದಾರಿ ಮಾಡಿಕೊಡಬಹುದು ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸುವವರಿಗೆ ಅತ್ಯಾಚಾರ ಎಂದರೆ ಇಷ್ಟ, ಅತ್ಯಾಚಾರವಾಗುವುದನ್ನು ಆನಂದಿಸುವ ಹೆಣ್ಣುಮಕ್ಕಳು ಅಲ್ಲಿದ್ದಾರೆ ಎಂದು ಹೇಳಿದ್ದರು.

ಅಷ್ಟೇ ಅಲ್ಲದೆ ತಮ್ಮ ಬಳಿ ಅಧಿಕಾರವಿದ್ದರೆ ಕರ್ಫ್ಯೂ ಹೇರಿ, ಪ್ರತಿಭಟನಾಕಾರರು ಚದುರದೆ ಹೋದರೆ ಅವರ ಮೇಲೆ ನೇರವಾಗಿ ಗುಂಡು ಹಾರಿಸಲು ಆದೇಶ ನೀಡುತ್ತಿದ್ದೆ ಎಂದೂ ಅವರು ಪ್ರತಿಪಾದಿಸಿದ್ದರು.

ಈ ವೀಡಿಯೊಗಳು ಸಾರ್ವಜನಿಕ ಶಾಂತಿ ಕದಡುವ ಮತ್ತು ಪ್ರತಿಭಟನಾ ನಿರತರಲ್ಲಿ ಭಯ ವಾತಾವರಣ ಸೃಷ್ಟಿಸುವ ಉದ್ದೇಶ ಹೊಂದಿದ್ದವು ಎಂದು ಆರೋಪಿಸಿ ಸೈಬರ್ ಪೊಲೀಸರಿಗೆ ದೂರು ನೀಡಲಾಗಿತ್ತು. ದೂರಿನ ಆಧಾರದ ಮೇಲೆ ತಿರುವನಂತಪುರಂ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಾರತೀಯ ನ್ಯಾಯ ಸಂಹಿತೆ (BNS), ಮಾಹಿತಿ ತಂತ್ರಜ್ಞಾನ ಕಾಯ್ದೆ ಮತ್ತು ಕೇರಳ ಪೊಲೀಸ್ ಕಾಯ್ದೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ತನಿಖೆ ಆರಂಭಿಸಲಾಗಿದೆ.

ಜುಲೈ 24 ಮತ್ತು 25 ರಂದು ಹಂಚಿಕೊಳ್ಳಲಾದ ಈ ವೀಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ