ಕಾವೇರಿ ಸಂಕಷ್ಟ: ಸುಗ್ರೀವಾಜ್ಞೆ ತಂದು ನೀರು ಬಂದ್ ಮಾಡುವ ಕಾಲ ಮಿಂಚಿಹೋಗಿದೆ: ಸಚಿವ ದಿನೇಶ್ ಗುಂಡೂರಾವ್
ಚಾಮರಾಜನಗರ: ಸುಗ್ರೀವಾಜ್ಞೆ ತಂದು ನೀರು ಬಂದ್ ಮಾಡುವ ಕಾಲ ಮಿಂಚಿಹೋಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕುರಟ್ಟಿ ಹೊಸೂರು ಗ್ರಾಮದಲ್ಲಿ ಮಾಧ್ಯಮವರೊಟ್ಟಿಗೆ ಅವರು ಮಾತನಾಡಿ, ಸುಗ್ರಿವಾಜ್ಞೆ ತರುವ ಕಾಲವೆಲ್ಲಾ ಮಿಂಚಿಹೋಗಿದೆ. ಕಾನೂನು ಪಾಸ್ ಮಾಡಿದ್ರೂ ಒಂದೇ-ಇಲ್ಲದಿದ್ದರೂ ಒಂದೇ, ಈಗ ನಮ್ಮ ಜನರ ಹಕ್ಕಿಗಾಗಿ ಯಾವ ರೀತಿ ಹೋರಾಟ ಮಾಡಬೇಕೆಂದು ಎಲ್ಲರೂ ಕುಳಿತು ಇಂದು ಚರ್ಚೆ ಮಾಡುತ್ತೇವೆ ಎಂದರು.
ಇಂದು ಸಂಜೆ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದ್ದು ಕಾವೇರಿ ಸಂಕಷ್ಟದ ಸಂಬಂಧ ಚರ್ಚೆ ಆಗಲಿದೆ, ರಾಜ್ಯದ ರೈತರ ಹಿತವನ್ನು ಕಾಪಾಡುವ ತೀರ್ಮಾನವನ್ನು ತೆಗೆದುಕೊಳ್ಳುತ್ತೇವೆ ಎಂದು ಭರವಸೆ ಕೊಟ್ಟರು.
ಕಾವೇರಿ ಹಳೇ ಮೈಸೂರು ಭಾಗದ ಜೀವನಾಡಿಯಾಗಿದ್ದು ಕೃಷಿ, ನೀರಾವರಿ, ಕುಡಿಯುವ ನೀರಿನ ಮೇಲೆ ಅವಲಂಬಿತರಾಗಿದ್ದೇವೆ. ಕಾವೇರಿ ನೀರು ಇಲ್ಲದಿದ್ದರೇ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಲಿದೆ, ಜೀವ ಉಳಿಯಲು ನೀರು ಬೇಕೆ ಬೇಕು, ರಾಜ್ಯದ ಜನರ ಹಿತ ಕಾಯುವ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದರು. ಇದೇ ವೇಳೆ, ಇಂಡಿಯಾ ಒಕ್ಕೂಟಕ್ಕಾಗಿ ನೀರನ್ನು ಹರಿಸಲಾಗುತ್ತಿದೆ ಎಂಬ ಆರೋಪವನ್ನು ನಿರಾಕರಿಸಿದರು.
ಮೈತ್ರಿ ಆಗಿದ್ದಾಗ ತೊಂದರೆ ಆಗಿತ್ತು:
ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವ ಸಂಬಂಧ ಮಾತನಾಡಿ, ನಾವು ಕಳೆದ ಬಾರಿ ಮೈತ್ರಿ ಮಾಡಿಕೊಂಡು ಸಾಕಷ್ಟು ತೊಂದರೆಯಾಯಿತು, ಈ ಬಾರಿ ಯಾವುದೇ ಮೈತ್ರಿಯಿಲ್ಲ, ನಾವು ಖುಷಿಯಾಗಿದ್ದೇವೆ, ಅವರು ಮೈತ್ರಿ ಮಾಡಿಕೊಳ್ಳುತ್ತಿರುವುದು ಒಳ್ಳೆಯದೊ-ಕೆಟ್ಟದೋ ಅವರಿಗೆ ಬಿಟ್ಟಿದ್ದು ನಮಗೆ ಈ ಬಾರಿ ಚುನಾವಣೆಯಲ್ಲಿ ಒಳ್ಳೆಯದಾಗಲಿದೆ ಎಂದರು.