ಔರಾದ್ ಮಳೆ ಹಾನಿ ಪ್ರದೇಶಕ್ಕೆ ಸಂಸದ ಖಂಡ್ರೆ ಭೇಟಿ: ಪರಿಶೀಲನೆ - Mahanayaka
7:04 PM Wednesday 27 - August 2025

ಔರಾದ್ ಮಳೆ ಹಾನಿ ಪ್ರದೇಶಕ್ಕೆ ಸಂಸದ ಖಂಡ್ರೆ ಭೇಟಿ: ಪರಿಶೀಲನೆ

bedar
06/09/2024


Provided by

ಔರಾದ್: ತಾಲೂಕಿನಲ್ಲಿ ಕಳೆದ ಮೂರನಾಲ್ಕು ದಿನಗಳಿಂದ ಸುರಿದ ಮಳೆಗೆ ಹಾನಿಗೊಳಗಾದ ಪ್ರದೇಶಗಳಿಗೆ ಗುರುವಾರ ಸಂಸದ ಸಾಗರ ಖಂಡ್ರೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತಾಲೂಕಿನ ಬಾಚೆಪಳ್ಳಿ, ನಾಗೂರ (ಬಿ), ಮಸ್ಕಲ್, ಜೋಜನಾ, ಗುಡಪಳ್ಳಿ, ಮೆಡಪಳ್ಳಿ, ಕೊಳ್ಳುರ್, ಎಕಲಾರ, ತುಳಜಾಪೂರ, ಬೋರಾಳ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ವೀಕ್ಷಣೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಾಗರ ಖಂಡ್ರೆ, ತಾಲೂಕಿನಲ್ಲಿ ಮಾಂಜ್ರಾ ನದಿಯ ಬಳಿಯ ಜಮೀನಿನ ಬೆಳೆಗಳು ಹೆಚ್ಚು ಹಾನಿಗೊಳಗಾಗಿವೆ. ಅಲ್ಲದೇ ಕೆಲ ತಗ್ಗು ಪ್ರದೇಶದಲ್ಲಿ ನೀರು ಸಂಗ್ರವಾಗಿದ್ದು ಬೆಳೆ ನಾಶವಾಗಲಿವೆ ಇವುಗಳ ಸಮೀಕ್ಷೆ ಮಾಡಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲೂಕಿನ ಕೆಲ ಗ್ರಾಮಗಳಲ್ಲಿ ಟ್ರಾನ್ಸ್‌ಫಾರ್ಮರ್‌ಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಅನೇಕ ಗ್ರಾಮಗಳಲ್ಲಿ ಮನೆಗಳು ಬಿದ್ದಿವೆ. ತಾಲೂಕಿನಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ ಇವುಗಳ ಸಮಗ್ರ ವರದಿಯನ್ನು ನನಗೆ ಹಾಗೂ ಇಲಾಖೆಯ ಮೇಲಾಧಿಕಾರಿಗಳಿಗೆ ಸಲ್ಲಿಸುವಂತೆ ಸ್ಥಳದಲ್ಲಿರುವ ಅಧಿಕಾರಿಗಳಿಗೆ ಸೂಚಿಸಿದರು.

ಮಹಾರಾಷ್ಟ್ರದಲ್ಲಿಯೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾದ ಕಾರಣ ಮಾಂಜ್ರಾ ನದಿಗೆ ಇನ್ನೂ ಹೆಚ್ಚಿನ ನೀರು ಬರಬಹುದು. ಆದ್ದರಿಂದ ನದಿಯಂಚಿನ ಗ್ರಾಮಗಳ ಬಗ್ಗೆ ಎಚ್ಚರ ವಹಿಸಿ. ಅಲ್ಲದೇ ಜಮೀನುಗಳಿಗೆ ನದಿಯಲ್ಲಿ ಈಜಾಡಿಕೊಂಡು ಹೋಗದಂತೆ ಜಾಗೃತಿ ಮಾಡಿಸಬೇಕು ಎಂದು ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ ಅವರಿಗೆ ಸೂಚಿಸಿದರು.

ಸತತ ನಾಲ್ಕು ದಿನಗಳ ಕಾಲ ಸುರಿದ ಮಳೆಯಿಂದ ತಾಲೂಕಿನ ಅನೇಕ ಮನೆಗಳು ಕುಸಿದು ಬಿದ್ದಿವೆ. ಇವರಿಗೆ ಕೇವಲ 6 ಸಾವಿರದಷ್ಟು ಪರಿಹಾರ ನೀಡಲಾಗುತ್ತಿದೆ. ಇದರಿಂದ ಕುಸಿದ ಅಲ್ಪ ಪ್ರಮಾಣದ ಗೋಡೆಯೂ ಕಟ್ಟಲು ಸಾಧ್ಯವಿಲ್ಲ. ಅಲ್ಪ ಪ್ರಮಾಣದಲ್ಲಿ ಕುಸಿದ ಮನೆಗೆ 30 ಸಾವಿರ ಹಾಗೂ ಶೇ. 50 ಪ್ರತಿಶತ ಮನೆ ಕುಸಿದರೇ ಅವರಿಗೆ 1.5 ಲಕ್ಷ ರೂ ಪರಿಹಾರ ನೀಡುವಂತೆ ಗ್ರಾಮಸ್ಥರು ತಿಳಿಸಿದರು. ಇದಕ್ಕೆ ಸ್ಪಂದಿಸಿದ ಸಂಸದ ಖಂಡ್ರೆ ಜಿಲ್ಲಾಧಿಕಾರಿಗಳಿಗೆ ಮಾತನಾಡುವ ಮೂಲಕ ಪರಿಹಾರ ಹಣ ಹೆಚ್ಚಿಸಲಾಗುತ್ತದೆ ಎಂದು ಭರವಸೆ ನೀಡಿದರು.

ಪ್ರಮುಖರಾದ ಕಾಂಗ್ರೆಸ್ ಡಾ. ಭೀಮಸೇನರಾವ ಶಿಂಧೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ರಾಜಕುಮಾರ ಹಲಬರ್ಗೆ, ತಹಸೀಲ್ದಾರ ಮಲ್ಲಶೆಟ್ಟಿ ಚಿದ್ರೆ, ತಾಪಂ ಇಒ ಬಿರೇಂದ್ರಸಿಂಗ್ ಠಾಕೂರ್, ಶಿವಕುಮಾರ ಘಾಟೆ, ಎಇಇ ಸುಭಾಷ ದಾಲಗೊಂಡೆ, ಎಇಇ ವೆಂಕಟ ಶಿಂಧೆ, ಬಸವರಾಜ ದೇಶಮುಖ, ಸುಧಾಕಾರ ಕೊಳ್ಳುರ್, ಚನ್ನಬಸವ ಬಿರಾದಾರ್, ಲಾಧಾ ಗ್ರಾಪಂ ಅಧ್ಯಕ್ಷ ನಾಗಪ್ಪ ಮುಸ್ತಾಪೂರೆ, ಶಿವಶಂಕರ ಎಕಲಾರ, ಧನರಾಜ ಮುಸ್ತಾಪೂರ್, ರತ್ನದೀಪ ಕಸ್ತೂರೆ ಸೇರಿದಂತೆ ಅನೇಕರಿದ್ದರು.

ವರದಿ:ರವಿಕುಮಾರ ಶಿಂದೆ


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ